ನಿಜಾಂಶ ಹೊರಬರಲು ಶುರುವಾಗಿದ್ದಕ್ಕೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ; ಅಂಬೇಡ್ಕರ್ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ Amit Shah

Amit Shah
Published on

ನವದೆಹಲಿ: ಹಾಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್​. ಅಂಬೇಡ್ಕರ್​ ಅವರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಅಮಿತ್​ ಷಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿವೆ. ಇನ್ನೂ ತಮ್ಮ ಹೇಳಿಕೆಯ ಸ್ಪಷ್ಟನೆ ನೀಡಿರುವ ಅಮಿತ್​ ಷಾ (Amit Shah) ಅಂಬೇಡ್ಕರ್ ಅವರಿಗೆ ಎಂದಿಗೂ ಅವಮಾನ ಮಾಡದ ಪಕ್ಷದಿಂದ ನಾನು ಬಂದಿದ್ದೇನೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್​ ಷಾ (Amit Shah), ಅಂಬೇಡ್ಕರ್​ ಅವರ ಕುರಿತು ನಾನು ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿದ್ದು, ಅಂಬೇಡ್ಕರ್​ ಹಾಗೂ ಸಂವಿಧಾನದ ಮೌಲ್ಯಗಳಿಗೆ ಕಾಂಗ್ರೆಸ್​ ವಿರುದ್ಧವಾಗಿತ್ತು. ಸಮಾಜದಲ್ಲಿ ಗೊಂದಲ ಮೂಡಿಸಲು ಮತ್ತು ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಈ ಹಿಂದೆಯೂ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತಿರುಚಿತ್ತು ಎಂದು ಆರೋಪಿಸಿದ್ದಾರೆ.

ಅಂಬೇಡ್ಕರ್ ಅವರಿಗೆ ಎಂದಿಗೂ ಅವಮಾನ ಮಾಡದ ಪಕ್ಷದಿಂದ ನಾನು ಬಂದಿದ್ದೇನೆ. ಎನ್‌ಡಿಎ ಸರ್ಕಾರ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ ಬಗ್ಗೆ ಕೆಲ ಬಿಜೆಪಿ ನಾಯಕರು ಮಾತನಾಡುವುದರ ಜೊತೆಗೆ, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಹಾಗೂ ಮೀಸಲಾತಿ ವಿರೋಧಿ ಎನ್ನುವುದನ್ನು ವಾಸ್ತವಾಂಶಗಳೊಂದಿಗೆ ತಿಳಿಸಿದ್ದಕ್ಕೆ ಹೀಗಾಗಿದೆ ಎಂದು ಕಿಡಿಕಾರಿದ್ದಾರೆ.

ಯಾವಾಗ ನಿಜಾಂಶ ಹೊರಬರಲು ಶುರುವಾಯಿತೋ ಆಗಿನಿಂದಲೇ ಕಾಂಗ್ರೆಸ್​​ನವರು ಸತ್ಯವನ್ನು ತಿರುಚಿ ಜನರ ದಾರಿ ತಪ್ಪಿಸುವ ತನ್ನ ಹಳೆಯ ತಂತ್ರವನ್ನು ಉಪಯೋಗಿಸಿದೆ. ಸಾರ್ವಕರ್ ಅವರನ್ನು ಅವಮಾನಿಸಿರುವ ಇದೇ ಕಾಂಗ್ರೆಸ್‌, ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ (Amit Shah) ಆರೋಪಿಸಿದ್ದಾರೆ.

ಅಮಿತ್​ ಷಾ ಹೇಳಿದ್ದೇನು? 

ವಿಪಕ್ಷದವರಿಗೆ ಈಗ ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎಂದು ಹೇಳುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ದೇವರ ಹೆಸರನ್ನು ಹೇಳಿದ್ದರೆ ಸ್ವರ್ಗಕ್ಕೆ ಹೋಗಬಹುದಾಗಿತ್ತು. ಅಂಬೇಡ್ಕರ್ ಅವರ ಹೆಸರನ್ನು ಹೇಳಿದರೆ, ನಮಗೂ ಆನಂದವೇ. ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್ಸಿಗರ ನಿಲುವು ಏನು ಎನ್ನುವುದನ್ನು ನಾನು ಹೇಳುತ್ತೇನೆ. ಅಂಬೇಡ್ಕರ್ ಅವರು ದೇಶದ ಮೊದಲ ಕ್ಯಾಬಿನೆಟ್ ನಿಂದ ರಾಜೀನಾಮೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಚಾರ ಮತ್ತು ದೇಶದ ವಿದೇಶಾಂಗ ನೀತಿಯ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಬಿ.ಸಿ.ರಾಯ್ ಎನ್ನುವವರು ಪತ್ರವನ್ನು ಬರೆದು, ರಾಜಾಜಿ ಮತ್ತು ಅಂಬೇಡ್ಕರ್ ಅವರು ಕ್ಯಾಬಿನೆಟ್​​ನಿಂದ ಹೊರಬಂದರೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ್ದರು. ರಾಜಾಜಿ ಅವರಿಂದ ಸ್ವಲ್ಪ ತೊಂದರೆ ಆಗಬಹುದು, ಅಂಬೇಡ್ಕರ್ ಅವರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ನೆಹರೂ, ಬಿ. ಸಿ. ರಾಯ್​​ಗೆ ಹೇಳಿದ್ದರು ಎಂದು ಅಮಿತ್ ಷಾ, ರಾಜ್ಯಸಭೆಯಲ್ಲಿ ಸ್ಮರಿಸಿದ್ದರು. ಈ ಹೇಳಿಕೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net