ಕೋಲ್ಡ್​ವಾರ್​ಗೆ ಕೈಥಂಡಾ; ಹಿಡಿತದಲ್ಲಿರಿಸಿಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಛಲ

DK Param
Published on

ಬೆಂಗಳೂರು: ಪವರ್ ಶೇರಿಂಗ್ ಜತೆಯಲ್ಲೇ ‘ಒಬ್ಬರಿಗೆ ಒಂದೇ ಹುದ್ದೆ’ ವಿಚಾರವಾಗಿ ರಾಜ್ಯ ಕಾಂಗ್ರೆಸ್​ನಲ್ಲಿ ಆರಂಭವಾಗಿರುವ ತೆರೆಮರೆ ಕಲಹ ಇನ್ನಷ್ಟು ಬಿಗಡಾಯಿಸಿದೆ. ಬುಧವಾರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರಿಶಿಷ್ಟ ಜಾತಿ ಪಂಗಡದ ಸಚಿವರು, ಶಾಸಕರು, ಮುಖಂಡರ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದ ಬೆನ್ನಲ್ಲೇ ಪಕ್ಷದೊಳಗೆ ಒಂದಷ್ಟು ಅಸಮಾಧಾನ ಹೊರಹೊಮ್ಮಿದ್ದು, ಪರಸ್ಪರ ತೊಡೆತಟ್ಟಿಕೊಂಡ ಸದ್ದು ಪ್ರತಿಧ್ವನಿಸಿದೆ. ಈ ನಡುವೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರುವ ಹೈಕಮಾಂಡ್ ಸಮಸ್ಯೆ ಬಗೆಹರಿಸಲು ನಾವೇ ಬೆಂಗಳೂರಿಗೆ ಬರುವುದೋ ಅಥವಾ ರಾಜ್ಯದ ನಾಯಕರನ್ನೇ ದೆಹಲಿಗೆ ಕರೆಸಿಕೊಳ್ಳಬೇಕೋ ಎಂಬ ಬಗ್ಗೆ ಇಷ್ಟರಲ್ಲೇ ತಿಳಿಸುತ್ತೇವೆಂಬ ಸಂದೇಶವನ್ನು ರವಾನಿಸಿದೆ. ಬುಧವಾರದ ಡಿನ್ನರ್ ಮೀಟಿಂಗ್ ರದ್ದಾದ ಬೆನ್ನಲ್ಲೇ ಹೈಕಮಾಂಡ್ ಅನುಮತಿಯೊಂದಿಗೆ ಎಸ್ಸಿ ಎಸ್ಟಿ ಸಚಿವ, ಶಾಸಕರ ಸಭೆ ನಡೆಸಿ ಫೆ.16ರೊಳಗೆ ಪರಿಶಿಷ್ಟರ ಸಮಾವೇಶವನ್ನೂ ನಡೆಸುವುದಾಗಿ ಪರಿಶಿಷ್ಟ ಜಾತಿ, ವರ್ಗಗಳ ಮುಖಂಡರು ಪಣತೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಾರಿರುವ ಈ ಸಮರದ ಜತೆಯಲ್ಲೇ ಎಸ್ಸಿ ಎಸ್ಟಿ ಸಮುದಾಯದ ಶಾಸಕರನ್ನು ಒಟ್ಟಿಗೆ ಸೇರಲು ಬಿಡುತ್ತಿಲ್ಲ ಎಂಬ ದನಿಯೂ ಹೊರಹೊಮ್ಮಿದೆ.

ಈ ಬೆಳವಣಿಗೆಗಳ ಸೂಕ್ಷ್ಮ ಅರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ್ಯಾಯ ದನಿ ಏಳದಂತೆ ತಡೆಯಲು ವೇದಿಕೆ ಸಜ್ಜು ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಂಡೇ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಾವೇ ಸುಪ್ರೀಂ ಎಂಬುದನ್ನು ಪರೋಕ್ಷವಾಗಿ ತಿಳಿಸುವ ಪ್ರಯತ್ನ ಮಾಡಿದರು. ಹಾಗೆಯೇ, ಪಕ್ಷದ ಮುಂದಿನ ಕಾರ್ಯಕ್ರಮದ ಕುರಿತು ತಿಳಿಸಲು ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸಂದೇಶ ಮುಟ್ಟಿಸುವ ತಂತ್ರಗಾರಿಕೆಯನ್ನೂ ಹೆಣೆದಿದ್ದಾರೆ. ಇದೇ ವೇಳೆ, ತಮ್ಮ ಬಗ್ಗೆ ಸಚಿವ ರಾಜಣ್ಣ ನೀಡಿರುವ ಹೇಳಿಕೆ ಯನ್ನು ಡಿ.ಕೆ.ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೂಡ ರಾಜಣ್ಣ ಹೇಳಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆಂದು ತಿಳಿದು ಬಂದಿದೆ.

ತೀವ್ರ ಅಸಮಾಧಾನ: ಶೀತಲಸಮರಕ್ಕೆ ಸಾಕ್ಷಿಯಾಗಿರುವ ಕಾಂಗ್ರೆಸ್​ನಲ್ಲೀಗ ಬಣಗಳ ಧ್ರುವೀಕರಣದ ಗೊಂದಲವೂ ಸೃಷ್ಟಿಯಾಗಿದೆ. ನಾವು ಯಾರ ಪರ ನಿಲ್ಲಬೇಕು? ಯಾರ ಪರ ನಿಂತರೆ ಏನು ಲಾಭ, ನಷ್ಟ? ಎಂಬ ಲೆಕ್ಕಾಚಾರವನ್ನು ಸಚಿವ, ಶಾಸಕರು ನಡೆಸಿದ್ದಾರೆ. ನಾಯಕರ ಪ್ರತಿ ಮಾತಿನ ಹಿಂದಿನ ಅರ್ಥವನ್ನು ಡಿಕೋಡ್ ಮಾಡುವ ಕಾರ್ಯ ಒಂದೆಡೆ ನಡೆದಿದ್ದರೆ, ಮತ್ತೊಂದೆಡೆ ಕೆಲವರು ಇಡೀ ಬೆಳವಣಿಗೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯದ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅವರೇ ಹೈಕಮಾಂಡ್ ಮೂಲಕ ಡಿನ್ನರ್ ಮೀಟಿಂಗ್ ರದ್ದುಪಡಿಸಿದ್ದಾರೆಂದು ಪರಿಶಿಷ್ಟ ಜಾತಿ, ಪಂಗಡದ ಕೆಲವು ಸಚಿವರು ಅಸಮಾಧಾನಗೊಂಡಿದ್ದಾರೆ.

ಬುಧವಾರ ಗೃಹ ಸಚಿವ ಪರಮೇಶ್ವರ ಅವರ ಸದಾಶಿವನಗರದ ನಿವಾಸಕ್ಕೆ ತೆರಳಿದ್ದ ಸಚಿವ ರಾಜಣ್ಣ ಡಿಕೆಶಿ ನಡೆ ಬಗ್ಗೆ ಚರ್ಚೆ ನಡೆಸಿ ಮುಂದೇನು ಮಾಡಬೇಕೆಂಬ ಬಗ್ಗೆ ವಿಚಾರ ವಿನಿಮಯ ನಡೆಸಿದ್ದಾರೆ. ಸಭೆಯ ವಸ್ತುಸ್ಥಿತಿಯನ್ನು ಹೈಕಮಾಂಡ್ ಗಮನಕ್ಕೆ ತರೋಣ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದು ಬೇಡ. ಮುಂದೆ ಸಭೆ ನಡೆಸಲೇಬೇಕು, ಅದಕ್ಕೂ ಮೊದಲು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಡೋಣ ಎಂಬ ತೀರ್ವನಕ್ಕೆ ಬಂದಿದ್ದಾರೆನ್ನಲಾಗಿದೆ.

ನಾವೇನು ಅವ್ರ ಆಸ್ತಿ ಕೇಳಿದ್ದೇವಾ?: ಡಿನ್ನರ್ ಸಭೆ ಬಗ್ಗೆ ಡಿಕೆಶಿ ಹೈಕಮಾಂಡ್​ಗೆ ದೂರು ನೀಡಿದ್ದಾರೆಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೆ ಸಹಕಾರ ಸಚಿವ ರಾಜಣ್ಣ ಕೆಂಡಾಮಂಡಲರಾದರು. ‘ನಾವು ಸಭೆ ನಡೆಸುವುದರಿಂದ ಶಿವಕುಮಾರ್​ಗೆ ಬೇಜಾರಾಗುವುದಕ್ಕೆ ನಾವೇನು ಅವರ ಆಸ್ತಿ ಬರೆಸಿಕೊಡಿ ಎಂದು ಕೇಳಿದ್ದೇವಾ’ ಎಂದು ಪ್ರಶ್ನಿಸಿದರು.

ಎಸ್​ಸಿ, ಎಸ್​ಟಿ ಸಮುದಾಯದ ಸಮಸ್ಯೆ ಕುರಿತು ರ್ಚಚಿಸಲು ಸಭೆ ಕರೆದರೆ, ಸಭೆ ಮಾಡಬೇಡಿ ಎಂದು ಹೇಳುವವರ ಮಾತು ಬಹಳ ದಿನ ನಡೆಯಲ್ಲ, ರಾಜಕೀಯ ಲೇಪನ ಮಾಡಿ ಸಭೆ ಮಾಡಬೇಡಿ ಎಂದು ಹೇಳುವುದು ಈ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದರು.

ಸಮುದಾಯದ ಶಾಸಕರ ಔತಣಕೂಟದ ಸಭೆ ರದ್ದಾಗಿಲ್ಲ. ಮುಂದೂಡಿಕೆಯಾಗಿದೆ ಅಷ್ಟೇ. ಮೊನ್ನೆಯಷ್ಟೇ ನಡೆದಿರುವ ಡಿನ್ನರ್ ಪಾರ್ಟಿ ಬಗ್ಗೆ ಗೊಂದಲ ಆಗಿರುವ ಹಿನ್ನೆಲೆಯಲ್ಲಿ ನಮ್ಮ ಡಿನ್ನರ್ ಪಾರ್ಟಿ ಮುಂದೂಡುವಂತೆ ಹೈಕಮಾಂಡ್ ಸೂಚಿಸಿದೆ. ಹಾಗಾಗಿ ಸಭೆ ಮುಂದೂಡಿದ್ದೇವೆ ಎಂದರು.

ಪರಂ ಗುಂಪಿನ ನಡೆ ಏನು?

  • ಡಿ.ಕೆ.ಶಿವಕುಮಾರ್ ಅನಗತ್ಯವಾಗಿ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ಇದು ಸಮುದಾಯದ ವಿಚಾರ
  • ಫೆ.16ರೊಳಗೆ ಪಕ್ಷದ ಉಸ್ತುವಾರಿ ಮುಂದಿಟ್ಟುಕೊಂಡೇ ಸಮಾವೇಶ ಮಾಡುವುದು, ಸಮಾವೇಶ ತಯಾರಿಗೆ ಶಾಸಕರ ಸಭೆ ಕರೆಯುವುದು
  • ಸಂಪುಟ ಪುನರ್​ರಚನೆಗೆ ಹೈಕಮಾಂಡ್ ಒಪ್ಪಿದರೂ ಡಿಕೆಶಿ ಒಪು್ಪತ್ತಿಲ್ಲ. ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ನೀತಿಯನ್ನು ಅವರೂ ಪಾಲಿಸಲಿ

ಡಿಕೆಶಿ ನೀಡಿದ ಸಂದೇಶವೇನು?

  • ಅಧಿಕಾರ ಹಂಚಿಕೆ ಬಗ್ಗೆ ಯಾವ ಹೇಳಿಕೆಯೂ ಇಲ್ಲ. ಪಕ್ಷದ ಕಚೇರಿಯಲ್ಲಿ ನಾನು, ಸರ್ಕಾರದ ವಿಚಾರದಲ್ಲಿ ಸಿಎಂ ಹೇಳಿಕೆಯೇ ಅಂತಿಮ. ಬೇರೆ ಹೇಳಿಕೆಗಳಿಗೆ ಬೆಲೆ ಇರಲ್ಲ. ಬಾಯ್ಮುಚ್ಚಿಕೊಂಡಿರಬೇಕು
  • ನಿಂಬೆಗಿಂತ ಹುಳಿ ಇಲ್ಲ, ದುಂಬಿಗಿಂತ ಕರಿ ಇಲ್ಲ. ಶಂಭುಗಿಂತ ಅಧಿಕ ದೇವರಿಲ್ಲ. ಅದೇ ರೀತಿ ನಂಬಿಕೆಗಿಂತ ದೊಡ್ಡ ಗುಣವಿಲ್ಲ
  • ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಬಿಕ್ಕಟ್ಟಿದ್ದರೆ ನಿಮ್ಮಲ್ಲೇ (ಮಾಧ್ಯಮದವರಿಗೆ) ಇರಬೇಕು. ನಮ್ಮಲ್ಲಿ ಬಿಕ್ಕಟ್ಟಿದೆ ಎಂದು ಹೇಳಿದವರು ಯಾರು?

ಸಭೆ ಮಾಡಿದರೆ ಸಹಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗಿದೆ. ಸಮಾವೇಶ ಏರ್ಪಡಿಸುತ್ತಿದ್ದೇವೆ. ರದ್ದು ಮಾಡಿಲ್ಲ.

| ಜಿ.ಪರಮೇಶ್ವರ ಗೃಹ ಸಚಿವ

ರಾಜಕೀಯದಲ್ಲಿ ಹಿನ್ನಡೆ ಮುನ್ನಡೆ ಇರುತ್ತದೆ. ಇವತ್ತು ಅವರು ಮುಂದೆ ಹೋದರೆ, ನಾಳೆ ನಾವು ಮುಂದೆ ಹೋಗುತ್ತೇವೆ. ನಮ್ಮ ಊಟ, ನಮ್ಮ ಅಜೆಂಡಾ ಬೇರೆಯವರಿಗೆ ಆತಂಕ ಏಕೆ?

- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net