ಡಿಪಿಆರ್ ಕೊಟ್ಟ ಮೇಲೆ ಸಭೆ ನಡೆಸಿ

kgl sabhe (1)
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಹರತಾಳು ಹಾಲಪ್ಪ, ಟಿ.ಡಿ.ಮೇಘರಾಜ್, ರಾಜನಂದಿನಿ ಕಾಗೋಡು ಮತ್ತಿತರರು ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
Published on

ಕಾರ್ಗಲ್: ಎರಡು ಸಾವಿರಕ್ಕೂ ಅಧಿಕ ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಶರಾವತಿ ಭೂಗರ್ಭ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿ ಕಾರ್ಗಲ್‌ನಲ್ಲಿ ಆಯೋಜಿಸಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಭಾಗವಹಿಸಿದ್ದ ಪರಿಸರವಾದಿಗಳು, ಕೃಷಿಕರು, ಸಂತ್ರಸ್ತರು, ಸಾರ್ವಜನಿಕರು ಬಹುತೇಕರು ಉದ್ದೇಶಿತ ಈ ಯೋಜನೆ ಅನುಷ್ಠಾನ ಬೇಡ ಎಂದು ಆಗ್ರಹಿಸಿದರು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆಪಿಸಿಎಲ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿತ್ತು. ಯೋಜನೆ ಕುರಿತ ಮಾಹಿತಿ ಇಂಗ್ಲಿಷ್ ಮತ್ತು ಲ್ಯಾಟೀನ್ ಭಾಷೆಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಏನೂ ಅರ್ಥವಾಗದು ಎಂದು ಆಕ್ಷೇಪ ವ್ಯಕ್ತವಾಯಿತು.

ಸಭೆಯಲ್ಲಿದ್ದವರ ಪೈಕಿ ಅನೇಕರು ಯೋಜನೆ ಬಗ್ಗೆ ಡಿಪಿಆರ್ ಇಲ್ಲದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು. ಇದನ್ನು ಇಂಗ್ಲಿಷ್ ಭಾಷೆಯಿಂದ ಸಾಮಾನ್ಯ ಜನತೆಗೆ ತಿಳಿಯುವಂತೆ ಕನ್ನಡ ಭಾಷೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ವಿತರಿಸಬೇಕಿತ್ತು. ಆದರೆ ಕನ್ನಡದಲ್ಲಿ ಇಲ್ಲ. ಇನ್ನು ಮುಂದಾದರೂ ಡಿಪಿಆರ್ ಅನ್ನು ಕನ್ನಡಕ್ಕೆ ಅನುವಾದಿಸಿ ಸಾರ್ವಜನಿಕರಿಗೆ ತಲುಪಿಸಿ. ಅಲ್ಲಿಯವರೆಗೆ ಸಭೆಯನ್ನು 45 ದಿನ ಮುಂದೂಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಗುರುದತ್ತ ಹೆಗಡೆ ಸಭೆ ಮುಂದೂಡುವುದನ್ನು ತಿರಸ್ಕರಿಸಿದರು. ಆದರೆ ಬೇಕಾದ ಮಾಹಿತಿ ಒದಗಿಸುವುದಾಗಿ ತಿಳಿಸಿದರು.

520 ಮೀ ಆಳದಲ್ಲಿ ನಿರ್ಮಾಣ: ತಳಕಳಲೆಯ ಮೇಲ್ದಂಡೆ ಹಾಗೂ ಗೇರುಸೊಪ್ಪದ ಕೆಳದಂಡೆ ಪ್ರದೇಶದಲ್ಲಿ ಹಾಲಿ ಇರುವ ಎರಡು ಅಣೆಕಟ್ಟುಗಳ ಸಹಾಯದೊಂದಿಗೆ ಭೂ ಆಳದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ನಿರ್ಮಾಣವಾಗಲಿದೆ. ಇಲ್ಲಿ ಇರುವ ನೀರನ್ನು ವಿದ್ಯುತ್‌ಗೆ ಬಳಸಿ ಪುನಃ ಮೇಲೆತ್ತುವ ಕಾರ್ಯ ನಡೆಯಲಿದೆ ಎಂದು ಕೆಪಿಸಿಯ ಇಂಜಿನಿಯರ್ ವಿಜಯ್ ಯೋಜನೆ ಕುರಿತ ವಿವರವನ್ನು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ನೀಡಿದರು. ಇದಕ್ಕಾಗಿ 250 ಮೆಗಾವಾಟ್ ಸಾಮರ್ಥ್ಯದ 8 ಯೂನಿಟ್‌ಗಳನ್ನು ಭೂಮಿಯ 520 ಮೀಟರ್ ಆಳದಲ್ಲಿ ನಿರ್ಮಿಸಲಾಗುವುದು. ಯೋಜನೆಗೆ 54.15 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 88.68 ಹೆಕ್ಟೇರ್ ಅರಣ್ಯೇತರ ಭೂಮಿ ಸೇರಿ ಒಟ್ಟು 142.763 ಹೆಕ್ಟೇರ್ ಭೂಮಿ ಬೇಕಾಗಿದೆ. ಮರಾಠಿ ಕೇರಿಯ ಒಟ್ಟು 12 ಕುಟುಂಬಗಳು, ಬೇಗೋಡಿಯ 12 ಕುಟುಂಬಗಳು ಹಾಗೂ ನಗರಬಸ್ತಿ ಕೇರಿ 28 ಕುಟುಂಬಗಳು ತೆರವಾಗಲಿವೆ. 16041 ಮರಗಳನ್ನು ತೆರವು ಮಾಡಬೇಕಾಗುತ್ತದೆ. ಯೋಜನೆಯ ಒಟ್ಟು ವೆಚ್ಚ 10,240 ಕೋಟಿ ರೂ. ಎಂದು ಮಾಹಿತಿ ನೀಡಿದರು.

ಅಗತ್ಯವಿರುವ ವಿದ್ಯುತ್ ಎಲ್ಲಿಂದ ಬರುತ್ತೆ?: ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ನೀರನ್ನು ಮತ್ತೆ ಮತ್ತೆ ಮೇಲೆತ್ತಲು 2500 ಮೆಗಾವಾಟ್ ವಿದ್ಯುತ್ ಬೇಕು. ಪ್ರಸ್ತುತ ಲಿಂಗನಮಕ್ಕಿ, ಮಹಾತ್ಮ ಗಾಂಧಿ ವಿದ್ಯುದಾಗಾರ, ಶರಾವತಿ ಹಾಗೂ ಗೇರುಸೊಪ್ಪ ಎಲ್ಲವೂ ಸೇರಿ ಶರಾವತಿ ಯೋಜನೆಯಲ್ಲಿ ಉತ್ಪಾದನೆಯ ಪ್ರಮಾಣ 1459 ಮೆಗಾವಾಟ್. ಉಳಿದ ಸುಮಾರು ಒಂದು ಸಾವಿರ ಮೆ.ವಾ ವಿದ್ಯುತ್ ಎಲ್ಲಿಂದ ತರಲಾಗುವುದು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಶ್ನಿಸಿದರು. ಪ್ರಸ್ತುತ ಯೋಜನಾ ಪ್ರದೇಶದ ಜಾಗಕ್ಕೆ ಸುಮಾರು 11 ಕಿಮೀ ದೂರವಿದೆ. ಈ ಸ್ಥಳಕ್ಕೆ ವಿದ್ಯುತ್ ಕೊಂಡೊಯ್ಯುವುದು ಹೇಗೆ, ಇಲ್ಲಿ ವಿದ್ಯುತ್ ಮಾರ್ಗ ಲಭ್ಯವಿದೆಯೇ ಎಂದು ಪ್ರಶ್ನಿಸಿದರು. ಪಂಪ್ಡ್ ಸ್ಟೋರೇಜ್ ಮೂಲಕ ಉತ್ಪಾದನೆ ಆದ ವಿದ್ಯುತ್ ಅನ್ನು ದೂರದ ಪ್ರದೇಶಗಳಿಗೆ ತೆಗೆದುಕೊಂಡು ಹೋಗಲು ಸಾವಿರಾರು ಎಕರೆ ಅರಣ್ಯ, ಜಮೀನು ಪ್ರದೇಶ ಹಾನಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ರಮೇಶ್ ನಾಯ್ಕ, ಡಿಎಫ್‌ಒ ಪ್ರಸನ್ನ ಪಟಗಾರ್, ಪರಿಸರ ಇಲಾಖೆಯ ಶಿಲ್ಪಾ, ಕೆಪಿಸಿಎಲ್ ಅಧಿಕಾರಿ ವಿಜಯ್, ಕೆಪಿಸಿ ಮುಖ್ಯ ಅಭಿಯಂತರಾದ ಎಚ್.ಆರ್.ರಮೇಶ್, ಎಂ.ಮಾದೇಶ್, ಶಿಲ್ಪಾ ಡಿ. ರಾಜ್, ಪರಿಸರವಾದಿಗಳಾದ ಶಿವಾನಂದ ಕಳವೆ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಅಖಿಲೇಶ್ ಚಿಪ್ಪಳಿ, ಎಲ್.ಕೆ.ಶ್ರೀಪತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net