ಪಶ್ಚಿಮ ಬಂಗಾಳದಿಂದ ವಿಮಾನದಲ್ಲಿ ಬಂದು ಮನೆಗೆ ಕನ್ನ

Arrest Kaidhi
ಇಬ್ಬರು ಪೊಲೀಸರ ವಶಕ್ಕೆ.
Published on

ಬೆಂಗಳೂರು: ಪಶ್ಚಿಮ ಬಂಗಾಳದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡಿಕೊಂಡು ವಾಪಸ್ ಹೋಗುತ್ತಿದ್ದ ಆರು ಮಂದಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಶುಭಂ ಕರಸೀನ್, ಹರಿದಾಸ್ ಬರಾಯ್, ಗೌತಮ್ ಚೌಧರಿ, ಬಿ. ಸುಮನ್, ಬಿಕಾಸ್ ಮತ್ತು ರಾಮನ್ ಬಂಧಿತರು. ಆರೋಪಿಗಳಿಂದ 27 ಲಕ್ಷ ರೂ. ಮೌಲ್ಯದ 452 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 9 ಕನ್ನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬರುತ್ತಿದ್ದ ನಾಲ್ವರು ಆರೋಪಿಗಳು ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಬಳಿಕ ನಗರದ ಎಲ್ಲೆಡೆ ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಸುತ್ತಾಡಿ ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದು ವಾಪಸ್ ಊರಿಗೆ ಹೋಗುತ್ತಿದ್ದರು.

ಇದೇ ರೀತಿ, ಜೂ. 10ರಂದು ಪೀಣ್ಯದ ಗೃಹಲಕ್ಷ್ಮೀ ಲೇಔಟ್ ನಿವಾಸಿ ಕುಟುಂಬಸಮೇತ ಅಮೆರಿಕಕ್ಕೆ ಹೋಗಿದ್ದರು. 2 ದಿನಗಳ ಬಳಿಕ ಅವರ ಮನೆಗೆ ಕಳ್ಳರು ನುಗ್ಗಿರುವುದು ಸಿಸಿ ಕ್ಯಾಮರಾ ಮೂಲಕ ಮನೆ ಮಾಲೀಕರಿಗೆ ಅಲರ್ಟ್ ಆಗಿದೆ. ತಕ್ಷಣ ಅವರು ತಮ್ಮ ಸಹೋದರನಿಗೆ ವಿಷಯ ಮುಟ್ಟಿಸಿದ್ದು, ಆತ ಬಂದು ನೋಡಿದಾಗ ಮನೆಯ ಹಿಂಬಾಗಿಲ ಬೀಗ ಒಡೆದು ನುಗ್ಗಿ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದರು.

ಈ ಬಗ್ಗೆ ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪೀಣ್ಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಸಿಸಿ ಕ್ಯಾಮರಾ ಮತ್ತು ಮೊಬೈಲ್ ಸಿಗ್ನಲ್ ಆಧರಿಸಿ ಜು. 4ರಂದು ಎಚ್‌ಎಂಟಿ ಲೇಔಟ್‌ನಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 3 ಕನ್ನ ಕಳವು ಪ್ರಕರಣ ಬೆಳಕಿಗೆ ಬಂದಿವೆ. ಈ ಮೂವರು ಕೊಟ್ಟ ಮಾಹಿತಿ ಮೇರೆಗೆ ಮತ್ತೊಬ್ಬನ್ನು ಬಂಧಿಸಿದ್ದರು. ಕದ್ದ ಚಿನ್ನಾಭರಣ ಸ್ವೀಕರಿಸುತ್ತಿದ್ದ ಪಶ್ಚಿಮ ಬಂಗಾಳದ ಚಿನ್ನದ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ಮಾಲೀಕರನ್ನು ಬಂಧಿಸಿ 452 ಗ್ರಾಂ ಆಭರಣ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net