

ಬೆಂಗಳೂರು: ವಿಧಾನ ಪರಿಷತ್ನಲ್ಲಿ ಆಡಳಿತ ಬಿಜೆಪಿ ನಿಚ್ಚಳ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶವು ಪಕ್ಷದ ಸ್ಥಾನ ಅಬಾಧಿತಗೊಳಿಸಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಪೈಕಿ ಪಶ್ಚಿಮ ಶಿಕ್ಷಕರ ಮತ್ತು ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಗೆದ್ದಿದ್ದು, ಆ ಮೂಲಕ ಮೇಲ್ಮನೆಯಲ್ಲಿ ಕಮಲ ಪಡೆದ ನಡೆದಿದ್ದೇ ಹಾದಿ ಎಂಬಂತಾಗಿದೆ.
ವಾಯವ್ಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಿಸಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಪತ್ರಿಕೆ ಮುದ್ರಣಕ್ಕೆ ತೆರಳುವ ವೇಳೆಗೆ ಪ್ರಕಟಗೊಂಡಿರಲಿಲ್ಲ. ಸದ್ಯದ ಲೆಕ್ಕಾಚಾರ ಪ್ರಕಾರ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೇರಿ ಸದಸ್ಯ ಬಲ 39ಕ್ಕೆ ಏರಿಕೆಯಾಗಿದೆ. ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಸೇರಿದರೆ 40 ಆಗಲಿದೆ.
ಪರಿಷತ್ನ ಒಟ್ಟು ಸದಸ್ಯರ ಸಂಖ್ಯೆ 75. ಬಹುಮತಕ್ಕೆ 38 ಸದಸ್ಯ ಬಲ ಅಗತ್ಯವಿದ್ದು, ನಿರೀಕ್ಷೆಯಂತೆ ಬಿಜೆಪಿ ಗುರಿ ಮುಟ್ಟಿದೆ. ಇದರಿಂದಾಗಿ ಮಸೂದೆಗಳು, ನೀತಿ-ನಿರ್ಧಾರಗಳಿಗೆ ಅಂಗೀಕಾರದ ಮಾರ್ಗ ಸುಗಮವಾಗಿದೆ. ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣಕ್ಕೆ ಹಿಂದೆಲ್ಲ ಮಹತ್ವದ ಮಸೂದೆಗಳು ಪ್ರತಿಪಕ್ಷಗಳಿಂದ ತಿರಸ್ಕೃತಗೊಂಡು ಬಿಜೆಪಿ ನಾಯಕರು ಇರಿಸುಮುರುಸು ಅನುಭವಿಸಿದ್ದರು.
ಮೈಸೂರು: ತೀವ್ರ ಕುತೂಹಲ ಕೆರಳಿಸಿದ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಪತ್ರಿಕೆ ಮುದ್ರಣಕ್ಕೆ ತೆರಳುವ ವೇಳೆಗೆ ಶೇ.50 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ 2,958 ಮತಗಳ ಮುನ್ನಡೆ ಪಡೆದುಕೊಂಡಿತ್ತು.
ಬನ್ನೂರಗೆ 3ನೇ ಬಾರಿ ಸೋಲು: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್. ಬಿ.ಬನ್ನೂರ 1,009 ಮತ ಪಡೆಯಲಷ್ಟೇ ಶಕ್ತವಾದರು. ಇನ್ನುಳಿದ ಪಕ್ಷೇತರ ಅಭ್ಯರ್ಥಿಗಳು ಸರಾಸರಿ ಮೂರಂಕಿ ದಾಟಲಿಲ್ಲ. ಆ ಮೂಲಕ ಬನ್ನೂರ ವಿಧಾನ ಪರಿಷತ್ ಚುನಾವಣೆಯಲ್ಲಿ 3ನೇ ಬಾರಿ ಸೋಲು ಅನುಭವಿಸಿದರು.
ಡಿಸಿ ಜತೆ ಜಗಳ ಮಾಡಿದ ಪಿಎ ಹೊರಕ್ಕೆ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಹೆಸರು ಹೇಳಿಕೊಂಡು, ಯಾವುದೇ ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಗುರು ಎಂಬ ಹೆಸರಿನ ಆಪ್ತಸಹಾಯಕನನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ತೀವ್ರ ತರಾಟೆಗೆ ತೆಗೆದುಕೊಂಡರು. ಮೊಂಡು ವಾದ ನಡೆಸಿದ್ದರಿಂದ ಕೆರಳಿದ ಡಿಸಿ, ಪೊಲೀಸರು
ಈತನನ್ನು ಹಿಡಿದ ಹೊರಗೆ ಹಾಕ್ರಿ ಎಂದು ಸೂಚನೆ ನೀಡಿದರು. ಸ್ಥಳದಲ್ಲಿದ್ದ ಪೊಲೀಸರು ಮತ ಎಣಿಕೆ ಕೇಂದ್ರದಿಂದ ಆತನನ್ನು ಹೊರಗೆ ಕಳುಹಿಸಿದರು.
ಕಾಂಗ್ರೆಸ್ ಪಕ್ಷದಿಂದ 1988ರಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಪ್ರಕಾಶ ಹುಕ್ಕೇರಿ, 1992-94ರವರೆಗೆ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದಾರೆ. 1994-2014ರ ವರೆಗೆ ಸತತ ಐದು ಬಾರಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಎಪಿಎಂಸಿ ಸಚಿವರಾಗಿ, ಸಕ್ಕರೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಹುಕ್ಕೇರಿ, ಈಗ ಮತ್ತೆ ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿ ಸುವ ಮೂಲಕ 2ನೇ ಬಾರಿ ಮೇಲ್ಮನೆ ಪ್ರವೇಶ ಮಾಡಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ.ಬಿ.ಶಂಕರಾನಂದ ಜತೆ ಕಾಂಗ್ರೆಸ್ ಪಕ್ಷ ಸೇರಿದ್ದ ಹುಕ್ಕೇರಿ, 4 ದಶಕಗಳಿಂದ ಕಾಂಗ್ರೆಸ್ನಲ್ಲೇ ಇದ್ದಾರೆ.
ಕೌಟುಂಬಿಕ ವಿವರ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ 1947ರ ಮಾರ್ಚ್ 5ರಂದು ಕೃಷಿ ಕುಟುಂಬದಲ್ಲಿ ಜನಿಸಿರುವ ಪ್ರಕಾಶ ಬಾಬಣ್ಣ ಹುಕ್ಕೇರಿ ಅವರಿಗೆ ಈಗ 75 ವರ್ಷ ವಯಸ್ಸು. 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ನಾಲ್ವರು ಪುತ್ರಿಯರನ್ನು ಹೊಂದಿರುವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
| ಆನಂದ ಅಂಗಡಿ ಹುಬ್ಬಳ್ಳಿ
ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ 8ನೇ ಬಾರಿ ಗೆಲುವು ಸಾಧಿಸಿ ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ಬಸವರಾಜ ಹೊರಟ್ಟಿ, ಈ ಹಿಂದೆ 7 ಬಾರಿ ಗೆಲುವು ಸಾಧಿಸಿ ನಿರ್ವಿುಸಿದ್ದ ತಮ್ಮದೇ ದಾಖಲೆ ಮುರಿದಿದ್ದಾರೆ. ಪಕ್ಷೇತರರಾಗಿ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಹಾಗೂ ಜೆಡಿಎಸ್ನಿಂದ 3 ಬಾರಿ ಹೊರಟ್ಟಿ ಗೆಲುವು ಸಾಧಿಸಿದ್ದರು. ಇದೀಗ ಮೊದಲ ಬಾರಿ ಬಿಜೆಪಿಯಿಂದ ವಿಜೇತರಾಗಿದ್ದಾರೆ. ಸತತ 42 ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ಹೋರಾಟದ ಹೊರಟ್ಟಿ: ಹೋರಾಟದ ಹೊರಟ್ಟಿ ಎಂದೇ ಖ್ಯಾತರಾಗಿರುವ ಬಸವರಾಜ ಹೊರಟ್ಟಿ 1980ರಿಂದ ಈವರೆಗೆ ನಿರಂತರವಾಗಿ ವಿಧಾನ ಪರಿಷತ್ನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಖಾತೆಗಳ ಸಚಿವರಾಗಿ, ಸಭಾಪತಿಯಾಗಿ ಇವರು ಮಾಡಿರುವ ಸಾಧನೆಗಳು ಹಲವಾರು. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಶಿವಲಿಂಗಪ್ಪ ಹಾಗೂ ಗುರಮ್ಮ ದಂಪತಿ ಪುತ್ರನಾಗಿ 1949ರ ಏ.14ರಂದು ಜನಿಸಿದ ಹೊರಟ್ಟಿ ಬಿಎ, ಎಂಪಿಇಡಿ ಪದವೀಧರರು.
ಬೆಂಗಳೂರು: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ವಿಜೇತರಾಗಿರುವ ಬಸವರಾಜ ಹೊರಟ್ಟಿ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ಒತ್ತಾಯಿಸಿದೆ. 8ನೇ ಬಾರಿ ವಿಜೇತರಾಗಿರುವುದಕ್ಕೆ ಹೊರಟ್ಟಿ ಅವರಿಗೆ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ. ಸರ್ಕಾರದ ಧೋರಣೆಯಿಂದ ಖಾಸಗಿ ಶಾಲೆಗಳು ಸಾಕಷ್ಟು ನಲುಗಿದೆ. ಮಾನ್ಯತೆ ನವೀಕರಣ, ಆರ್ಟಿಇ ಶುಲ್ಕ ಮರುಪಾವತಿ, ಪಠ್ಯಪುಸ್ತಕ ಇದ್ಯಾವುದು ಕಾಲಕಾಲಕ್ಕೆ ದೊರೆಯುತ್ತಿಲ್ಲ. ತಾವು ತಕ್ಷಣ ಖಾಸಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಕ್ಯಾಮ್್ಸ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆಗ್ರಹಿಸಿದ್ದಾರೆ.