

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಸಬ್ಇನ್ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ ದೊಡ್ಡ ಮಟ್ಟದ ಗೋಲ್ಮಾಲ್ನಿಂದ ಹಳ್ಳ ಹಿಡಿದಿದ್ದರೆ, ಕಾನ್ಸ್ಟೆಬಲ್ ನೇಮಕಾತಿ ಕೂಡ ಸುಸೂತ್ರವಾಗಿಲ್ಲ. ತತ್ಸಮಾನ ವಿದ್ಯಾರ್ಹತೆ ಕುರಿತ ಗೊಂದಲ ಪೊಲೀಸ್ ಹುದ್ದೆ ಆಕಾಂಕ್ಷಿಗಳ ಕಳವಳಕ್ಕೆ ಕಾರಣವಾಗಿದೆ. ದ್ವಿತೀಯ ಪಿಯುಸಿಗೆ ಐಟಿಐ, ಡಿಪ್ಲೊಮಾ ಮತ್ತು ಜೆಒಸಿ ತತ್ಸಮಾನ ವಿದ್ಯಾರ್ಹತೆಯಲ್ಲ. ಮುಕ್ತಾಯ ಆಗಿರುವ ನೇಮಕಾತಿಗೆ ಅನ್ವಯ ಆಗುವುದಿಲ್ಲ ಎಂದು ಪೊಲೀಸ್ ನೇಮಕಾತಿ ವಿಭಾಗ ಸುತ್ತೋಲೆ ಹೊರಡಿಸಿದೆ. ಈ ಆದೇಶದಿಂದ ಗೊಂದಲ ಸೃಷ್ಟಿಯಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿವಾದವೇನು?: ಕಾನ್ಸ್ಟೆಬಲ್ ನೇಮಕಾತಿ ಅಧಿಸೂಚನೆಯಲ್ಲಿ ಪಿಯುಸಿಗೆ ತತ್ಸಮಾನವಾಗಿ ಡಿಪ್ಲೊಮಾ, ಐಟಿಐ ಮತ್ತು ಜೆಒಸಿ ಪರಿಗಣಿಸಲಾಗಿತ್ತು. ಆದರೆ, 2018-19ರಲ್ಲಿ 2,450 ಹುದ್ದೆಗಳ ನೇಮಕಾತಿ ವೇಳೆ ಇದನ್ನು ಕೈಬಿಟ್ಟು ಡಿಪ್ಲೊಮಾ, ಐಟಿಐ ಮತ್ತು ಜೆಒಸಿ ಅಭ್ಯರ್ಥಿಗಳು ಕಡ್ಡಾಯವಾಗಿ 1 ಭಾಷೆ ಮತ್ತು 1 ವಿಷಯದಲ್ಲಿ ತೇರ್ಗಡೆ ಆಗಬೇಕೆಂದು ಆದೇಶ ಹೊರಡಿಸಲಾಯಿತು. ಇದರ ವಿರುದ್ಧ ಅಭ್ಯರ್ಥಿಗಳು ಹೋರಾಟಕ್ಕೆ ಇಳಿದರು.
ಸರ್ಕಾರದ ಅಭಯ: ಅಭ್ಯರ್ಥಿಗಳ ಒತ್ತಡಕ್ಕೆ ಮಣಿದು ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜು.19ರಂದು ಸುತ್ತೋಲೆ ಹೊರಡಿಸಿದರು. ಅದರಲ್ಲಿ ವಿದ್ಯಾರ್ಹತೆಗಳ ತತ್ಸಮಾನತೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕೃತ ಪ್ರಾಧಿಕಾರವಾಗಿದೆ. ದ್ವಿತೀಯ ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆ ಸಂಬಂಧ ಡಿಪ್ಲೊಮಾ, ಐಟಿಐ ಮತ್ತು ಜೆಒಸಿಗೆ ಪರಿಗಣಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರಿಂದ ಪೊಲೀಸ್ ಕಾನ್ಸ್ಟೆಬಲ್ (ಸಿವಿಲ್) ಹುದ್ದೆಗಳಿಗೆ 2018 ರಿಂದ 2021ರವಗಿನ ಅವಧಿಯಲ್ಲಿ ಹೊರಡಿಸಲಾದ 7 ನೇಮಕಾತಿ ಅಧಿಸೂಚನೆಗಳಲ್ಲಿ ಆಯ್ಕೆ ಹೊಂದಿ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕೂಡಲೇ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದರ ಆಧಾರದ ಮೇಲೆ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಸಹ ಎಲ್ಲ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಎಸ್ಪಿಗಳಿಗೆ ಪತ್ರ ಬರೆದು ಕೂಡಲೇ 2018 ರಿಂದ 2021ರ ನಡುವೆ ಕಾನ್ಸ್ಟೆಬಲ್ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಡಿಪ್ಲೊಮಾ, ಜೆಒಸಿ ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ವಿವರ ನೀಡುವಂತೆ ಪತ್ರ ಬರೆದಿದ್ದರು. ಈ ಆದೇಶದಂತೆ ಕಮಿಷನರೇಟ್ ಮತ್ತು ಎಸ್ಪಿ ಕಚೇರಿಗಳಲ್ಲಿ ಮಾಹಿತಿ ಕಲೆ ಹಾಕಿ ಅಭ್ಯರ್ಥಿಗಳ ವಿವರವನ್ನು ಪ್ರಧಾನ ಕಚೇರಿಗೆ ರವಾನೆ ಮಾಡಲಾಗುತ್ತಿತ್ತು.
ಕೋರ್ಟ್ ಮೊರೆಗೆ ನಿರ್ಧಾರ: ಪೊಲೀಸ್ ಇಲಾಖೆಯ ಹೊಸ ಅದೇಶದಿಂದ ನೊಂದ ಕಾನ್ಸ್ಟೆಬಲ್ ಹುದ್ದೆ ಆಕಾಂಕ್ಷಿಗಳಿಗೆ ಮತ್ತೆ ಹಿನ್ನಡೆಯಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಲು ನಿರ್ಧರಿಸಿದ್ದಾರೆ.
ಹೊಸ ಆದೇಶ ತಂದ ಸಂಕಷ್ಟ: ಸೆಪ್ಟೆಂಬರ್ 1ಕ್ಕೆ ಕಮಲ್ ಪಂತ್ ಹೊಸ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ-81 ಸೇವೆ 2017 ಆದೇಶದಂತೆ 2018ರ ಫೆ.27ರಂದು ಹೊರಡಿಸಿರುವ ಆದೇಶ ಅನ್ವಯ ಪಿಯುಸಿ ತತ್ಸಮಾನ ವಿದ್ಯಾರ್ಹತೆಗೆ ನೀಡಲಾದ ಡಿಪ್ಲೊಮಾ, ಜೆಒಸಿ ಮತ್ತು ಐಟಿಐ ವ್ಯಾಸಂಗ ಮಾಡಿದಂತಹ ಅಭ್ಯರ್ಥಿಗಳು ಕಡ್ಡಾಯವಾಗಿ 1 ಭಾಷೆ ಮತ್ತು 1 ವಿಷಯದಲ್ಲಿ ತೇರ್ಗಡೆ ಹೊಂದಿರಬೇಕಾಗಿದೆ. ಇದರ ಆಧಾರದ ಮೇಲೆ ಚಾಲ್ತಿಯಲ್ಲಿ ಇರುವ ನೇಮಕಾತಿ ಪ್ರಕ್ರಿಯೆಯನ್ನು ಮುಕ್ತಾಯ ಮಾಡುವಂತೆ ಎಲ್ಲ ಎಸ್ಪಿ ಮತ್ತು ಕಮಿಷನರ್ರೇಟ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.