ಗಣಪನಿಗೆ ಗೊಂದಲೋತ್ಸವ: ನಿಯಮ ಸಡಿಲಿಸದ ಸರ್ಕಾರ, ಸವಾಲು ಹಾಕಿದ ಪರಿವಾರ

Ganesha
Published on

ಬೆಂಗಳೂರು: ಕರೊನಾ ಕಾರಣದಿಂದಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹೇರಲಾಗಿದ್ದ ಬಿಗಿ ನಿಯಮಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಹಿಂದೇಟು ಹಾಕಿರುವಂತೆಯೇ ಗಣೇಶೋತ್ಸವವನ್ನು ಆಚರಿಸಿಯೇ ತೀರುವುದಾಗಿ ವಿಶ್ವ ಹಿಂದು ಪರಿಷತ್ ಸಹಿತ ಪರಿವಾರಗಳು ಹಾಗೂ ಪ್ರತಿಪಕ್ಷಗಳು ಸವಾಲು ಹಾಕಿರುವುದು ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ವಿವಿಧ ಸಂಘಟನೆಗಳ ಪ್ರತಿಭಟನೆಗೆ ಮಣಿದು ಬೆಂಗಳೂರಿನಲ್ಲಿ ಕೆಲ ನಿಯಮಗಳನ್ನು ಸಡಿಲಿಸಿರುವುದನ್ನು ಪ್ರಶ್ನೆ ಮಾಡಿರುವ ಸಾರ್ವಜನಿಕರು ರಾಜ್ಯದ ಇತರೆಡೆಗೆ ಈ ವಿನಾಯಿತಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಂಘರ್ಷ ಎದುರಿಸುವೆವು: ಗಣಪತಿ ಮೂರ್ತಿ ಎತ್ತರ, ಪ್ರತಿಷ್ಠಾಪನಾ ದಿನಗಳು, ಛಾಪಾ ಕಾಗದದಲ್ಲಿ ಘೋಷಣೆ ಸೇರಿ ವಿವಿಧ ರೀತಿ ಏಳು ಷರತ್ತು ಹೇರಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸುತ್ತಲೇ ಷರತ್ತು ರಹಿತವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುವುದು, ಯಾವುದೇ ಅಡ್ಡಿಯನ್ನೂ ಸಹಿಸಲ್ಲ ಎಂದು ವಿಶ್ವ ಹಿಂದು ಪರಿಷತ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಆಚರಣೆಗೆ ಹೇರಿದ್ದ ನಿಯಮಾವಳಿ ಸಡಿಲಿಸುವ ವಿಚಾರದಲ್ಲಿ ತೀವ್ರ ಪ್ರತಿರೋಧ ಎದುರಾಗುತ್ತಿದ್ದಂತೆ ಸೂಕ್ತ ತೀರ್ಮಾನ ಮಾಡುವುದಾಗಿ ಹೇಳುತ್ತಿದ್ದ ಸರ್ಕಾರ ಕೊನೆಯ ಕ್ಷಣದಲ್ಲಿ ತನ್ನದೇ ಮಾತಿನಿಂದ ದೂರ ಸರಿದಿದೆ.

ದೆಹಲಿಯಿಂದ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಸಂಜೆ ವೇಳೆ ಗಣೇಶೋತ್ಸವ ನಿಯಮಾವಳಿ ಕುರಿತು ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದ್ದರು. ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ನಿಯಮ ಮಾಡಲಾಗಿದೆ, ಆದರೆ ವಿವಿಧ ಕಡೆಯಿಂದ ಬೇಡಿಕೆ ಬಂದಿದ್ದು, ಇದನ್ನು ಪರಿಗಣಿಸುವ ಕುರಿತು ಸಭೆ ನಡೆಸಲಾಗುತ್ತದೆ ಎಂದಿದ್ದರು. ಆದರೆ, ದಿನದ ಕಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪುನಃ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಜನ ಸಂತೋಷವಾಗಿ ಹಬ್ಬ ಆಚರಣೆ ಮಾಡಬೇಕು. ಕೋವಿಡ್ ಇರುವುದರಿಂದ ಎಲ್ಲ ನಿಯಮಗಳು ಪಾಲನೆ ಆಗಬೇಕು. ಹೀಗಾಗಿ ಗಣೇಶೋತ್ಸವ ಸಂಘಟಕರು ಹೇಳಿರುವ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾ ಸ್ಥಳದಿಂದ ಹೊರಟು ಹೋದರು.

ಕಿವಿಹಿಂಡಿದ ಕಾಂಗ್ರೆಸ್: ಗಣೇಶ ಹಬ್ಬದಲ್ಲಿ ಎಷ್ಟು ಗಾತ್ರದ ಮೂರ್ತಿಗೆ ಪೂಜೆ ಮಾಡಬೇಕು ಎಂಬುದು ಭಕ್ತ ಹಾಗೂ ಭಗವಂತನಿಗೆ ಬಿಟ್ಟ ವಿಚಾರ. ಯಾರು, ಯಾವ ರೀತಿಯಲ್ಲಿ ಪೂಜೆ ಮಾಡಬೇಕು ಎಂಬುದು ಅವರವರ ವೈಯಕ್ತಿಕ ಭಾವಕ್ಕೆ ಬಿಟ್ಟ ವಿಚಾರ. ಇದಕ್ಕೆ ಬಿಜೆಪಿ ಸರ್ಕಾರ ನಿರ್ಬಂಧ ಹೇರಬಾರದು ಎಂದು ಕಾಂಗ್ರೆಸ್, ಸರ್ಕಾರದ ಕಿವಿಹಿಂಡಿದೆ. ಮನೆಯಲ್ಲಿ 2 ಅಡಿ, ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಮೂರ್ತಿ ಮಾತ್ರ ಇಡಬೇಕು ಎಂದು ನಿರ್ಬಂಧ ಹಾಕಿದ್ದು ಸರಿಯೇ? ಈಗ ಇಷ್ಟು ದೊಡ್ಡ ಗಣೇಶ ಮೂರ್ತಿ ಮಾಡಿರುವವರ ಕತೆ ಏನಾಗಬೇಕು. ಸರ್ಕಾರ ಇದೇ ಆದೇಶವನ್ನು 3 ತಿಂಗಳ ಹಿಂದೆಯೇ ಯಾಕೆ ಪ್ರಕಟಿಸಲಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ನಿಫಾ ಹೈಅಲರ್ಟ್: ಕೇರಳದಲ್ಲಿ ನಿಫಾ ಆತಂಕ ಹೆಚ್ಚಾಗುತ್ತಿರುವ ನಡುವೆಯೇ ಗಡಿ ಜಿಲ್ಲೆಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ನೀಡಿದೆ. ಕೇರಳದಿಂದ ಬರುವರನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲೇ ಬೇಕು, ಮೈಮರೆಯಬೇಡಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ನಿಫಾದ ಪರಿಣಾಮ, ಕೇರಳದಲ್ಲಿ ಆಗುತ್ತಿರುವ ಬೆಳವಣಿಗೆ, ನಮ್ಮ ರಾಜ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ವರದಿ ಕೊಡುವಂತೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಹಾಗೂ ತಜ್ಞರನ್ನು ಕೋರಿದ್ದು, ವರದಿ ಬಂದ ಕೂಡಲೇ ಇನ್ನಷ್ಟು ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಯವರು ಗುರುವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ರಾಜ್ಯದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಇತರ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಕೇರಳದವರು ತವರಿಗೆ ತೆರಳಿದ್ದರೆ, ಅಕ್ಟೋಬರ್ ಕೊನೆಯವರೆಗೆ ರಾಜ್ಯಕ್ಕೆ ಮರಳುವುದು ಬೇಡ. ರಾಜ್ಯದಿಂದ ಕೇರಳಕ್ಕೆ ತೆರಳುವವರೂ ಪ್ರವಾಸ ಮುಂದೂಡಿ ಎಂದು ಸರ್ಕಾರ ಸಲಹೆ ನೀಡಿದೆ.

ಸರ್ಕಾರದಿಂದ ಮೌಖಿಕ ಸೂಚನೆ?: ಗಣೇಶೋತ್ಸವ ಆಚರಣೆಯ ಅವಧಿ ಹಾಗೂ ಗಣೇಶ ಪ್ರತಿಮೆಯ ಎತ್ತರದ ವಿಚಾರದಲ್ಲಿ ಸರ್ಕಾರದ ಮಾರ್ಗಸೂಚಿ ಮೀರಿ ಗಣೇಶೋತ್ಸವ ಆಚರಿಸಿ ದರೂ, ಅಡಚಣೆ ಮಾಡದಂತೆ ಸರ್ಕಾರದ ಕಡೆಯಿಂದ ಮೌಖಿಕ ಆದೇಶ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಹೊಸ ಮಾರ್ಗಸೂಚಿ ಪ್ರಕಟವಾಗದೇ ಇರುವ ಕಾರಣ ಸಂಘಟಕರಿಗೆ ಸ್ಪಷ್ಟತೆ ದೊರೆತಿಲ್ಲ.

ಎಷ್ಟು ಗಾತ್ರದ ವಿಗ್ರಹ ಪೂಜೆ ಮಾಡಬೇಕು ಅಂತ ನಿರ್ದೇಶನ ನೀಡಲು ನೀವ್ಯಾರು? ಯಾರು, ಯಾವ ರೀತಿಯಲ್ಲಿ ಪೂಜೆ ಮಾಡಬೇಕು ಎಂಬುದು ಅವರವರ ವೈಯಕ್ತಿಕ ಭಾವಕ್ಕೆ ಬಿಟ್ಟ ವಿಚಾರ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ವಾರ್ಡಿಗೊಂದು ಗಣೇಶ ಇಡಬೇಕೆಂಬ ಸೂಚನೆ ಒಪ್ಪಲಿಕ್ಕಾಗಲ್ಲ. ಪೆಂಡಾಲ್​ಗಳಲ್ಲೇ ಗಣೇಶೋತ್ಸವ ನಡೆಯಲಿದೆ. ಕೋವಿಡ್ ನಿಯಮ ಪಾಲಿಸಿಕೊಂಡು ಗಣೇಶೋತ್ಸವ ಆಚರಿಸುತ್ತೇವೆ. ಇಷ್ಟು ಅಡಿಯ ಗಣಪತಿ ಇಡಿ ಎಂಬ ನಿರ್ಬಂಧ ಒಪ್ಪುವುದಿಲ್ಲ. ಛಾಪಾ ಕಾಗದದಲ್ಲಿ ಬರೆದುಕೊಡಬೇಕು, ಏಳು ಷರತ್ತು ಪಾಲಿಸಬೇಕೆಂಬ ನಿಯಮ ಎಷ್ಟು ಸರಿಯಾದೀತು? | ಬಸವರಾಜ್ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ, ವಿಶ್ವಹಿಂದು ಪರಿಷತ್

ವೀಕೆಂಡ್ ಕರ್ಫ್ಯೂ ತೆರವು

ಕರೊನಾ ಸಾಂಕ್ರಾಮಿಕ ಹರಡುವಿಕೆ ಪ್ರಮಾಣ ಹೆಚ್ಚಿದ್ದ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ವಾರಾಂತ್ಯ ಕರ್ಫ್ಯೂವನ್ನು ಸಡಿಲಿಸುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಗಣೇಶ ಹಬ್ಬದ ಕಾರಣ ಮತ್ತು ಪ್ರಕರಣ ತಗ್ಗುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ನಿಯಮ ಸಡಿಲಿಸುವಂತೆ ವ್ಯಾಪಾರಸ್ಥರು ಹಾಗೂ ಸಾಮಾನ್ಯ ಜನರು ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಇದೀಗ ಕರೊನಾ ಪ್ರಭಾವವನ್ನು ಗಮನಿಸಿ ತೀರ್ಮಾನ ಮಾಡುವಂತೆ ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ. ರಾಜ್ಯಾದ್ಯಂತ ಕರೊನಾ ತಗ್ಗಿದ್ದರೂ ಆರು ಜಿಲ್ಲೆಗಳಲ್ಲಿ ಪಾಸಿವಿಟಿ ದರ ಹೆಚ್ಚಿತ್ತು. ಹೀಗಾಗಿ ಅಂಥ ಕಡೆ ವಾರಾಂತ್ಯ ಕರ್ಫ್ಯೂ ಮತ್ತು ಸಭೆ ಸಮಾರಂಭಕ್ಕೆ ಜನ ಸೇರುವುದಕ್ಕೆ ಮಿತಿ ಹಾಕಲಾಗಿತ್ತು. ಇದೇ ವೇಳೆ ಕೇರಳ, ಮಹಾರಾಷ್ಟ್ರ ಗಡಿಯಿಂದ ಬರುವವರ ಮೇಲೆ ನಿಗಾ ಇಡುವ ಸಂಬಂಧ ಹೊರಡಿಸಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಜಿಲ್ಲಾಡಳಿತಗಳಿಗೆ ಮುಖ್ಯಕಾರ್ಯದರ್ಶಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net