ಬಹುಮಾನ ಸಿಗಲಿಲ್ಲ ಅಂತ ಬದುಕು ಅಂತ್ಯಗೊಳಿಸಿದ ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ

College Student
Published on

ಮಂಗಳೂರು: ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.

ನಿಶಾ (17) ಮೃತ ವಿದ್ಯಾರ್ಥಿನಿ. ಈಕೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ. ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆದಿತ್ತು. ಅದರಲ್ಲಿ ನಿಶಾ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ, ಬಹುಮಾನ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ನಿಶಾ, ಖಿನ್ನತೆಗೆ ಒಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನ ಸೇವಿಸಿದ್ದಳು.

ತೀವ್ರ ವಾಂತಿ ಬಂದ ಕಾರಣಕ್ಕೆ ಮನೆಯವರು ವಿಚಾರಿಸಿದಾಗ ಕೀಟನಾಶಕ ಸೇವಿಸಿದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ನಿಶಾಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಪುತ್ತೂರಿನಿಂದ ಮಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರು. ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಶಾ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾಳೆ.

ಈ ಸಂಬಂಧ ಪುತ್ತೂರಿನ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net