ಕಾಫಿ ಘಮಲಿನಂತಿಲ್ಲ ಬೆಳೆಗಾರರ ಬದುಕು!: ಪ್ರತ್ಯೇಕ ಸಚಿವರು ಬೇಕು, ಸಾಲ ಮನ್ನಾ ಆಗಬೇಕು; ವಿಜಯವಾಣಿ ಸಂವಾದದಲ್ಲಿ ಬೆಳೆಗಾರರ ಒಕ್ಕೊರಲ ಒತ್ತಾಯ

Coffee day samvada
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಶುಕ್ರವಾರ ಸಂವಾದ ಕಾರ್ಯಕ್ರಮ ನಡೆಯಿತು. ಬಿ.ವಿ.ರಂಜಿತ್ ಕುಮಾರ್, ಬಾಚಿನಾಡಂಡ ಮೋಹನ್ ಬೋಪಣ್ಣ, ಕುಶಾಲಪ್ಪ, ಕೆ.ಕೆ. ವಿಶ್ವನಾಥ್, ಕುಟ್ಟೇಟಿರ ಕುಮಾರಿ ಕುಂಞಪ್ಪ, ಎಚ್.ಟಿ.ಅನಿಲ್ ಇದ್ದರು.
Published on

ಮಡಿಕೇರಿ: ಕಾಫಿಗೂ ಪ್ರತ್ಯೇಕ ಸಚಿವರು ಬೇಕು. ಕಾಫಿ ಬೆಳೆಗಾರರ ಸಂಪೂರ್ಣ ಸಾಲವನ್ನು ಒಂದು ಬಾರಿ ಮನ್ನಾ ಮಾಡಬೇಕು, ಕಾಫಿಯನ್ನು ಸರ್ಫೆಸಿ ಕಾಯ್ದೆಯಿಂದ ಮುಕ್ತ ಮಾಡಬೇಕು. ಸರ್ಕಾರಗಳು ಕಾಫಿ ಬೆಳೆಗಾರನ ಹಿತ ಕಾಪಾಡಬೇಕು. ಕಾಫಿಯ ಆಂತರಿಕ ಬಳಕೆ ಹೆಚ್ಚಾಗಬೇಕು. ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಮಡಿಕೇರಿಯಲ್ಲಿ ಕಾಫಿ ಬೆಳೆಗಾರರು ಮತ್ತು ಕಾಫಿ ತಜ್ಞರ ಜತೆಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ವ್ಯಕ್ತವಾದ ಪ್ರಮುಖ ಅಭಿಪ್ರಾಯಗಳಿವು.

ಕಾಫಿ ಬೆಳೆಯನ್ನು ಜೂಜಾಟಕ್ಕೆ ಹೋಲಿಕೆ ಮಾಡಲಾಗುತ್ತದೆ. ಕಾಫಿ ತೋಟದ ನಿರ್ವಹಣಾ ವೆಚ್ಚ, ಕೂಲಿ, ಗೊಬ್ಬರ, ಔಷಧ ಎಲ್ಲದರ ಬೆಲೆಯೂ ಕಳೆದ 3 ದಶಕಗಳಲ್ಲಿ 20-30 ಪಟ್ಟು ಏರಿಕೆ ಆಗಿದೆ. ಆದರೆ ಕಾಫಿ ಬೆಲೆ ಮಾತ್ರ ಈ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ಒಂದು ಚೀಲ ಕಾಫಿ ಉತ್ಪಾದಿಸಲು 4-5 ಸಾವಿರ ರೂ. ಖರ್ಚು ಬರುತ್ತಿದೆ. ಅರೇಬಿಕಾ ಕಾಫಿ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಮುಂದೊಂದು ದಿನ ಅರೇಬಿಕಾ ಕಾಫಿಯೇ ಇಲ್ಲವಾಗುವ ಆತಂಕವೂ ಇದೆ ಎನ್ನುವ ಮಾತುಗಳು ಕೇಳಿಬಂದವು.

ಕಾಫಿ ತೋಟಗಳಲ್ಲಿ ಕೂಲಿ ಕಾರ್ವಿುಕರ ಕೊರತೆ ಕಂಡುಬರುತ್ತಿದೆ. ಇದರಿಂದ ಗುಣಮಟ್ಟದ ಕಾಫಿ ಉತ್ಪಾದನೆ ಕಷ್ಟವಾಗುತ್ತಿದೆ. ಕಾಫಿ ಬೆಳೆಯುವ ಜಿಲ್ಲೆಗಳಿಗೆ ವಲಸೆ ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕಾರ್ವಿುಕ ಸಚಿವಾಲಯದಿಂದ ಇವರನ್ನು ಏಕಗವಾಕ್ಷಿ ಯೋಜನೆ ಮೂಲಕ ನಿರ್ವಹಣೆ ಮಾಡಿದರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಚಿಕ್ಕ ಹಿಡುವಳಿ ಹೊಂದಿರುವ ಬೆಳೆಗಾರರು ತಮ್ಮ ತೋಟದಲ್ಲಿ ತಾವೇ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕಾಫಿ ಮಂಡಳಿಯಿಂದ ಕೊಡುವ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವ ಸಲಹೆಗಳು ವ್ಯಕ್ತವಾದವು.

ಕಾಫಿ ತೋಟಗಳಿಗೆ ಆನೆ ಸೇರಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಬೆಳಗಾರ ಭಯದಲ್ಲೇ ಬದುಕಬೇಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ. ಆನೆಗಳು ಕಾಡೊಳಗೇ ಇರಬೇಕು. ಮನುಷ್ಯರು ಕಾಡಿಗೆ ಹೋಗಬಾರದು. ಇದರಿಂದ ಮಾತ್ರ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಲು ಸಾಧ್ಯ. 390 ಕಿಮೀ ಉದ್ದಕ್ಕೆ ರೈಲು ಕಂಬಿ ಬ್ಯಾರಿಕೇಡ್ ಅಳವಡಿಸುವುದರಿಂದ ಆನೆ ದಾಳಿಗೆ ಬಹುತೇಕ ಕಡಿವಾಣ ಹಾಕಬಹುದು.

ಕಡಿಮೆ ಖರ್ಚಿನಲ್ಲಿ ಸಾಧ್ಯವಾಗಬಹುದಾದ ಹ್ಯಾಂಗಿಂಗ್ ಸೌರ ಬೇಲಿಯಿಂದಲೂ ಪರಿಹಾರ ಸಾಧ್ಯವಿದೆ. ಆನೆ ದಾಳಿಗೆ ಬಲಿಯಾಗುವವರಿಗೆ ಕನಿಷ್ಠ 1 ಕೋಟಿ ರೂ. ಪರಿಹಾರ ಸಿಗಬೇಕು. ಆನೆಗಳಿಗೆ ಕಾಡಿನಲ್ಲಿ ಆಹಾರ, ನೀರು ಸಾಕಷ್ಟು ಸಿಗುವ ವ್ಯವಸ್ಥೆ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಕಾಫಿ ಬೆಳೆಗಾರರು ತಮ್ಮಲ್ಲಿಗೆ ಬರುವವರಿಗೆ ಕುಡಿಯಲು ಕಾಫಿಯನ್ನೇ ಕೊಡಬೇಕು. ಈ ಮೂಲಕ ಕಾಫಿಯ ಬಗ್ಗೆ ಜಾಗೃತಿ ಮೂಡಿಸಬೇಕು. ಸಾಕಷ್ಟು ಮಹಿಳಾ ಕಾಫಿ ಬೆಳೆಗಾರರು ಕಾಫಿ ಮತ್ತು ಕಾಫಿಯ ಉಪ ಉತ್ಪನ್ನಗಳ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇದು ಇತರರಿಗೂ ಮಾದರಿ ಆಗಿರುವುದರಿಂದ ಅವರು ಮಾಡುತ್ತಿರುವ ಕೆಲಸದ ಬಗ್ಗೆ ವ್ಯಾಪಕ ಪ್ರಚಾರ ಕೊಡಬೇಕು. ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬಹುದು. | ಕುಟ್ಟೇಟಿರ ಕುಮಾರಿ ಕುಂಞಪ್ಪ, ನಿರ್ದೇಶಕಿ, ಮಹಿಳಾ ಕಾಫಿ ಜಾಗೃತಿ ಸಂಘ, ಕೊಡಗು

ಐಸಿಎಆರ್​ಗೆ ಜವಾಬ್ದಾರಿ: ಕಾಫಿ ಮಂಡಳಿಯ ಬಜೆಟ್​ನಲ್ಲಿ ಶೇ.80 ಭಾಗ ಸಿಬ್ಬಂದಿ ವೇತನ ಮತ್ತು ನಿವೃತ್ತಿ ವೇತನಕ್ಕೆ ಹೋಗುತ್ತಿದೆ. ಇದರಿಂದಾಗಿ ವಿಸ್ತರಣೆ ಮತ್ತು ಸಂಶೋಧನೆಗಳಿಗೆ ಹಣ ಸಾಕಾಗುತ್ತಿಲ್ಲ. ಸಂಶೋಧನೆಗೆ ಮೀಸಲಾದ ಹಣವೂ ಇಲ್ಲಿ ಇಲ್ಲ. ಹಾಗಾಗಿ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಜವಾಬ್ದಾರಿಯನ್ನು ಐಸಿಎಆರ್​ಗೆ ಕೊಡಬೇಕು. ನಿರ್ವಹಣೆಯ ಹೊಣೆಗಾರಿಕೆ ಕಾಫಿ ಮಂಡಳಿಯಲ್ಲೇ ಇರಲಿ ಎಂದು ಅಭಿಪ್ರಾಯವೂ ಸಂವಾದದಲ್ಲಿ ವ್ಯಕ್ತವಾಯಿತು.

ಸರ್ಫೆಸಿ ಕಾಯ್ದೆ ಬ್ಯಾಂಕ್​ಗಳ ಪರ: ಕಾಫಿ ಬೆಳೆ ಕೃಷಿಗೆ ಸಂಬಂಧಿಸಿದ್ದಾಗಿದೆ. ಸರ್ಫೆಸಿ ಬ್ಯಾಂಕ್​ಗಳ ಪರ ಇರುವ ಕಾಯ್ದೆಯಾಗಿದೆ. ಈ ಕಾಯ್ದೆಯಿಂದ ಸಣ್ಣ ಬೆಳೆಗಾರರಿಗೆ ಬಹಳ ತೊಂದರೆ ಆಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುತ್ತಿದೆ. ಬೆಳೆ ವಿಮಾ ಯೋಜನೆ ಯಲ್ಲೂ ಕಾಫಿ ಸೇರಿಕೊಂಡಿಲ್ಲ. ಹಾಗಾಗಿ ಕರಿಮೆಣಸು, ಅಡಕೆ ಮಾದರಿಯಲ್ಲಿ ಕಾಫಿಯನ್ನೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಸೇರಿಸಬೇಕು ಎಂದು ಒತ್ತಾಯ ಕೇಳಿಬಂತು. ಅರೇಬಿಕಾ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಕ್ಕಿಂತ ಹೆಚ್ಚಿನ ದರ ಭಾರತದ ಮಾರುಕಟ್ಟೆಯಲ್ಲಿ ಇದೆ. ಇದಕ್ಕೆ ಉತ್ಪಾದನೆ ಕಡಿಮೆ ಆಗಿರುವುದೇ ಕಾರಣ. ರೋಬಸ್ಟಾ ಕಾಫಿ ಬೆಲೆ ಲಂಡನ್​ನಲ್ಲಿ ನಿರ್ಧಾರವಾದರೆ, ಅರೇಬಿಕಾ ಕಾಫಿ ಬೆಲೆ ಅಮೆರಿಕದಲ್ಲಿ ನಿರ್ಧಾರ ಆಗುತ್ತದೆ. 2 ವರ್ಷದ ಹಿಂದಿನತನಕವೂ ಮಾರುಕಟ್ಟೆಯಲ್ಲಿ ಕಾಫಿ ಸಂಗ್ರಹ ದೊಡ್ಡ ಪ್ರಮಾಣದಲ್ಲಿ ಇತ್ತು. ಈಗಿನ ಸ್ಥಿತಿ ಹಾಗಿಲ್ಲ. ಕಾಫಿ ಬೆಲೆ ಕೆಲ ತಿಂಗಳುಗಳಿಂದ ಸ್ಥಿರತೆ ಕಾಯ್ದುಕೊಂಡಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ. ವಿಶ್ವನಾಥ್ ವಿಶ್ಲೇಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net