

ನವದೆಹಲಿ: ಮುಂದಿನ 48 ಗಂಟೆಗಳೊಳಗೆ ತಮ್ಮ ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಘೋಷಿಸುವುದಾಗಿ ಭಾನುವಾರ ಹೇಳಿಕೆ ನೀಡಿದ್ದ ಅರವಿಂದ್ ಕೇಜ್ರಿವಾಲ್ ಇದೀಗ ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿ, ಸಿಎಂ ಕುರ್ಚಿಗೆ ಗುಡ್ಬೈ ತಿಳಿಸಿದ್ದಾರೆ. ಇನ್ನು ಇಂದು ಬೆಳಗ್ಗೆ 11:30ಕ್ಕೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವೆ ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದ ಕೇಜ್ರಿವಾಲ್, ಸಚಿವೆಯನ್ನೇ ದೆಹಲಿಯ ನೂತನ ಮುಖ್ಯಮಂತ್ರಿಗಳನ್ನಾಗಿ ಮಾಡೋಣ ಎಂದು ಶಾಸಕರ ಒಪ್ಪಿಗೆ ಕೇಳಿದರು. ಇದಕ್ಕೆ ಅಮ್ ಆದ್ಮಿ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದರು. ಇದೀಗ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಅತಿಶಿಗೆ ಅಭಿನಂದನೆಗಳ ಜತೆ ಟೀಕೆ ಕೂಡ ವ್ಯಕ್ತವಾಗಿದೆ.
ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನ ಬಿಟ್ಟುಕೊಟ್ಟ ಹಿನ್ನಲೆ ನೂತನ ಸಿಎಂ ಆಗಿ ಆಯ್ಕೆಯಾದ ಅತಿಶಿಯನ್ನು ಟೀಕಿಸಿರುವ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್, "ಕೇವಲ ಮೂರು ತಿಂಗಳಿಗೆ ಮಾತ್ರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಈಗ ಎಎಪಿ ಸಾರ್ವಜನಿಕರ ಮುಂದೆ ಬೆತ್ತಲಾಗಿದೆ. 2025ರಲ್ಲಿ ಕಾಂಗ್ರೆಸ್ ತನ್ನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ ನಿರೀಕ್ಷಿಸಿ" ಎಂದು ಯಾದವ್ ಹೇಳಿದ್ದಾರೆ.
"ಹೊಸ ಮುಖ್ಯಮಂತ್ರಿಗೆ ನನ್ನ ಶುಭಾಶಯಗಳನ್ನು. ಇವರ ಆಯ್ಕೆಯಿಂದ ದೆಹಲಿ ಜನರ ಸಮಸ್ಯೆಗಳು ಬಗೆಹರಿಯಲಿ ಎಂದು ನಾನು ಆಶಿಸುತ್ತೇನೆ. ಸರ್ಕಾರ ರಚನೆಯಾದ ಬಳಿಕ ಕೊಟ್ಟಿರುವ ಭರವಸೆಗಳಿಂದ ಓಡಿಹೋಗಲು ಸಾಧ್ಯವೇ ಇಲ್ಲ" ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).