ಸಿಎಂ v/s ರಾಜ್ಯಪಾಲ: ಚರ್ಚೆಗೆ ಗ್ರಾಸವಾದ ಗವರ್ನರ್ ಅಧಿಕಾರವ್ಯಾಪ್ತಿ

CM Governer
Published on
ರಾಜ್ಯ ಸರ್ಕಾರ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೆ ವಿಳಂಬನೀತಿ ಅನುಸರಿಸುತ್ತಿರುವ ಪಂಜಾಬ್ ಮತ್ತು ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ‘ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದು ಎಚ್ಚರಿಸಿದೆ. ಹಾಗಾದರೆ, ರಾಜ್ಯಪಾಲರು ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆಯೆ? ಅವರಿಗೆ ಇರುವ ಅಧಿಕಾರಗಳೇನು? ಆ ಬಗ್ಗೆ ಕಾನೂನು ಏನು ಹೇಳುತ್ತದೆ?

ಸುಪ್ರೀಂ ಕೋರ್ಟ್ ಹೇಳುವುದೇನು?

ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ಆಕ್ಷೇಪಗಳಿದ್ದರೆ, ಅನುಮಾನಗಳಿದ್ದರೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಅದನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕೆ ಹೊರತು, ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ಕಾಯು ವಂತೆ ಮಾಡಬಾರದು. ಇದರಿಂದ ಸರ್ಕಾರದ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ರಾಜ್ಯಪಾಲರು ವಿಧೇಯಕವನ್ನು ಯಾವಾಗ ತಡೆಹಿಡಿಯಬಹುದು?

  • ಸಂವಿಧಾನದ ಆಶಯ, ಮಾನ್ಯತೆಗಳಿಗೆ ವಿರುದ್ಧವಾಗಿದ್ದಾಗ.
  • ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿದ್ದಾಗ.
  • ಸಂವಿಧಾನದ 31 (ಎ) ವಿಧಿಗೆ ಪೂರಕವಾಗಿ ಇಲ್ಲದಿದ್ದಾಗ.
  • ಯಾರದೋ ಸ್ವಹಿತಾಸಕ್ತಿ ವಿಷಯಗಳು ಅಡಗಿದ್ದಾಗ.

ಅಮೆರಿಕದಲ್ಲಿ ಹೇಗೆ?

ಅಮೆರಿಕದ ಅಧ್ಯಕ್ಷರು ವಿಧೇಯಕಕ್ಕೆ ಅನುಮತಿ ನೀಡದಿರುವ ಹಕ್ಕು ಹೊಂದಿದ್ದಾರೆ. ಆದರೆ, ಅದೇ ವಿಧೇಯಕವನ್ನು ಸದನ 3/2 ಬಹುಮತದೊಂದಿಗೆ ಅಂಗೀಕರಿಸಿದರೆ, ಅದು ಕಾನೂನಾಗಿ ಮಾರ್ಪಡುತ್ತದೆ.

ಮಸೂದೆಗಳ ವಿಷಯದಲ್ಲಿ ರಾಜ್ಯಪಾಲರ ಅಧಿಕಾರಗಳು

ಅನುಚ್ಛೇದ 200

ರಾಜ್ಯ ವಿಧಾನಮಂಡಲದ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿದಾಗ ರಾಜ್ಯಪಾಲರಿಗೆ ನಾಲ್ಕು ಆಯ್ಕೆಗಳು ಇರುತ್ತವೆ.

1) ಅಂಗೀಕರಿಸುವುದು 2) ತಡೆಹಿಡಿಯುವುದು 3) ರಾಷ್ಟ್ರಪತಿ ಪರಿಶೀಲನೆಗೆ ಕಳಿಸುವುದು 4) ಪುನಃ ಪರ್ಯಾಲೋಚನೆಗಾಗಿ ಸರ್ಕಾರಕ್ಕೆ ಹಿಂದಿರುಗಿಸುವುದು (ಅದು ಧನವಿನಿಯೋಗ ವಿಧೇಯಕವಲ್ಲದಿದ್ದರೆ)

ಅನುಚ್ಛೇದ 201

ರಾಷ್ಟ್ರಪತಿ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ ವಿಧೇಯಕಗಳು

  • ವಿಧೇಯಕವನ್ನು ರಾಷ್ಟ್ರಪತಿ ಪರಿಶೀಲನೆಗಾಗಿ ರಾಜ್ಯಪಾಲರು ಕಳಿಸಿದಾಗ, ರಾಷ್ಟ್ರಪತಿ ಆ ವಿಧೇಯಕಕ್ಕೆ ಅನುಮತಿ ಕೊಟ್ಟಿರುವುದಾಗಿ ಅಥವಾ ತಡೆಹಿಡಿದಿರುವುದಾಗಿ ಘೊಷಿಸಬಹುದು.
  • ಧನ ವಿಧೇಯಕವಲ್ಲದಿದ್ದರೆ ಆ ವಿಧೇಯಕವನ್ನು ಸಂದರ್ಭಾನುಸಾರ, ರಾಜ್ಯ ವಿಧಾನಮಂಡಲಕ್ಕೆ ವಾಪಸ್ ಕಳುಹಿಸುವಂತೆ ರಾಜ್ಯಪಾಲರಿಗೆ ರಾಷ್ಟ್ರಪತಿ ನಿರ್ದೇಶಿಸಬಹುದು. ಬಳಿಕ ರಾಜ್ಯಪಾಲರು ತಮ್ಮ ಟಿಪ್ಪಣಿ/ಸಂದೇಶದೊಂದಿಗೆ ಅದನ್ನು ವಾಪಸ್ ಕಳುಹಿಸಬಹುದು.
  • ವಿಧೇಯಕವನ್ನು ವಾಪಸ್ ಕಳಿಸಿದಾಗ, ಆರು ತಿಂಗಳೊಳಗೆ ವಿಧಾನಮಂಡಲ ಆ ವಿಧೇಯಕವನ್ನು ಪುನಃ ಪರ್ಯಾಲೋಚಿಸಬೇಕಾಗುತ್ತದೆ. ತಿದ್ದುಪಡಿ ಸಹಿತ ಅಥವಾ ತಿದ್ದುಪಡಿಯಿಲ್ಲದೆ ಅಂಗೀಕೃತವಾದರೆ ಅದನ್ನು ಪರ್ಯಾಲೋಚನೆಗಾಗಿ ಮತ್ತೆ ರಾಷ್ಟ್ರಪತಿಗೆ ಕಳಿಸಬೇಕಾಗುತ್ತದೆ.

ಇತ್ತೀಚಿನ ಪ್ರಕರಣಗಳು

  • ತೆಲಂಗಾಣ ರಾಜ್ಯಪಾಲರು ವಿಧೇಯಕಗಳಿಗೆ ಅಂಗೀಕಾರ ನೀಡಿಲ್ಲ ಎಂದು ಅಲ್ಲಿನ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
  • ತಮಿಳುನಾಡು ಸರ್ಕಾರ ಕೂಡ ಇದೇ ವಿಷಯಕ್ಕೆ ಸಂಬಂಧಿಸಿ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ, ನಿಗದಿತ ಕಾಲಮಿತಿಯೊಳಗೆ ರಾಜ್ಯಪಾಲರು ವಿಧೇಯಕಗಳಿಗೆ ಮಂಜೂರಾತಿ ನೀಡಬೇಕು ಅಥವಾ ಅಂಕಿತ ಹಾಕಬೇಕು ಎಂದು ತಮಿಳುನಾಡು ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿ, ರಾಷ್ಟ್ರಪತಿಗೆ ಕಳುಹಿಸಿದೆ. ನೀಟ್ ಪರೀಕ್ಷೆಯಿಂದ ತಮಿಳುನಾಡು ವಿದ್ಯಾರ್ಥಿಗಳಿಗೆ ವಿನಾಯ್ತಿ ನೀಡಬೇಕು ಎಂದು ಸರ್ಕಾರ ಅಂಗೀಕರಿಸಿದ್ದ ವಿಧೇಯಕವನ್ನು ಅಲ್ಲಿನ ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದಾರೆ.
  • ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ನಿವಾಸ, ಕಚೇರಿಗಳ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಪಾಲ ಆರ್.ಎನ್.ರವಿ ಅವರು, ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆದೇಶಿಸಿದರು. ಈ ಆದೇಶ ಭಾರಿ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ಆದೇಶ ಹೊರಡಿಸಿದ ಐದು ಗಂಟೆಗಳ ಬಳಿಕ ರಾಜ್ಯಪಾಲರು ಅದನ್ನು ವಾಪಸ್ ಪಡೆದರು.
  • ಕೇರಳದಲ್ಲಂತೂ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಬಹಿರಂಗವಾಗಿಯೇ ನಡೆಯಿತು. ‘ಲೋಕಾಯುಕ್ತ ತಿದ್ದುಪಡಿ ಮಸೂದೆ’ ಮತ್ತು ‘ಕೇರಳ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ’ಗಳಿಗೆ ಯಾವುದೇ ಕಾರಣಕ್ಕೂ ಅಂಕಿತ ಹಾಕುವುದಿಲ್ಲ ಎಂದು ರಾಜ್ಯಪಾಲರು ಬಹಿರಂಗವಾಗಿಯೇ ಹೇಳಿದರು.
  • ಪಂಜಾಬ್​ನಲ್ಲಿ ಅನೇಕ ಮಹತ್ವದ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ ಎಂದು ದೂರಿ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net