

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು 'ದಿಗ್ಭ್ರಮೆ' ಮತ್ತು 'ಗೊಂದಲ'ಕ್ಕೀಡುಮಾಡಿದೆ.
ಚಿತ್ರವನ್ನು ಮೊದಲ ನೋಟದಲ್ಲಿ ನೋಡಿದಾಗ ವ್ಯಕ್ತಿಯೊಬ್ಬ ಹಿಮಾವೃತ ಮರಗಳ ನಡುವೆ ನಡೆದು ಹೋಗುತ್ತಿರುವಂತೆ ಕಾಣುತ್ತದೆ. ಇದೇ ಫೋಟೋ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸಿದ್ದು, ಖಚಿತವಾಗಿ ಫೋಟೋದಲ್ಲಿ ಇರುವುದೇನು ಎಂಬ ಚರ್ಚೆಗೆ ದೂಡಿದೆ.
ಸ್ವಲ್ಪ ಅಸ್ಪಷ್ಟ ಕೂದಲು ಮತ್ತು ಕ್ಯಾಮೆರಾದತ್ತ ವ್ಯಕ್ತಿಯೊಬ್ಬ ಬೆನ್ನು ತೋರಿಸಿರುವಂತೆ ಕಾಣುತ್ತಿದೆ. ಅಲ್ಲದೆ, ಹಿಮದತ್ತ ಹೆಜ್ಜೆ ಹಾಕುವಾಗ ಜಾಕೆಟ್ ಧರಿಸಿದಂತೆ ಗೋಚರವಾಗುತ್ತಿದೆ ಎಂದು ಅನೇಕ ನೆಟ್ಟಿಗರು ಬರೆದುಕೊಂಡಿದ್ದಾರೆ. ಆದರೆ, ಫೋಟೋವನ್ನು ಬಹಳ ಹತ್ತಿರದಿಂದ ದಿಟ್ಟಿಸಿ ನೋಡಿದಾಗ ಅದರಲ್ಲಿ ಅಸಲಿಗೆ ಏನಿದೆ ಎಂಬುದು ಬಹಿರಂಗವಾಗುತ್ತದೆ.
ವಾಸ್ತವವಾಗಿ ನಾಯಿಯೊಂದು ಕ್ಯಾಮೆರಾ ಕಡೆಗೆ ಹಿಮಾವೃತ ಮರಗಳ ನಡುವೆ ಓಡಿ ಬರುತ್ತಿರುವುದು ಗೋಚರವಾಗುತ್ತದೆ. ಆದರೆ, ಮೊದಲ ನೋಟದಲ್ಲಿ ನಾಯಿಯ ಬಾಲವು ಮಾನವ ತಲೆಯಂತೆಯೂ ಹಾಗೂ ಮುಖವೂ ಬೆನ್ನಿನಂತೆ ಗೋಚರಿಸುತ್ತದೆ. ಆದರೆ, ನಿಜವಾಗಿ ಅದೊಂದು ಸಣ್ಣ ನಾಯಿಯ ಚಿತ್ರವಾಗಿದೆ.
ಸದ್ಯ ವೈರಲ್ ಆಗಿರುವ ಚಿತ್ರವನ್ನು ನೋಡಿದ ಅನೇಕ ನೆಟ್ಟಿಗರು ಲೈಕ್ಸ್ ಹಾಗೂ ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. ನಿಜಕ್ಕೂ ಮೊದಲ ನೋಟದಲ್ಲಿ ಗೊಂದಲಕ್ಕೀಡಾಗಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ನಾಯಿ ಎಂದು ತಿಳಿದ ಮೇಲೆ ಹುಬ್ಬೇರಿಸಿದ್ದಾಗಿಯೂ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)