

ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 48 ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಮಿತಿಯು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯಕರ್ಶಿ, ನ್ಯಾಯಾಂಗ ಕ್ಷೇತ್ರದಿಂದ ಡಾ. ಸಿ.ಎಸ್. ದ್ವಾರಕನಾಥ್, ಆಡಳಿತ ಕ್ಷೇತ್ರದಿಂದ ರವಿಕುಮಾರ್ ಮತ್ತು ಸದಾಶಿವ ಮರ್ಜಿ, ಸಮಾಜ ಸೇವಾ ಕ್ಷೇತ್ರದಿಂದ ಬಾಬು ಭಂಡಾರಿಗಲ್ ಮತ್ತು ಶೈಲಜಾ ಹಿರೇಮಠ, ಸಾಹಿತ್ಯ ಕ್ಷೇತ್ರದಿಂದ ರಂಜಾನ್ ದರ್ಗಾ, ವೈ.ಸಿ. ಭಾನುಮತಿ, ಪೊ›.ಜಿ. ಶರಣಪ್ಪ, ಪೊ›.ದೊಣ್ಣೆಗೌಡರು ವೆಂಕಣ್ಣ, ಹಿರೇಮಗಳೂರು ಕಣ್ಣನ್, ಪುಷ್ಪ ಶಿವಕುಮಾರ್, ಜಾನಪದ ಕ್ಷೇತ್ರದಿಂದ ಡಾ. ರತ್ನಮ್ಮ, ಶರಣಪ್ಪ ವಡಿಗೇರೆ, ವೈದ್ಯಕೀಯ ಕ್ಷೇತ್ರದಿಂದ ಡಾ. ತಿಮ್ಮಪ್ಪ ಮತ್ತು ಡಾ.ಕ್ಯಾಪ್ಟನ್ ಕೃಷ್ಣಮೂರ್ತಿ, ಸಂಗೀತ ಕ್ಷೇತ್ರದಿಂದ ಪಂ. ಎಂ. ವೆಂಕಟೇಶ್ ಕುಮಾರ್ ಹಾಗೂ ನೃತ್ಯ ಕ್ಷೇತ್ರದಿಂದ ಡಾ. ಕೆ. ಕುಮಾರ್, ರಂಗಭೂಮಿ ಕ್ಷೇತ್ರದಿಂದ ಸಿ. ಬಸವಲಿಂಗಯ್ಯ, ಪಿ. ತಿಪ್ಪೇಸ್ವಾಮಿ, ಶ್ರೀರಾಮ ಇಟ್ಟಣ್ಣನವರ, ಸಿಹಿ ಕಹಿ ಚಂದ್ರು ಸದಸ್ಯರಾಗಿದ್ದಾರೆ.
ಶಿಲ್ಪಕಲೆ ಕ್ಷೇತ್ರದಿಂದ ಜಯಣ್ಣಚಾರ್, ಕೃಷಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಎಚ್.ಕೆ. ಶ್ರೀಕಂಠ, ಚಿತ್ರಕಲೆ ಕ್ಷೇತ್ರದಿಂದ ಸಿ. ಚಂದ್ರಶೇಖರ್, ಚಲನಚಿತ್ರ ಕ್ಷೇತ್ರದಿಂದ ಹಂಸಲೇಖ ಮತ್ತು ರವಿಚಂದ್ರನ್, ಶಿಕ್ಷಣ ಕ್ಷೇತ್ರದಿಂದ ಪೊ›. ರಾಧಾಕೃಷ್ಣ ಮತ್ತು ಪೊ›. ಕೃಷ್ಣೇಗೌಡ, ಪತ್ರಿಕೋದ್ಯಮ ಕ್ಷೇತ್ರದಿಂದ ಸಿದ್ದರಾಜು, ಪರಿಸರ ಕ್ಷೇತ್ರದಿಂದ ನಾಗೇಶ ಹೆಗಡೆ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಿಂದ ಕೆ. ಚನ್ನಪ್ಪ, ಕ್ರೀಡಾ ಕ್ಷೇತ್ರದಿಂದ ಎ.ಬಿ. ಸುಬ್ಬಯ್ಯ ಹಾಗೂ ಜೋಸೆಫ್ ಹೂವರ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಅಧಿಸೂಚನೆ ಹೊರಿಡಿಸಿದ್ದಾರೆ.
ವಿಧಾನಸೌಧದ ಮಹಾದ್ವಾರದ ಮೆಟ್ಟಿಲುಗಳ ಮೇಲೆ ನವೆಂಬರ್ 1ರಂದು ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಮಾರೋಪ ಸಮಾರಂಭ ನಡೆಯಲಿದ್ದು, ಇದೇ ವೇಳೆ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ. ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ. ಚಿನ್ನದ ಪದಕ ಒಳಗೊಂಡಿರಲಿದೆ.
ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 69 ಸಾಧಕರನ್ನು ಅಯ್ಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಓರ್ವ ಸದಸ್ಯ ಕಾರ್ಯದರ್ಶಿ ಹಾಗೂ 48 ಸದಸ್ಯರನ್ನು ಸಮಿತಿ ಒಳಗೊಂಡಿದೆ. ಕಳೆದ ವರ್ಷ 68 ಸಾಧಕರ ಆಯ್ಕೆ ಮಾಡಲು ಇದೇ ಸಚಿವರ ಅಧ್ಯಕ್ಷತೆಯಲ್ಲಿ 30 ಸದಸ್ಯರ ಸಮಿತಿ ರಚಿಸಲಾಗಿತ್ತು.