

ಸಾಗರ: ಸಂಘ ಸಂಸ್ಥೆಗಳು ಸಭಾ ಕಾರ್ಯಕ್ರಮದ ಅರಿವು ಹೊಂದಿರಬೇಕು. ಜತೆಗೆ ಸಂಘಟನೆಗಳು ಒಗ್ಗಟ್ಟಿನಿಂದ ತೊಡಗಿಕೊಂಡರೆ ಯಶಸ್ಸು ಕಾಣುತ್ತವೆ ಎಂದು ಲಯನ್ಸ್ ಸಂಸ್ಥೆ ಮಾಜಿ ಜಿಲ್ಲಾ ಗವರ್ನರ್ ಡಾ. ಎಂ.ಕೆ.ಭಟ್ ಹೇಳಿದರು.
ಸಾಗರದ ಲಯನ್ಸ್ ಭವನದಲ್ಲಿ ಮಂಗಳವಾರ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಲಯ ಸಮಿತಿ ಸಮಾವೇಶದಲ್ಲಿ ಸಭಾ ಲಕ್ಷಣಗಳು ವಿಷಯ ಕುರಿತು ಉಪನ್ಯಾಸ ನೀಡಿದರು.
ಪ್ರತಿಯೊಂದು ಸಭೆ ನಿಗದಿತ ಸಮಯಕ್ಕೆ ಆರಂಭವಾಗಬೇಕು. ಸಂಸ್ಥೆಯ ಸದಸ್ಯರು ಉತ್ಸಾಹದಿಂದ ಪಾಲ್ಗೊಳ್ಳುವ ವಾತಾವರಣ ನಿರ್ಮಿಸಬೇಕು. ಸ್ಫೂರ್ತಿದಾಯಕ ಚಟುವಟಿಕೆಗಳನ್ನು ಆಯೋಜಿಸಬೇಕು. ಶಿಸ್ತಿನಿಂದ ಮಾಡುವ ಎಲ್ಲ ಕಾರ್ಯಕ್ರಮಗಳು ಅಂತಿಮವಾಗಿ ಯಶಸ್ಸಿನತ್ತ ಹೋಗುತ್ತದೆ. ಕಾರ್ಯಕ್ರಮ ಸಂಘಟಕರ ಬದ್ಧತೆ ಅತಿಮುಖ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಲಯ ಅಧ್ಯಕ್ಷೆ ಪ್ರಭಾವತಿ ಶ್ರೀಧರ್, ಲಯನ್ಸ್ ಸಂಸ್ಥೆ ಅತ್ಯುತ್ತಮವಾಗಿ ಸಾರ್ವಜನಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆರೋಗ್ಯ, ಪರಿಸರ, ಶೈಕ್ಷಣಿಕ ಸೇರಿ ಎಲ್ಲ ರಂಗದಲ್ಲೂ ಲಯನ್ಸ್ ಸಂಸ್ಥೆ ಸೇವಾ ಹಸ್ತವನ್ನು ಚಾಚಿದೆ ಎಂದು ತಿಳಿಸಿದರು. ತಿಮ್ಮಪ್ಪ , ಜಿ.ಎಚ್.ಕೃಷ್ಣಮೂರ್ತಿ, ಅಶ್ವಿನಿಕುಮಾರ್, ಪ್ರಸನ್ನ, ಎಚ್.ಎಂ.ನಾಗರಾಜ್ ಇತರರಿದ್ದರು.