ನಾಗಾಗಳ ನಾಡಿನಲ್ಲಿ ಬಂಡಾಯದ ಇತಿಹಾಸ; ಸೇನೆಯ ವಿಶೇಷಾಧಿಕಾರ ಮತ್ತೆ ಗರಿಗೆದರಿದ ಚರ್ಚೆ..

Naga
Published on

ಗಡಿಯಾಚೆಯಿಂದ ಒಳನುಗ್ಗಿ ನಡೆಸಲಾಗುವ ಭಯೋತ್ಪಾದನೆ ಚಟುವಟಿಕೆಗಳನ್ನು ತಡೆಯಲು ಭಾರತೀಯ ಸೇನೆಗೆ ‘ಸಶಸ್ತ್ರ ಸೇನಾ ವಿಶೇಷಾಧಿಕಾರ ಕಾಯ್ದೆ-1958’(ಆಫ್​ಸ್ಪಾ) ರೂಪಿಸಲಾಗಿದೆ. ನಾಗರಿಕ ಸಮಾಜವನ್ನು ರಕ್ಷಿಸಲು ನೀಡಲಾಗಿರುವ ಈ ಅವಕಾಶವನ್ನು ಸೇನೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಅನೇಕ ಬಾರಿ ಕೇಳಿಬಂದಿದ್ದರೂ ಇದೀಗ ತಪ್ಪು ಗುರುತಿನಿಂದಾಗಿ 14 ನಾಗರಿಕರ ಹತ್ಯೆ ನಡೆದಿರುವುದು ಈ ಆರೋಪದ ಕಿಡಿಯನ್ನು ಬೆಂಕಿಯಾಗಿಸಿದೆ. ನಾಗಾಲ್ಯಾಂಡ್​ನಲ್ಲಿ ಬಂಡಾಯ ಏಕೆ, ಅದರ ಹಿನ್ನೆಲೆ ಏನು? ಈ ಕುರಿತಾದ ಮಾಹಿತಿ ಇಲ್ಲಿದೆ.

ಏನಿದು ನಾಗಾ ಬಿಕ್ಕಟ್ಟು?

ಬ್ರಿಟಿಷ್ ಆಳ್ವಿಕೆ ಕಾಲ ಅದು. 1826ರಲ್ಲಿ ಅಸ್ಸಾಂ ಬ್ರಿಟಿಷ್ ಆಡಳಿತಕ್ಕೊಳಪಟ್ಟಿತ್ತು. ತರುವಾಯ 1881ರಲ್ಲಿ ನಾಗಾ ಬೆಟ್ಟಗಳು ಕೂಡ ಬ್ರಿಟಿಷ್ ಇಂಡಿಯಾದ ಭಾಗವಾಗಿ ಬಿಟ್ಟವು. 1918ರಲ್ಲಿ ನಾಗಾ ಕ್ಲಬ್ ರಚನೆ ಮೂಲಕ,‘ನಮ್ಮಷ್ಟಕ್ಕೆ ನಾವಿರುತ್ತೇವೆ, ಬಿಟ್ಟುಬಿಡಿ’ ಎಂಬ ಸಂದೇಶವನ್ನು ರವಾನಿಸಿದ್ದಾಗಿ ಸೈಮನ್ ಆಯೋಗ 1929ರಲ್ಲಿ ಉಲ್ಲೇಖಿಸಿತ್ತು. ಇದು ನಾಗಾ ಜನರ ಮೊದಲ ಪ್ರತಿರೋಧ ಎಂದು ಹೇಳಲಾಗುತ್ತಿದೆ. ತರುವಾಯ 1946ರಲ್ಲಿ ನಾಗಾ ನ್ಯಾಷನಲ್ ಕೌನ್ಸಿಲ್ (ಎನ್​ಎನ್​ಸಿ) ರಚನೆಯಾಯಿತು. ಅಂಗಾಮಿ ಝುಪು ಪಿಝೊ ಇದರ ನಾಯಕ. 1947ರ ಆಗಸ್ಟ್ 14ರಂದು,‘ನಾಗಾಲ್ಯಾಂಡ್ ಇನ್ನು ಸ್ವತಂತ್ರ ರಾಜ್ಯ’ ಎಂದು ಈತ ಘೊಷಿಸಿದ. ಅಷ್ಟೇ ಅಲ್ಲ, 1951ರಲ್ಲಿ ‘ಸಾರ್ವಭೌಮ ನಾಗಾ ರಾಜ್ಯ’ ರಚನೆಗಾಗಿ ಜನಮತ ಗಣನೆಯನ್ನೂ ಎನ್​ಎನ್​ಸಿ ನಡೆಸಿತ್ತು. ಆ ಸಂದರ್ಭದಲ್ಲಿ ಶೇಕಡ 99ರಷ್ಟು ಜನ ‘ಸ್ವತಂತ್ರ’ ನಾಗಾಲ್ಯಾಂಡ್ ಪರ ಮತ ಚಲಾಯಿಸಿದ್ದರು. ಆದರೆ, ಇದು ಅಸ್ತಿತ್ವಕ್ಕೆ ಬರುವುದು ಕಷ್ಟವೆನಿಸಿದಾಗ 1952ರ ಮಾರ್ಚ್ 22ರಂದು ಅಂಗಾಮಿ ಝುಪು ಪಿಝೊ ಭೂಗತ ನಾಗಾ ಫೆಡರಲ್ ಗವರ್ನಮೆಂಟ್ (ಎನ್​ಎಫ್​ಜಿ) ಮತ್ತು ನಾಗಾ ಫೆಡರಲ್ ಆರ್ವಿು(ಎನ್​ಎಫ್​ಎ) ಯನ್ನು ಸ್ಥಾಪಿಸಿದರು. ಈ ಬಂಡುಕೋರ ಚಟುವಟಿಕೆ ಹತ್ತಿಕ್ಕಲು ಭಾರತ ಸರ್ಕಾರ ಸೇನೆಯನ್ನು ಅಲ್ಲಿಗೆ ಕಳುಹಿಸಿತು. 1958ರಲ್ಲಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು ಜಾರಿಗೆ ತಂದಿತು.

ಶಾಂತಿಸ್ಥಾಪನೆಗೆ ಭಂಗ

ಎನ್​ಎಸ್​ಸಿಎನ್ ಸೇರಿ ಅನೇಕ ನಾಗಾ ಬಂಡುಕೋರ ಸಂಘಟನೆಗಳ ಜತೆಗೆ ಕೇಂದ್ರ ಸರ್ಕಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯುದ್ಧವಿರಾಮವನ್ನು ಮೊದಲಿಗೆ ಮುರಿದ ಆರೋಪ ಸೇನೆಯ ಮೇಲೆ ಹೊರಿಸಲಾಗುತ್ತಿದೆ. ಆದರೆ ಇದನ್ನು ಮೊದಲು ಮುರಿದದ್ದು ಬಂಡುಕೋರರೇ. ಅಸ್ಸಾಂ ರೈಫಲ್ಸ್​ನ 46ನೇ ತುಕಡಿಯ ಕಮಾಂಡರ್ ಆಗಿದ್ದ ಕರ್ನಲ್ ವಿಪ್ಲವ್ ತ್ರಿಪಾಠಿ ತಮ್ಮ ಕುಟುಂಬದ ಜತೆಗೆ ತೆರಳುತ್ತಿರುವಾಗ ಉಗ್ರರ ದಾಳಿಗೆ ಇದೇ ನ.13ರಂದು ಬಲಿಯಾದರು. ಈಗಾಗಲೇ ಶಾಂತಿಸ್ಥಾಪನೆಯತ್ತ ಸಾಗಿದ್ದ ಈಶಾನ್ಯ ರಾಜ್ಯದಲ್ಲಿ ಮತ್ತೆ ಉಗ್ರರ ಚಟುವಟಿಕೆ ಹೆಚ್ಚಿದ್ದಕ್ಕೆ ಇದು ಸಾಕ್ಷಿಯಾಗಿತ್ತು. ಹಾಗಾಗಿ, ಉಗ್ರನಿಗ್ರಹದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಇದೀಗ ನಾಗಾಲ್ಯಾಂಡ್ ಸರ್ಕಾರದ ಭಾಗವಾಗಿರುವ ಬಿಜೆಪಿ ಮೇಲೆಯೂ ಹೆಚ್ಚಿತು. ಅನೇಕ ವರ್ಷಗಳಿಂದ ಪ್ರದೇಶವನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದ ಸೇನೆಯ ಮೇಲೆಯೂ, ಉಗ್ರರನ್ನು ನಿಗ್ರಹಿಸಬೇಕಾದ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಇದೇ ಒತ್ತಡದ ಸಂದರ್ಭದ ಲಾಭ ಪಡೆದು ತಪು್ಪ ಗುಪ್ತಚರ ಮಾಹಿತಿ ನೀಡಿ ಸೇನೆಯನ್ನು ದಾರಿ ತಪ್ಪಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಹೆಚ್ಚಿದ ಒತ್ತಡ: ಆಫ್​ಸ್ಪಾವನ್ನು ಜಾರಿ ಮಾಡಿದಂದಿನಿಂದಲೂ ಅದಕ್ಕೆ ವಿರೋಧ ಇದ್ದೇ ಇದೆ. 2000ನೇ ಇಸವಿಯಲ್ಲಿ ಮಣಿಪುರದ ಇಂಫಾಲ್ ಬಳಿ ಅಸ್ಸಾಂ ರೈಫಲ್ಸ್ ಸೈನಿಕರು 10 ನಾಗರಿಕರನ್ನು ಹತ್ಯೆ ಮಾಡಿದರು ಎಂದು ಆರೋಪಿಸಲಾಯಿತು. ಆಗ 28 ವರ್ಷದವರಾಗಿದ್ದ ಇರೋಮ್ ಶರ್ವಿುಳಾ ಅವರು, ಆಪ್​ಸ್ಪಾ ಹಿಂಪಡೆಯಬೇಕು ಎಂದು ಉಪವಾಸ ಆರಂಭಿಸಿದರು. ಆತ್ಮಹತ್ಯೆ ಯತ್ನ ಆರೋಪದಲ್ಲಿ ಇರೋಮ್ ಅವರನ್ನು ಬಂಧಿಸಲಾಯಿತು. ಆನಂತರವೂ ಅವರು ಉಪವಾಸ ಕೊನೆಗೊಳಿಸದ ಕಾರಣ ಕೊಳವೆ ಮೂಲಕ ಆಹಾರ ನೀಡಲಾಗುತ್ತಿತ್ತು. 16 ವರ್ಷ ಇದೇ ಉಪವಾಸವನ್ನು ಮುಂದುವರಿಸಿ, 2016ರಲ್ಲಿ ಉಪವಾಸ ಕೊನೆಗೊಳಿಸಿದರು.

ಆಫ್​ಸ್ಪಾ ಎಂದರೇನು?

ದೇಶದ ಭದ್ರತೆಗೆ ಅಪಾಯವನ್ನು ತಂದೊಡ್ಡುವ ಪ್ರದೇಶಗಳನ್ನು ‘ಸೂಕ್ಷ್ಮ ಪ್ರದೇಶ ಅಥವಾ ಅಶಾಂತಿಯುಳ್ಳ ಪ್ರದೇಶ’ ಎಂದು ಭದ್ರತಾ ಸಂಸ್ಥೆಗಳು ಗುರುತಿಸುತ್ತವೆ. ಆ ಪ್ರದೇಶದಲ್ಲಿ ಸಾಮಾನ್ಯ ರೀತಿಯಲ್ಲಿ ನಡೆಯುವ ಪ್ರತಿಭಟನೆ, ಹೊಡೆದಾಟಗಳಲ್ಲದೆ, ವಿಶೇಷವಾಗಿ ಬಂದೂಕುಧಾರಿಗಳು ನಡೆಸುವ ಅಪಾಯವನ್ನು ಇದರಲ್ಲಿ ಪರಿಗಣಿಸಲಾಗುತ್ತದೆ. ಕೇವಲ ಒಂದೆರಡು ಅಹಿತಕರ ಘಟನೆಗಳು ನಡೆದ ಕೂಡಲೇ ಆ ಪ್ರದೇಶವನ್ನು ಅಶಾಂತಿ ಎಂದು ಹೇಳಲಾಗದು. ಇದಕ್ಕಾಗಿಯೇ ಅಶಾಂತಿಯುಳ್ಳ ಪ್ರದೇಶಗಳ ಕಾಯ್ದೆ-1976ಕ್ಕೆ ಅನುಗುಣವಾಗಿ, ಕನಿಷ್ಠ ಮೂರು ತಿಂಗಳವರೆಗೆ ಅಶಾಂತಿಯ ಸ್ಥಿತಿ ಮುಂದುವರಿದಿರಬೇಕಾಗುತ್ತದೆ. ಆಫ್​ಸ್ಪಾ ಕಾಯ್ದೆಯನ್ವಯ, ಸಮಾಜಕ್ಕೆ ಅಪಾಯಕಾರಿ ಎಂದು ಸೇನೆಯು ಪರಿಗಣಿಸಿದರೆ ಅಂತಹ ವ್ಯಕ್ತಿಯ ಮೇಲೆ ಯಾವುದೇ ಪೂರ್ವಾದೇಶವಿಲ್ಲದೆ ಗುಂಡು ಚಲಾಯಿಸಬಹುದು ಹಾಗೂ ಯಾವುದೇ ವಾರಂಟ್ ಇಲ್ಲದೆ ತಪಾಸಣೆ ಅಥವಾ ಬಂಧನ ಮಾಡಬಹುದು. ಇಲ್ಲಿ ಸೈನಿಕರು ತಪು್ಪ ಎಸಗಿದರೆ ಸಾಮಾನ್ಯ ನಾಗರಿಕರ ರೀತಿಯಲ್ಲಿ ನ್ಯಾಯಾಲಯದಿಂದ ಶಿಕ್ಷೆ ನೀಡುವುದರಿಂದ ರಕ್ಷಣೆ ಇರುತ್ತದೆ.

1958ರಲ್ಲಿ ಅಂದಿನ ಅಸ್ಸಾಂ ಭಾಗವಾಗಿದ್ದ ನಾಗಾ ಗುಡ್ಡಗಾಡು ಪ್ರದೇಶದಲ್ಲಿ ಮೊದಲಿಗೆ ಆಫ್​ಸ್ಪಾ ಜಾರಿ ಮಾಡಲಾಯಿತು. ನಂತರದ ಒಂದು ದಶಕದಲ್ಲಿ ಈ ಕಾಯ್ದೆಯ ವ್ಯಾಪ್ತಿಯು ಅಸ್ಸಾಂ ಜತೆಗೆ, ಈಶಾನ್ಯ ರಾಜ್ಯಗಳ ‘ಸೆವೆನ್ ಸಿಟರ್ಸ್’ ಎಂದೇ ಕರೆಯಲ್ಪಡುವ ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ಮಿಜೊರಾಂ, ನಾಗಾಲ್ಯಾಂಡ್ ಹಾಗೂ ತ್ರಿಪುರಾಕ್ಕೆ ವಿಸ್ತರಣೆಯಾಯಿತು. ಸದ್ಯ ಅಸ್ಸಾಂ, ಮಣಿಪುರ ಹಾಗೂ ನಾಗಾಲ್ಯಾಂಡ್​ನ ಕೆಲವು ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿದೆ. ಖಲಿಸ್ತಾನ ಉಗ್ರರ ಉಪಟಳ ತಡೆಯಲು ಪಂಜಾಬ್, ಹರಿಯಾಣದಲ್ಲಿ 1983ರಲ್ಲಿ ಕಾಯ್ದೆ ಜಾರಿ ಮಾಡಲಾಯಿತು, ನಂತರ ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ 1997ರಲ್ಲಿ ಹಿಂಪಡೆಯಲಾಯಿತು. ಪಾಕಿಸ್ತಾನ ಪ್ರೇರಿತ ಉಗ್ರವಾದಿಗಳ ಉಪಟಳ ಹೆಚ್ಚಿದ ಹಿನ್ನೆಲೆಯಲ್ಲಿ 1990ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಆಪ್​ಸ್ಪಾ ಜಾರಿ ಮಾಡಲಾಯಿತು.

ಗ್ರೇಟರ್ ನಾಗಾಲಿಮ್ ಬೇಡಿಕೆ

ನಾಗಾ ಜನರ ವಸತಿ ಪ್ರದೇಶಗಳನ್ನೆಲ್ಲ ಸೇರಿಸಿ ‘ಗ್ರೇಟರ್ ನಾಗಾಲಿಮ್ ರಚಿಸಬೇಕು ಎಂಬುದು ಎನ್​ಎಸ್​ಸಿಎನ್ (ಐಎಂ) ನಾಯಕರ ಪ್ರಾಥಮಿಕ ಬೇಡಿಕೆ. ಇದರಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಹಾಗೂ ಮ್ಯಾನ್ಮಾರ್​ನ ಭೂಭಾಗವೂ ಸೇರಿದೆ. ಗ್ರೇಟರ್ ನಾಗಾಲಿಮ್ ಒಟ್ಟು 1.2 ಲಕ್ಷ ಚದರ ಕಿ.ಮೀ. ವ್ಯಾಪ್ತಿಯದ್ದಾಗಿದೆ. ಈಗಿರುವ ನಾಗಾಲ್ಯಾಂಡ್ ವ್ಯಾಪ್ತಿ ಕೇವಲ 16,527 ಚ.ಕಿ.ಮೀ. ನಾಗಾಲ್ಯಾಂಡ್ ವಿಧಾನ ಸಭೆ ಕೂಡ ಇದನ್ನು ಐದು ಬಾರಿ (1964 ಡಿಸೆಂಬರ್, 1970 ಆಗಸ್ಟ್, 1994 ಸೆಪ್ಟೆಂಬರ್, 2003 ಡಿಸೆಂಬರ್, 2015 ಜುಲೈ 27) ಅನುಮೋದಿಸಿ ನಿರ್ಣಯ ಕೈಗೊಂಡಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿ: ನಾಗಾ ಬಂಡುಕೋರರ ಸಂಘಟನೆ ಎನ್​ಎಸ್​ಸಿಎನ್(ಕೆ) ಉಗ್ರರು ಎಂಬ ಗುಮಾನಿ ಮೇಲೆ ಸೇನೆ ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ 14 ನಾಗರಿಕರು ಹತ್ಯೆಯಾದ ಹಿನ್ನೆಲೆಯಲ್ಲಿ ಇಡೀ ಈಶಾನ್ಯ ರಾಜ್ಯ ಭುಗಿಲೆದ್ದಿದೆ. ಗೃಹಸಚಿವ ಅಮಿತ್ ಷಾ ಸಂಸತ್​ನಲ್ಲಿ ಸೋಮವಾರ ನೀಡಿದ ಹೇಳಿಕೆಯಂತೆ ನಾಗಾಲ್ಯಾಂಡ್ ‘ಗಂಭೀರವಾಗಿದೆ ಹಾಗೂ ನಿಯಂತ್ರಣದಲ್ಲಿದೆ’ ಎನ್ನುವ ವಿಚಿತ್ರ ಪರಿಸ್ಥಿತಿ ಯಲ್ಲಿದೆ. ಇದೇ ಪರಿಸ್ಥಿತಿ ಆಪ್​ಸ್ಪಾ ಕಾಯ್ದೆಗೂ ಒದಗಿಬಂದಿದೆ. ಆಪ್​ಸ್ಪಾ ಉಳಿಯುತ್ತದೆಯೇ ಅಥವಾ ಹಿಂಪಡೆಯಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಗುಪ್ತಚರ ಮೂಲದ ಎಚ್ಚರಿಕೆ

ಸೇನೆಯು ಉಗ್ರರ ಚಲನವಲನಗಳ ಮೇಲೆ ನೇರವಾಗಿ ಕಣ್ಣಿಡುವುದಕ್ಕಿಂತಲೂ ಸೂಕ್ಷ್ಮವಾಗಿ ಗುಪ್ತಚರ ಮೂಲಗಳನ್ನು ಅವಲಂಬಿಸಿರುತ್ತವೆ. ಶನಿವಾರ 14 ನಾಗರಿಕರು ಮೃತಪಟ್ಟಿರುವ ನಾಗಾಲ್ಯಾಂಡ್​ನ ಮೊನ್ ಪ್ರದೇಶದಲ್ಲಿ ಉಗ್ರರು ವಾಹನದ ಮೂಲಕ ತೆರಳುತ್ತಿದ್ದಾರೆ ಎಂಬ ಮಾಹಿತಿ ಗುಪ್ತಚರ ಮೂಲಗಳಿಂದ ಲಭಿಸಿತು. ಇದನ್ನು ಆಧರಿಸಿ ಆ ವಾಹನ ಸಾಗಬಹುದಾದ ಮಾರ್ಗದಲ್ಲಿ ಸೇನೆಯ ಒಂದು ತಂಡ ಆಂಬುಷ್(ಗೌಪ್ಯವಾಗಿ ಅಡಗು) ಆಗಿತ್ತು. ಕೇಂದ್ರ ಗೃಹಸಚಿವ ಅಮಿತ್ ಷಾ ಸೋಮವಾರ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಗುಪ್ತಚರ ಮೂಲಗಳು ತಿಳಿಸಿದ ಮಾದರಿಯ ವಾಹನ ಆಗಮಿಸುತ್ತಿದ್ದಂತೆಯೇ, ವಾಹನವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ವಾಹನ ಚಾಲಕ ಸೂಚನೆಗೆ ಬೆಲೆ ಕೊಡದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಬಹುಶಃ ಉಗ್ರರು ಅಡಗಿದ್ದಾರೆ ಎಂಬ ಗುಮಾನಿಯಲ್ಲಿ ಗುಂಡು ಹಾರಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸೇನೆ ಸಾಂಪ್ರದಾಯಿಕವಾಗಿ ವಿವಿಧ ಮಾರುವೇಶದಲ್ಲಿರುವ ಏಜೆಂಟ್​ಗಳ ಮಾಹಿತಿಯನ್ನು ಪಡೆದು ಕಾರ್ಯಾಚರಣೆ ನಡೆಸುತ್ತದೆ. ಇದನ್ನು ಹ್ಯೂಮ್ ಇಂಟ್(ಹ್ಯೂಮನ್ ಇಂಟೆಲಿಜೆನ್ಸ್) ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಟೆಕ್ ಇಂಟ್(ತಂತ್ರಜ್ಞಾನಾಧಾರಿತ) ಗುಪ್ತಚರ ವ್ಯವಸ್ಥೆಯೂ ಅಭಿವೃದ್ಧಿಯಾಗಿದೆ. ಆದರೆ ಮಾನವ ಗುಪ್ತಚರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಾಗಿಲ್ಲ. ಮಾನವ ಗುಪ್ತಚರದಲ್ಲಿ ಅನೇಕ ಬಾರಿ ಏಜೆಂಟ್​ಗಳ ರೂಪದಲ್ಲಿ ಶತ್ರುಗಳೂ ಸೇರಿಕೊಂಡಿರುತ್ತಾರೆ. ಬೇಕೆಂದೇ ಸೇನೆಯನ್ನು ತಪು್ಪದಾರಿಗೆ ಎಳೆದು ತಪ್ಪು ಗುರಿ ನಿಗದಿಪಡಿಸುವ ಅಪಾಯ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೂಲಗಳ ಮಾಹಿತಿಯನ್ನು ಮತ್ತಷ್ಟು ಮೂಲಗಳಿಂದ ಖಚಿತಪಡಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net