

ಭದ್ರಾವತಿ: ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ನಗರಸಭಾ ಸದಸ್ಯ ಬಿ.ಕೆ.ಮೋಹನ್ ಹೇಳಿದರು.
ಹಳೇನಗರದ ಮಾಚಿದೇವ ಸಮುದಾಯ ಭವನದದಲ್ಲಿ ಮಂಗಳವಾರ ಗುರುವೀರ ಮಡಿವಾಳ ಮಾಚಿದೇವ ಸಂಘ ಆಯೋಜಿಸಿದ್ದ ಶ್ರಾವಣ ಮಾಸದ ಮನ-ಮನೆಗೆ ಮಾಚಿದೇವ ಪೂಜಾ ಕಾರ್ಯಕ್ರಮ ಹಾಗೂ ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಲ್ಪ ಸಂಖ್ಯೆಯಲ್ಲಿರುವ ಸಮಾಜದವರು ಒಗ್ಗಟ್ಟಿನಿಂದ ಉತ್ತಮ ಸಮುದಾಯ ಭವನ ನಿರ್ಮಿಸಿರುವುದು ಶ್ಲಾಘನೀಯ. ಕಾಲೆಳೆಯುವ ಸಂಸ್ಕೃತಿ ಇರುವ ಪ್ರಸ್ತುತ ದಿನಗಳಲ್ಲಿ ಸಮಾಜ ಸಂಘಟಿಸುವುದು ಸುಲಭದ ಕೆಲಸವಲ್ಲ. ಪಾಲಕರು, ಗುರುಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕಿದೆ. ಗುರುಗಳ ಆಶೀರ್ವಾದ ಪ್ರತಿಯೊಬ್ಬರಿಗೂ ಅಗತ್ಯ. ಅವರ ಅನುಗ್ರಹದಿಂದ ಎಲ್ಲ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ. ಗುರುಗಳ ಸಾನ್ನಿಧ್ಯದಿಂದ ಸಮಾಜ ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.
ತಾಲೂಕಿನ ಸಮುದಾಯದ ಜನಪ್ರತಿನಿಧಿಗಳು, ಸಮಾಜದ ಹಿರಿಯರ ಸಹಕಾರದಿಂದ ಸುಂದರ ಸಮುದಾಯ ಭವನ ನಿರ್ಮಾಣವಾಗಿದ್ದು ಉತ್ತಮ ಕಾರ್ಯಕ್ರಮಗಳಿಗೆ ಬಳಸಿಕೊಂಡು ಸಂಘದ ಚಟುವಟಿಕೆಗಳು ನಡೆಯುವಂತಾಗಲಿ ಎಂದು ಹೇಳಿದರು.
ಚಿತ್ರದುರ್ಗ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಸಮಾಜ ಕಟ್ಟುವ ಕೆಲಸ ನಡೆಸಿದಾಗ ಮಾತ್ರ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯ. ಎಲ್ಲರೂ ಒಗ್ಗಟ್ಟಾಗಿದ್ದು ಸಮಾಜದ ಏಳಿಗೆಗೆ ಶ್ರಮಿಸಬೇಕು. ಸಮಾಜದ ಮೀಸಲಾತಿ ಕುರಿತು ಈಗಾಗಲೆ ಸರ್ಕಾರದ ಗಮನ ಸೆಳೆಯಲಾಗಿದೆ. ಮುಂದೆ ಒಳ್ಳೆಯ ಕಾಲ ಬರಲಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಎಂ.ಪುರುಷೋತ್ತಮ್, ನಗರಸಭಾ ಸದಸ್ಯೆ ಅನುಪಮಾ ಚನ್ನೇಶ್, ಜಿಲ್ಲಾಧ್ಯಕ್ಷ ಸದಾಶಿವಪ್ಪ, ಉದ್ಯಮಿ ಬಿ.ಕೆ.ಜಗನ್ನಾಥ್, ರಮೇಶ್, ದಿನೇಶ್, ಮಂಜಪ್ಪ, ಚಲುವಯ್ಯ, ಕೆ.ತಿಪ್ಪೇಶ್ ಇತರರಿದ್ದರು.