

ಗುವಾಹಟಿ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್ (Google Map), ಗೂಗಲ್ ಸರ್ಚ್ನ ಮೊರೆ ಹೋಗುತ್ತೇವೆ. ಅದರಲ್ಲೂ ಗೂಗಲ್ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್ ಮ್ಯಾಪ್ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಅಸ್ಸಾಂನಲ್ಲಿ ನಡೆದಿರುವ ಈ ಘಟನೆ ಜೀವಂತ ಸಾಕ್ಷಿಯಾಗಿದೆ.
ಪ್ರಕರಣ ಒಂದರ ತನಿಖೆ ನಡೆಸುದಾಗ ಅಸ್ಸಾಂ ಪೊಲೀಸರು ಸ್ಥಳ ಒಂದಕ್ಕೆ ತೆರಳುವಾಗ ಗೂಗಲ್ ಮ್ಯಾಪ್‌ನ (Google Map) ಸಹಾಯ ಪಡೆದಿದ್ದಾರೆ. ಮ್ಯಾಪ್ ತೋರಿಸಿದ ದಾರಿಯಲ್ಲಿ ಅಧಿಕಾರಿಗಳು ತೆರಳಿದ್ದು, ಆ ಬಳಿಕ ನಾಗಾಲ್ಯಾಂಡ್ನ ಮೊಕೊಕ್‌ಚುಂಗ್ ಜಿಲ್ಲೆಯನ್ನು ಪ್ರವೇಶಿಸಿದ್ದು, ಸ್ಥಳೀಯರಿಂದ ಬಂಧಿಯಾದ ಘಟನೆ ವರದಿಯಾಗಿದೆ.
ಅಸ್ಸಾಂ ಪೊಲೀಸ್ನ ಹಿರಿಯ ಅಧಿಕಾರಿಯ ಪ್ರಕಾರ ಜನವರಿ 06ರಂದು ಈ ಘಟನೆ ನಡೆದಿದ್ದು, ಜೋರ್ಹತ್ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡವು ಆರೋಪಿಯೊಬ್ಬನನ್ನು ಬಂಧಿಸಲು ಹೊರಟಾಗ ಆತ ಟೀ ಗಾರ್ಡನ್ ಒಂದರಲ್ಲಿ ಬಚ್ಚಿಟ್ಟುಕೊಂಡಿರುವುದಾಗಿ ಮಾಹಿತಿ ಲಭಿಸಿದೆ. ಅದರಂತೆ ಅಧಿಕಾರಿಗಳು ಗೂಗಲ್ ಮ್ಯಾಪ್ನಲ್ಲಿ (Google Map) ತೋರಿಸಿದ ದಾರಿಯಲ್ಲಿ ತೆರಳಿದ್ದು, ನಾಗಾಲ್ಯಾಂಡ್ ಪ್ರವೇಶಿಸಿದ್ದಾರೆ.
ತಂಡದಲ್ಲಿದ್ದ ಬಹುತೇಕ ಅಧಿಕಾರಿಗಳು ಸಮವಸ್ತ್ರ ಧರಿಸದ ಕಾರಣ ಅಲ್ಲಿನ ಸ್ಥಳೀಯರು ಇವರನ್ನು ಬವಂಡುಕೋರರು ಎಂದು ಭಾವಿಸಿ ದಾಳಿ ಮಾಡಿದ್ದು, ನಮ್ಮ ಅಧಿಕಾರಿಗಳು ಗಾಯಗೊಂಡಿದ್ದಾರೆ. ನಮ್ಮ ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡ ವಿಚಾರ ತಿಳಿದು ಅಧಿಕಾರಿಗಳು ಕೂಡಲೇ ನಾಗಾಲ್ಯಾಂಡ್ ಪೊಲೀಸರನ್ನು ಸಂಪರ್ಕಿಸಿದ್ದು, ಸ್ಥಳೀಯರಿಗೆ ಅಲ್ಲಿನ ಪೊಲೀಸರು ವಿಚಾರವನ್ನು ತಿಳಿಸಿ ನಮ್ಮ ಅಧಿಕಾರಿಗಳನ್ನು ಬಿಡಿಸಿದ್ದಾರೆ ಎಂದು ಅಸ್ಸಾಂ ಪೊಲೀಸ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.