

ಬೆಂಗಳೂರು: ರಾಜ್ಯದಲ್ಲಿ ತೆಂಗು ಬೆಳೆಗೆ ಕಾಡುತ್ತಿರುವ ಕಪ್ಪುತಲೆ ಹುಳುವಿನ ಬಾಧೆ ನಿಯಂತ್ರಣಕ್ಕೆ ಖಾಸಗಿ ಸಂಸ್ಥೆಗಳಿಂದ ವೈಜ್ಞಾನಿಕ ಸಮೀಕ್ಷೆ ನಡೆಸಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ.
ಪ್ರಸ್ತುತ ಕಪ್ಪುತಲೆ ಹುಳುವಿನಿಂದ 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಖಾಸಗಿ ಸಂಸ್ಥೆಗಳಿಂದ ಮೊಬೈಲ್ ಆ್ಯಪ್‌ನಿಂದ ಸಮೀಕ್ಷೆ ನಡೆಸಲು 25 ಲಕ್ಷ ರೂ. ಅನುದಾನ ನಿಗದಿ ಮಾಡಲಾಗಿದೆ. ಸಮೀಕ್ಷಾ ವರದಿ ಬಳಿಕ ಸಸ್ಯ ಸಂರಕ್ಷಣಾ ಕ್ರಮಗಳ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸಲು ಇಲಾಖೆ ಮುಂದಾಗಿದೆ.
ಕಪ್ಪುತಲೆ ಹುಳುವಿನ ಬಾಧೆ ನಿಯಂತ್ರಣದ ಬಗ್ಗೆ ಶಾಸಕ ದಿನೇಶ್ ಗೂಳಿಗೌಡ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಸಿಎಂ, ತಜ್ಞರ ವರದಿ ಪಡೆದು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಈ ಸಂಬಂಧ ಕ್ರಮ ಕೈಗೊಂಡಿರುವ ತೋಟಗಾರಿಕೆ ನಿರ್ದೇಶನಾಲಯವು ಸರ್ಕಾರದ ಕಾರ್ಯದರ್ಶಿಗಳು, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗೆ ಪತ್ರದ ಮೂಲಕ ಮಾಹಿತಿ ನೀಡಿದೆ.
ರಾಜ್ಯದಲ್ಲಿ 27.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಾರ್ಷಿಕ 223.18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ತೆಂಗನ್ನು 7.04 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದು, 34.79 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ.
ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಏಪ್ರಿಲ್, ಮೇನಲ್ಲಿ ಅಧಿಕ ಉಷ್ಣಾಂಶ ಇದ್ದ ಕಾರಣ ತೆಂಗಿನಲ್ಲಿ ಕಪ್ಪುತಲೆ ಹುಳುವಿನ ಬಾಧೆ ಹೆಚ್ಚಾಗಿತ್ತು ಎಂದು ಇಲಾಖೆ ಅಂದಾಜಿಸಿದೆ.
ಸಮೀಕ್ಷೆ ನಂತರ ವರದಿ ಪರಿಶೀಲಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಿರುವ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ತೆಂಗಿಗೆ ಕಪ್ಪುತಲೆ ಹುಳುವಿನ ಬಾಧೆ ಹತೋಟಿಗೆ ತೋಟಗಾರಿಕೆ ಇಲಾಖೆ ಕೈಗೊಳ್ಳುತ್ತಿರುವ ಕ್ರಮ ಸ್ವಾಗತಾರ್ಹ. ಸಮೀಕ್ಷೆಯನ್ನು ತ್ವರಿತ ಗತಿಯಲ್ಲಿ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿ.
ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ