

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಐದು ಎಕರೆಗಿಂತ ಕಡಿಮೆ ವಿಸ್ತೀರ್ಣ ಇರುವ ಪ್ಲಾಂಟೇಶನ್ ಭೂಮಿಗೆ ಇನ್ಮುಂದೆ 11 ಇ ನಕ್ಷೆ ದೊರೆಯು ವುದಿಲ್ಲ. ಐದು ಎಕರೆಗಿಂತ ಕಡಿಮೆ ಇರುವ ಸರ್ವೆ/ ಹಿಸ್ಸಾ ನಂಬರುಗಳನ್ನು ಸೃಜಿಸಲು 11ಇ ನಕ್ಷೆ ತಯಾರು ಮಾಡ ದಂತೆ ಅಧಿಕಾರಿಗಳಿಗೆ ಕಂದಾಯ ಇಲಾಖೆ ಆದೇಶಿಸಿದೆ.
ಹಾನಿ ತಡೆ ಉದ್ದೇಶ?: ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮಳೆಗಾಲದ ವೇಳೆ ಭೂ ಕುಸಿತ ಉಂಟಾಗಿ ಪ್ರಾಣ, ಆಸ್ತಿ ಹಾನಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಪ್ರಕೃತಿ ವಿರುದ್ಧವಾಗಿ ನಡೆದ ಅಭಿವೃದ್ಧಿ ಯೋಜನೆಗಳು. ಮಲೆನಾಡು ಪ್ರದೇಶಗಳಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ಪ್ಲಾಂಟೇಶನ್ ಜಮೀನುಗಳನ್ನು ಯಾವುದೇ ವಿಸ್ತೀರ್ಣದ ಮಿತಿ ಇಲ್ಲದೇ ಖರೀದಿಸಿ ನಂತರ ಅತಿ ಸಣ್ಣ ವಿಸ್ತೀರ್ಣಗಳಿಗೆ ವಿಭಜನೆ/11ಇ ನಕ್ಷೆ ಪಡೆದು ಮಾರಾಟ ಮಾಡಲಾಗುತ್ತಿದೆ. ಬಳಿಕ ಅವೈಜ್ಞಾನಿಕ ಬಡಾವಣೆ, ರೆಸಾರ್ಟ್ ಮತ್ತು ಹೋಂ ಸ್ಟೇಗಳ ನಿರ್ಮಾಣ ಮಾಡಿರುವುದು ಮತ್ತು ವಾಣಿಜ್ಯ ಉದ್ದೇಶಕ್ಕೆ ನಿಸರ್ಗಕ್ಕೆ ವಿರುದ್ಧವಾದ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದರಿಂದ ಪ್ರಕೃತಿ ವಿಕೋಪ ಹೆಚ್ಚುತ್ತಿದೆ. ಹೀಗಾಗಿ ಭೂ ಕಂದಾಯ ಅಧಿನಿಯಮ 1964ರ ಕಲಂ 2(8)(ಬಿ)ರಲ್ಲಿ ವ್ಯಾಖ್ಯಾನ ಮಾಡಿರುವಂತೆ ಪ್ಲಾಂಟೇಶನ್ ಭೂಮಿ 5 ಎಕರೆಗಿಂತ ಕಡಿಮೆ ಇದ್ದರೆ 11ಇ ನಕ್ಷೆ ಕೊಡದಂತೆ ಸರ್ವೆ ಅಧಿಕಾರಿ, ಸಿಬ್ಬಂದಿಗೆ ಕಂದಾಯ ಇಲಾಖೆ ಕಟ್ಟಾಜ್ಞೆ ಮಾಡಿದೆ.
ಯಾರಿಗೆಲ್ಲ ಮಾನ್ಯ?: ಕ್ರಯದ ಬಗ್ಗೆ 11ಇ ನಕ್ಷೆ ವಿತರಿಸುವಾಗ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಜಂಟಿಯಾಗಿ ಕ್ರಯಕ್ಕೆ ಮುಂದಾಗಿರುವ ಪ್ರಕರಣಗಳಲ್ಲಿ ತಲಾ 5 ಎಕರೆಗಿಂತ ಕಡಿಮೆ ವಿಸ್ತೀರ್ಣ ಇದ್ದರೆ ನಕ್ಷೆ ತಯಾರಿಸುವಂತಿಲ್ಲ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಸರ್ವೆ ನಂಬರು/ಹಿಸ್ಸಾ ಅಥವಾ ಪಹಣಿಗಳು ಕನಿಷ್ಠ ವಿಸ್ತೀರ್ಣಗಳಿಗಿಂತ ಕಡಿಮೆ ಇದ್ದರೂ, ಅಂತಹ ಸರ್ವೆ ನಂಬರ್/ಹಿಸ್ಸಾ ಪಹಣಿ ಹಾಗೆಯೇ ಮುಂದುವರಿಸಲಿದ್ದು,ಅವು ಪೂರ್ಣ ಮಾನ್ಯ ಆಗಿರುತ್ತವೆ.
ಪಿತ್ರಾರ್ಜಿತವಾಗಿ/ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ಆದೇಶದ ಮೇಲೆ ಬಂದಿರುವ ಭೂಮಿ ಕನಿಷ್ಠ ವಿಸ್ತೀರ್ಣಗಳಿಗಿಂತ ಕಡಿಮೆ ಇದ್ದರೂ ಹೊಸ ಪಹಣಿ ರಚಿಸಬಹುದು, ಪೋಡಿ ಸಹ ಮಾಡಬಹುದು. ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿ ಇರುವ ಮಾಲೀಕರ ಹಕ್ಕುಗಳ ಪ್ರಕಾರ ಪೋಡಿ ಕನಿಷ್ಠ ವಿಸ್ತೀರ್ಣಗಳಿಗಿಂತ ಕಡಿಮೆ ಇದ್ದರು ಪೋಡಿ ಮಾಡಬಹುದು ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.
ಡಿಜಿಟಲ್ ಖಾತಾ ಜತೆ 11ಇ ಸಂಕಷ್ಟ: ರಾಜ್ಯವ್ಯಾಪಿ ಕೃಷಿಯೇತರ ಸ್ಥಿರಾಸ್ತಿಗಳಿಗೆ ಡಿಜಿಟಲ್ ಖಾತಾ ಕಡ್ಡಾಯ ಮಾಡಲಾಗಿದೆ. ಇಲ್ಲವಾದರೆ, ದಸ್ತಾವೇಜು ನೋಂದಣಿ ನಡೆಯುವುದಿಲ್ಲ. ಇದೀಗ ಪ್ಲಾಂಟೇಶನ್ ಭೂಮಿಗೆ 11ಇ ಸಿಗದೆ ಇದ್ದರೆ ಕಷ್ಟ ಕಾಲಕ್ಕೆ 1 ಅಥವಾ 2 ಎಕರೆ ಭೂಮಿ ಮಾರಾಟ ಮಾಡಿ ಅಥವಾ ರಸ್ತೆಬದಿ ಒಂದಿಷ್ಟು ಭೂಮಿ ಮಾರಾಟ ಮಾಡಿ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಆಗಿದೆ. ಸ್ಥಳೀಯ ಅಧಿಕಾರಿಗಳು ಅಕ್ರಮ ರೆಸಾರ್ಟ್, ಹೋಂ ಸ್ಟೇ ನಿರ್ವಣಕ್ಕೆ ಅವಕಾಶ ಕೊಟ್ಟು ಇದೀಗ ಭೂ ಮಾಲೀಕರ ಮೇಲೆ ಗದಾಪ್ರಹಾರ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಯಾರಿಗೆ ಹೆಚ್ಚು ಅನ್ವಯ?: ಕೊಡಗು, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಾಗಿ ಪ್ಲಾಂಟೇಶನ್ ಕಂಡು ಬರುತ್ತವೆ. ಪ್ಲಾಂಟೇಶನ್ ಕುರಿತು ಭೂ ಕಂದಾಯ ಅಧಿನಿಯಮ 1964ರ ಕಲಂ 2(8)(ಬಿ)ರಲ್ಲಿ ವ್ಯಾಖ್ಯಾನ ಸಹ ಮಾಡಲಾಗಿದೆ. ಉಳಿದಂತೆ ತರಿ ಮತ್ತು ಖುಷ್ಕಿ ಭೂಮಿಗೆ ಈ ಆದೇಶ ಅನ್ವಯ ಆಗುವುದಿಲ್ಲ. ಈಗಾಗಲೇ ಕೃಷಿ ಭೂಮಿಗೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣ ಇದ್ದರೆ 11ಇ ನಕ್ಷೆ ವಿತರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತೋಟದ ಬೆಳೆಗಳ ಭೂಮಿಯನ್ನು ತುಂಡು ಮಾಡಿ ಕೃಷಿ ಭೂಮಿ ಎಂದು ಬೇಕಾಬಿಟ್ಟಿ ಮಾರಾಟವಾಗುತ್ತಿರುವ ದೂರುಗಳು ವ್ಯಾಪಕವಾಗಿ ಬಂದಿವೆ. ಆದ್ದರಿಂದ ನಿಯಮಗಳನ್ನು ಮಾಡಲಾಗಿದೆ.
| ಕೃಷ್ಣ ಬೈರೇಗೌಡ ಕಂದಾಯ ಸಚಿವ