ಹಿರಿಯರತ್ತ ಇರಲಿ ಕಾಳಜಿ

Senior Citizens
Published on

ಪೀಳಿಗೆಯ ನಡುವೆ ಸಂವಹನ ಅಂತರ  ಸರ್ಕಾರದಿಂದ ಹಲವು ಯೋಜನೆಗಳು

ಬೆಂಗಳೂರು: ಆಧುನಿಕತೆಯ ಯಾಂತ್ರಿಕ ಜೀವನದಲ್ಲಿ ಕುಟುಂಬದ ವ್ಯಾಖ್ಯಾನ ಬದಲಾಗಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಕಿರಿಯರ ಏಳಿಗೆಗೆ ಜೀವ ಸವೆಸಿದ ಹಿರಿಯ ಜೀವಗಳು ಕೊನೆಗಾಲದಲ್ಲಿ ಆರೈಕೆ ಮಾಡುವವರಿಲ್ಲದೆ ವೃದ್ಧಾಶ್ರಮ ಸೇರುವ ಅನಿವಾರ್ಯ ಸ್ಥಿತಿ ನಿರ್ವಣವಾಗಿದೆ.

ಇಂದು ವಿಶ್ವ ಹಿರಿಯ ನಾಗರಿಕರ ದಿನ

ತಲೆಮಾರುಗಳ ನಡುವಿನ ಅಂತರದಿಂದ ವಿಷಯಗಳ ಅಭಿವ್ಯಕ್ತತೆಯಲ್ಲಿ ವಿರೋಧಾಭಾಸಗಳು ಉಂಟಾಗಿ, ಹಿರಿಯ ಹಾಗೂ ಕಿರಿಯರ ನಡುವಿನ ಬಾಂಧವ್ಯ ಶಿಥಿಲಗೊಳ್ಳುತ್ತಿದೆ. ಪರಿಣಾಮ ಬದುಕಿನ ಸಂಧ್ಯಾಕಾಲದಲ್ಲಿ ಒಂಟಿತನ, ಮಾನಸಿಕ ತುಮುಲ, ಆರ್ಥಿಕ ಮುಗ್ಗಟ್ಟು, ಅನಾರೋಗ್ಯದೊಂದಿಗೆ ಅಂತ್ಯ ಕಾಣುತ್ತಿದ್ದಾರೆ. ಹೀಗಾಗಿ ಹಿರಿಯರಿಗೆ ಕೊನೆಗಾಲದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಡುವುದು ಸಮಾಜ ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿರಿಯ ನಾಗರಿಕರ ರಾಷ್ಟ್ರ ಹಾಗೂ ರಾಜ್ಯ ನೀತಿ ಮತ್ತು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007 ಹಾಗೂ ಅಧಿನಿಯಮ 2009ರ ಅವಕಾಶಗಳನ್ವಯ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಮುಖಾಂತರ ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದೆ.

ಗುರುತಿನ ಚೀಟಿ ನೀಡುವುದು, ಹಗಲು ಯೋಗಕ್ಷೇಮ ಕೇಂದ್ರಗಳು, ವೃದ್ಧಾಶ್ರಮಗಳು, ಸಂಚಾರಿ ವೈದ್ಯಕೀಯ ಘಟಕಗಳು ವ್ಯವಸ್ಥೆ, ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ಆರ್ಥಿಕ ಸೌಲಭ್ಯ ಕಲ್ಪಿಸಿವೆ. ಜತೆಗೆ ವೃದ್ಧರ ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಕಿರುಕುಳ, ಕಾನೂನು ತೊಡಕು ಸೇರಿ ಯಾವುದೇ ಬಗೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಉಚಿತ ಸಹಾಯವಾಗಿ 1090 ವ್ಯವಸ್ಥೆ ಸಹ ಒದಗಿಸಲಾಗಿದೆ.

39.51 ವೃದ್ಧ ಫಲಾನುಭವಿಗಳು

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 9.6 ವೃದ್ಧರಿದ್ದಾರೆ. ಅಂದರೆ 58,65,000 ಮಂದಿ ವೃದ್ಧರು ಗುರುತಿನ ಚೀಟಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ ಅ.30 ಅಂಕಿ ಅಂಶಗಳ ಪ್ರಕಾರ 39,51,594 ವೃದ್ಧರು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. 60 ವರ್ಷ ಮೇಲ್ಪಟ್ಟ ಎಲ್ಲ ವರ್ಗದ ಹಿರಿಯರಿಗೂ ಗುರುತಿನ ಚೀಟಿ ನೀಡಲಾಗುವುದು.

ವೃದ್ಧರಿಗಿರುವ ಯೋಜನೆಗಳು

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ನಾಲ್ಕು ವರ್ಷ(60-64 ವರ್ಷಗಳವರೆಗೆ) ಮಾಸಿಕ 600 ರೂ. ಪಿಂಚಣಿ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟವರಿಗೆ ಜೀವನಪರ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟಾರೆ ಮಾಸಿಕ ಒಂದು ಸಾವಿರ ರೂ. ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಫಲಾನುಭವಿಗಳು ಬಿಪಿಎಲ್ ಕಾರ್ಡದಾರರಾಗಿರಬೇಕು.

ರಾಜ್ಯ ಸರ್ಕಾರದ ಸೌಲಭ್ಯಗಳು

ಸಂಧ್ಯಾಕಾಲದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ವೃದ್ಧರಿಗಾಗಿ ರಾಜ್ಯಾದ್ಯಂತ 29 ವೃದ್ದಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಕುಟುಂಬದ ಜತೆಗೆ ಇರುವ ವೃದ್ಧರು ದಿನ ಕಳೆಯಲು ಅನುವಾಗುವಂತೆ 25 ಹಗಲು ಯೋಗಕ್ಷೇಮ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇದ್ದು ಮನೆಗೆ ತೆರಳಬಹುದು. 25 ಸಹಾಯವಾಣಿ ಕೇಂದ್ರಗಳಿವೆ. ಸಹಾಯವಾಣಿ 1090 ಮೂಲಕ ವೃದ್ಧರ ಎಲ್ಲಾ ಬಗೆಯ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು, ಯಾರು ಬೇಕಾದರೂ ಇದಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ವೃದ್ಧರ ಚಿಕಿತ್ಸೆಗಾಗಿ ಹತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಜೀಡಿಯಾಟ್ರಿಕ್ ಸೆಂಟರ್ ಪ್ರಾರಂಭಿಸಲಾಗಿದ್ದು, ಚಿಕಿತ್ಸೆಯೊಂದಿಗೆ ಕೌನ್ಸಲಿಂಗ್ ಸಹ ಮಾಡಲಾಗುತ್ತದೆ. ಈ ಸೇವೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಕಾರ್ಯ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಯೋಜನೆಗಳು

ಕೇಂದ್ರ ಸರ್ಕಾರದಡಿಯಲ್ಲಿ ಕರ್ನಾಟಕದಲ್ಲಿ 40 ವೃದ್ಧಾಶ್ರಮಗಳಿದ್ದು, ದಾವಣಗೆರೆಯಲ್ಲಿ ಡಿಮೆನ್ಷಿಯಾ ಡೇಕೇರ್ ಕೇಂದ್ರವಿದೆ. ಕೋಲಾರದಲ್ಲಿ ಮೊಬೈಲ್ ಮೆಡಿಕಲ್ ಘಟಕ ಹಾಗೂ ಫಿಸಿಯೋಥೆರಪಿ ಘಟಕ, ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ಪ್ರಾದೇಶಿಕ ಸಂಪನ್ಮೂಲ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಖಾಸಗಿ ವಿಮೆಗಳ ಮೊರೆ

ಸರ್ಕಾರದ ಬಹುತೇಕ ಯೋಜನೆಗಳು ಕೇವಲ ಬಿಪಿಎಲ್ ಕಾರ್ಡದಾರರಿಗೆ ಇರುವುದರಿಂದ ಉಳಿದವರು ತಮ್ಮ ಸಂಧ್ಯಾಕಾಲದ ಜೀವನ ಸುಗಮವಾಗಿ ಸಾಗಲೆಂದು ಖಾಸಗಿ ವಿಮೆಗಳ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಹಣ ಪಾವತಿ ಮಾಡುವುದರಿಂದ ವೃದ್ಧಾಪ್ಯದಲ್ಲಿ ಆರ್ಥಿಕ ನೆರವು ಹಾಗೂ ಕೆಲ ಆರೋಗ್ಯ ಯೋಜನೆಗಳ ಸೌಲಭ್ಯವನ್ನು ಮಾಡಿಕೊಂಡಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net