

ನವದೆಹಲಿ/ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ವರಿಷ್ಠರು ತಮ್ಮ ಮೇಲಿಟ್ಟ ಭರವಸೆಗೆ ಧನ್ಯವಾದ ಸಮರ್ಪಿಸಿದರು. ಆದರೆ, ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಗೆ ಕನಿಷ್ಠ ಇನ್ನೊಂದು ವಾರ ಕಾಯುವುದು ಅನಿವಾರ್ಯವಾಗಲಿದೆ. ಕೇಂದ್ರ ನಾಯಕರು ತಾವೇ ಸಿದ್ಧಪಡಿಸುವ ಪಟ್ಟಿ ಹಾಗೂ ಸಿಎಂ ನೀಡುವ ಪಟ್ಟಿಯನ್ನು ಪರಿಶೀಲಿಸಿ ಸಚಿವರ ಅಂತಿಮ ಪಟ್ಟಿಯೊಂದನ್ನು ನೀಡಲಿದ್ದಾರೆ. ಇದಕ್ಕಾಗಿ, ಸಿಎಂ ಬೊಮ್ಮಾಯಿ ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ದೆಹಲಿಗೆ ಬರಲಿದ್ದಾರೆ. ಇಷ್ಟೆಲ್ಲದರ ನಡುವೆ ಶತಾಯಗತಾಯ ಮಂತ್ರಿಗಿರಿ ದಕ್ಕಿಸಿಕೊಳ್ಳಲು ಹಿರಿಯರು, ಕಿರಿಯರು ಹಾಗೂ ಹೊಸಬರು ದೆಹಲಿಗೆ ಲಗ್ಗೆಯಿಟ್ಟು, ಇನ್ನಿಲ್ಲದ ಒತ್ತಡ ಹೇರಲಾರಂಭಿಸಿದ್ದಾರೆ.
ಸಂಭಾವ್ಯ ಕರೊನಾ ಮೂರನೇ ಅಲೆ ಪ್ರವೇಶ, ಅತಿವೃಷ್ಟಿ ಹಾಗೂ ಪ್ರವಾಹದ ಆತಂಕದ ನಡುವೆ ರಾಜಕೀಯ ಸರ್ಕಸ್ ಮೇಲುಗೈ ಸಾಧಿಸಿರುವುದು ಬಿಜೆಪಿಯಲ್ಲೇ ತಳಮಳ ಹುಟ್ಟಿಹಾಕಿದೆ. ಸಂಕಷ್ಟದ ಪರಿಸ್ಥಿತಿ ನಿಭಾಯಿಸಲೆಂದು ವರಿಷ್ಠರು ಬಹುಬೇಗ ಗ್ರೀನ್ಸಿಗ್ನಲ್ ನೀಡಬಹುದೆಂದು ನಿರೀಕ್ಷೆಯಲ್ಲಿ ಆಕಾಂಕ್ಷಿಗಳು ಲಾಬಿಗಿಳಿದಿದ್ದಾರೆ. ದೆಹಲಿಗೆ ಯಾರೂ ಬರಬೇಡಿ, ಅಗತ್ಯಬಿದ್ದರೆ ನಾವೇ ಕರೆಸಿಕೊಳ್ಳುತ್ತೇವೆ ಎಂಬ ವರಿಷ್ಠರ ಸೂಚನೆಯನ್ನೂ ಶಾಸಕರು ಲೆಕ್ಕಿಸುತ್ತಿಲ್ಲ. ಈ ಮಧ್ಯೆ, ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ದೆಹಲಿಗೆ ಬಂದಿರುವ ಶಾಸಕರು ನನ್ನ ಸ್ನೇಹಿತರೇ ಆಗಿದ್ದಾರೆ. ನಾನು ಶನಿವಾರ ಬೆಂಗಳೂರಿಗೆ ಮರಳುತ್ತಿದ್ದು, ಎಲ್ಲರೂ ನನ್ನೊಂದಿಗೆ ಮರಳಬೇಕು ಮತ್ತು ತಮ್ಮ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಸಚಿವಾಕಾಂಕ್ಷಿ ಶಾಸಕರಿಗೆ ಸೂಚ್ಯವಾಗಿ ತಿಳಿಸಿದ್ದಾರೆ.
ದೆಹಲಿಯಲ್ಲಿ ವರಿಷ್ಠರ ಭೇಟಿ ಬಳಿಕ ಬೊಮ್ಮಾಯಿ ನೀಡಿದ ಹೇಳಿಕೆಯು ಸದ್ಯಕ್ಕೆ ವಿಸ್ತರಣೆ ಇಲ್ಲವೆಂಬುದನ್ನು ಪುಷ್ಟೀಕರಿಸಿದೆ. ಮೂಲಗಳ ಪ್ರಕಾರ ವರಿಷ್ಠರು ತಮ್ಮದೇ ಮೂಲಗಳನ್ನು ಸಂರ್ಪಸಿ, ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಿದ್ದಾರೆ. ಹಾಗೇ, ಸಿಎಂ ಕೂಡ ತಮ್ಮ ಪಟ್ಟಿ ಸಿದ್ಧಪಡಿಸಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರಿಗೆ ಸಲ್ಲಿಸಲಿದ್ದಾರೆ. ಈ ಬಗ್ಗೆ ರ್ಚಚಿಸಲೆಂದೇ 3-4 ದಿನಗಳ ಬಳಿಕ ಮತ್ತೊಮ್ಮೆ ದೆಹಲಿಗೆ ಬರಲಿದ್ದಾರೆ. ದೆಹಲಿಯ ಹಿರಿಯ ನಾಯಕರ ಬಳಿ ಹೆಸರುಗಳಿದ್ದರೂ ರಾಜ್ಯದ ನಾಯಕರು ಹಾಗೂ ಸಂಘದ ಪ್ರಮುಖರಿಂದ ಪಟ್ಟಿ ಇನ್ನೂ ದೆಹಲಿಗೆ ರವಾನೆಯಾಗಿಲ್ಲ. ಹೀಗಾಗಿ, ಸಿಎಂ ಕೂಡ ನಡ್ಡಾ ಭೇಟಿ ಸಂದರ್ಭದಲ್ಲಿ ಯಾವುದೇ ಹೆಸರಿನ ಬಗ್ಗೆ ಚರ್ಚೆ ಮಾಡಿಲ್ಲ.
ಸಂಪುಟ ವಿಸ್ತರಣೆಗೆ ಕೋರಿಕೆ: ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ನಿರ್ವಹಣೆ, ಸಂಭಾವ್ಯ ಕರೊನಾ ಮೂರನೇ ಅಲೆ ನಿಯಂತ್ರಣಕ್ಕಾಗಿ ಶೀಘ್ರವೇ ಸಂಪುಟ ವಿಸ್ತರಣೆಗೆಯಾಗಬೇಕು ಎಂಬುದನ್ನು ಸಿಎಂ ಬೊಮ್ಮಾಯಿ ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡುವ ಯತ್ನ ಮಾಡಿದ್ದಾರೆ. ಪ್ರಧಾನಿ ಮೋದಿ ಜತೆಗಿನ ಸಭೆಯಲ್ಲಿ ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ.
ಸಮಯದ ಅಭಾವ: ಸಿಎಂ ಆಗಿ ಪದಗ್ರಹಣ ಮಾಡಿದ ಮೊದಲ ದಿನ ಅಧಿಕಾರಿಗಳು, ಸಚಿವ ಸಂಪುಟ ಸಭೆ, ಗಣ್ಯರು, ಮುಖಂಡರು, ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳ ಭೇಟಿಯಲ್ಲೇ ಕಳೆದು ಹೋಯಿತು. ಮರು ದಿನ ಹುಬ್ಬಳ್ಳಿಗೆ ಭೇಟಿ ನೀಡಿ ಪ್ರಮುಖರೊಂದಿಗೆ ಚರ್ಚೆ, ಉತ್ತರ ಕನ್ನಡ ಜಿಲ್ಲೆ ಅತಿವೃಷ್ಟಿ ಪೀಡಿತ ಪ್ರದೇಶದ ಪರಿಶೀಲನೆ, ಅಧಿಕಾರಿಗಳ ಸಭೆ, ಪ್ರಧಾನಿ ಮೋದಿ ವಿಡಿಯೋ ಸಂವಾದದಲ್ಲಿ ಮಗ್ನರಾದರು. ವರಿಷ್ಠರಿಂದ ಬುಲಾವ್ ಬಂದಿದ್ದರಿಂದ ಮೂರನೇ ದಿನವಾದ ಶುಕ್ರವಾರ ದೆಹಲಿಗೆ ತೆರಳಿದ್ದು, ಇದರಿಂದಾಗಿ ಬೊಮ್ಮಾಯಿ ಅವರಿಗೆ ಸಂಭಾವ್ಯ ಸಚಿವರ ಪಟ್ಟಿ ತಯಾರಿಸಿಕೊಳ್ಳಲು ಪುರುಸೊತ್ತು ಸಿಕ್ಕಿಲ್ಲ. ಈ ವಸ್ತುಸ್ಥಿತಿಯನ್ನು ಪಕ್ಷದ ಅಧ್ಯಕ್ಷ ನಡ್ಡಾ ಅವರೊಂದಿಗೆ ಬೊಮ್ಮಾಯಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಬಿಟ್ಟು ದೆಹಲಿಯಾತ್ರೆ: ಕರೊನಾ ಸೋಂಕು ಹೆಚ್ಚಳದ ದಿಗಿಲು, ಪ್ರವಾಹದ ಭೀತಿಯಿರುವಾಗ ಜನರೊಂದಿಗೆ ಇರಬೇಕಾದ ಶಾಸಕರು ದೆಹಲಿಯಾತ್ರೆ ಕೈಗೊಂಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಸಂಕಷ್ಟದಲ್ಲಿರುವ ಜನರ ಜತೆಗಿದ್ದು ನೆರವು ನೀಡಬೇಕು. ಸೂಕ್ತ ಸಹಕಾರ ನೀಡಿ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಬೇಕು ಎಂದು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಅರ್ಹತೆ, ಸಾಮರ್ಥ್ಯದ ಆಧಾರದಲ್ಲಿ ವರಿಷ್ಠರು ನಿರ್ಧರಿಸಲಿದ್ದಾರೆ. ನಿಜಾಂಶ ಗೊತ್ತಿದ್ದರೂ ಲಾಬಿ ಮೂಲಕ ಸಚಿವ ಪದವಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಪರ್ಯಾಸವೆಂದು ಪಕ್ಷದ ಮುಖಂಡರು ಕಿಡಿಕಾರಿದ್ದಾರೆ.
ಯಾರೆಲ್ಲ ದೆಹಲಿಗೆ ದೌಡು?: ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಆರ್.ಅಶೋಕ್, ಉಮೇಶ್ ಕತ್ತಿ, ಸಿ.ಪಿ.ಯೋಗೇಶ್ವರ್, ಶಶಿಕಲಾ ಜೊಲ್ಲೆ, ಶಾಸಕರಾದ ಅರವಿಂದ ಬೆಲ್ಲದ, ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಸೇರಿದಂತೆ ಇನ್ನೂ ಕೆಲವರು ಬಿಡಾರ ಹೂಡಿದ್ದು, ವರಿಷ್ಠರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ನಾಯಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಿರುವುದರಿಂದ ಅವರ ಮೂಲಕ ಮಂತ್ರಿ ಸ್ಥಾನದ ಖಾತರಿ ಪಡೆದುಕೊಳ್ಳಲು ಶಾಸಕರು ಯತ್ನಿಸಿದ್ದಾರೆ. ಶುಕ್ರವಾರ ಸಂಜೆ ಹು.ಧಾ. ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು ಜೋಶಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹೊರಗೆ ಹೋಗಿ: ಮಂತ್ರಿಸ್ಥಾನಕ್ಕಾಗಿ ಸಿಎಂ ಬೊಮ್ಮಾಯಿ ಅವರ ಹಿಂದೆ ಮುಂದೆ ಪ್ರದಕ್ಷಿಣೆ ಹಾಕುತ್ತಿದ್ದ ಕೆಲ ಹಿರಿಯ ಶಾಸಕರು ಹೊಟೇಲ್ ಅಶೋಕದಲ್ಲಿ ಏರ್ಪಡಿಸಿದ್ದ ಸಂಸದರ ಸಭೆಯಲ್ಲಿ ಭಾಗವಹಿಸಲೂ ತೆರಳಿದ್ದರು. ಆದರೆ, ಸಭೆ ಸಂಸದರ ಪಾಲ್ಗೊಳ್ಳುವಿಕೆಗೆ ಮಾತ್ರ ಸೀಮಿತವಾಗಿದ್ದರಿಂದ, ಸಭೆಗೆ ಸಂಬಂಧಿಸದ ವ್ಯಕ್ತಿಗಳು ದಯವಿಟ್ಟು ಈ ಕೋಣೆಯಿಂದ ಹೊರಹೋಗಬೇಕು ಎಂದು ಮೈಕ್ನಲ್ಲಿ ಹೇಳಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತು!
ವರಿಷ್ಠರ ಸೂತ್ರದಲ್ಲೇನಿದೆ?: ಸಚ್ಚಾರಿತ್ರ್ಯ, ನಿಷ್ಕಳಂಕ, ದಕ್ಷ, ಪ್ರಾಮಾಣಿಕ, ಕ್ರಿಯಾಶೀಲ, ಕರೊನಾ ಸಂಕಷ್ಟದಲ್ಲಿ ಜನರಿಗೆ ಮಿಡಿದ ಪರಿ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಳಕ್ಕೆ ನೀಡಿದ ಕೊಡುಗೆ ಇತ್ಯಾದಿ ಅಂಶಗಳು ವರಿಷ್ಠರು ರೂಪಿಸಿದ ಸೂತ್ರದಲ್ಲಿವೆ.
ಮೋದಿ ಜತೆ 40 ನಿಮಿಷ: ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸುಮಾರು 40 ನಿಮಿಷಗಳ ಕಾಲ ರ್ಚಚಿಸಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆಂದು ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕ ಮಿತ್ರರು ನನ್ನೊಂದಿಗೆ ರಾಜ್ಯಕ್ಕೆ ಮರಳಬೇಕು. ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇರಳದ ಗಡಿ, ವಿಸ್ತರಿಸಿದ ಜಿಲ್ಲಾ ಆಡಳಿತಗಳು, ಪ್ರವಾಹ ಬಾಧಿತ ಜಿಲ್ಲಾ ಆಡಳಿತದೊಂದಿಗೆ ವಿಡಿಯೋ ಸಂವಾದ ನಡೆಯಲಿದ್ದು, ಈ ಕಾರ್ಯದಲ್ಲಿ ಎಲ್ಲ ಶಾಸಕರು ಕೈ ಜೋಡಿಸಬೇಕು.
| ಬಸವರಾಜ ಬೊಮ್ಮಾಯಿ ಸಿಎಂ