

ಹನೂರು: ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಅವರು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಆದ್ದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಮ.ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ಹಲವು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ ಕೆಲವು ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಶೀಘ್ರ ಪೂರ್ಣಗೊಳಿಸಬೇಕು ಎಂದರು.
ನಿರ್ಲಕ್ಷೃ ಅಥವಾ ಕಾಮಗಾರಿ ಕಳಪೆಯಿಂದ ಕೂಡಿದ್ದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಮುಖ್ಯಮಂತ್ರಿಗಳು ಮ.ಬೆಟ್ಟಕ್ಕೆ ಆಗಮಿಸುವ ವೇಳೆ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ. ಹಾಗಾಗಿ 45 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ 386 ವಸತಿ ಕೊಠಡಿಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹಾಗೆಯೇ ಬಾಕಿಯಲ್ಲಿರುವ 27ಕೋಟಿ ರೂ. ವೆಚ್ಚದ ಒಳಚರಂಡಿ, 8.5 ಕೋಟಿ ರೂ. ವೆಚ್ಚದ ಮೆಗಾ ಸೋಲಾರ್ ಪವರ್ ಪ್ಲಾಂಟ್ ಘಟಕ, ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ, ದೀಪದಗಿರಿ ಒಡ್ಡುವಿನಲ್ಲಿನ ಶ್ರೀ ಮಹದೇಶ್ವರರ ಜೀವನ ಚರಿತ್ರೆಯನ್ನು ಬಿಂಬಿಸುವ ಕಲಾಕೃತಿಗಳ ಮೂಸಿಯಂ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ: ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಡ ವರ್ಗದ ಭಕ್ತರು ಭೇಟಿ ನೀಡುತ್ತಾರೆ. ಹರಕೆಯ ರೂಪದಲ್ಲಿ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಇವರು ನೀಡಿದ ಹಣ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಬೇಕೇ ಹೊರತು ಪೋಲಾಗಬಾರದು. ಈ ಬಗ್ಗೆ ನಿಗಾ ವಹಿಸಬೇಕು. ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡುವುದರ ಮೂಲಕ ಗುಣಮಟ್ಟ ಪರಿಶೀಲನೆ ಮಾಡಬೇಕು. ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಈ ಬಗ್ಗೆ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ತಿಳಿಸುವುದರ ಜತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಮೂಲಕ ಆಕರ್ಷಣೆ ಉಂಟು ಮಾಡುವ ರೀತಿಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಮಾತನಾಡಿ, ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುವುದರ ಮೂಲಕ ಗುಣಮಟ್ಟದ ಬಗ್ಗೆ ನಿಗಾ ವಹಿಸಲಾಗಿದೆ. ಜತೆಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಈಗಾಗಲೇ ಸೂಚಿಸಲಾಗಿದೆ. ದೀಪಾವಳಿ ಜಾತ್ರೆ ಮುಗಿದ ಬಳಿಕ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಉದ್ಘಾಟನೆಗೆ ಸಿದ್ಧಪಡಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಅಗತ್ಯ ಸಲಹೆ, ಸೂಚನೆಯನ್ನು ಪಡೆಯಲಾಯಿತು.
ಮಹದೇಶ್ವರಬೆಟ್ಟ ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸುವುದರ ಮೂಲಕ ಭಕ್ತರ ಅನುಕೂಲಕ್ಕೆ ಸಮರ್ಪಿಸಬೇಕು ಎಂದು ಸೂಚಿಸಲಾಯಿತು.
ಸಭೆಯಲ್ಲಿ ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ. ಬಿ.ಟಿ.ಕವಿತಾ, ಡಿಸಿಎಫ್ ಡಾ.ಸಂತೋಷ್‌ಕುಮಾರ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಪಿಡಬ್ಲುೃಡಿ ಎಇ ಮಹೇಶ್, ಎಇಇ ಚಿನ್ನಣ್ಣ ಇತರರು ಇದ್ದರು.