

ಕಳೆದ 2 ವರ್ಷದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ, ಕೊಲೆ-ದರೋಡೆ-ಮನೆ ಗಳ್ಳತನ ಸೇರಿ ಇತರೆ ಅಪರಾಧಗಳು ಕಡಿಮೆ ಆಗಿರುವುದನ್ನು ಇಲಾಖೆ ಕೊಟ್ಟಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಆದರೆ, ಆರೋಪ ಪಟ್ಟಿಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುವ ಜತೆಗೆ FIR ಅನ್ನು ತಕ್ಷಣ ದಾಖಲಿಸಬೇಕು, ತನಿಖೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಪರಾಧಿಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.ಸೈಬರ್ ಅಪರಾಧಗಳು ಹೆಚ್ಚುತ್ತಿದ್ದರೆ, ಇವುಗಳ ಪತ್ತೆಯ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ತನಿಖೆಯ ಗುಣಮಟ್ಟ ಹೆಚ್ಚಿಸುವ ಸೂಚನೆ ನೀಡಿದ್ದೀನಿ. ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಚೇರಿಗಳಲ್ಲೇ ಕುಳಿತಿರಬಾರದು. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಡ್ರಗ್ ಮಾರುವವರ ಅಂಗಡಿ, ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವ ಅಗತ್ಯ ಬಿದ್ದರೆ ಮಾಡಿ ಎಂದರು.
ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ಕಡ್ಡಾಯವಾಗಿ ದಾಖಲಿಸಿ. ಈ ಬಗ್ಗೆ ದೂರು ಬಂದ ತಕ್ಷಣ ಕ್ರಮಕೈಗೊಳ್ಳಿ. ರೈತರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧ ದೌರ್ಜನ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಬಾಲ್ಯವಿವಾಹ, ಪೋಕ್ಸೋ, ಅತ್ಯಾಚಾರ, ಭ್ರೂಣಹತ್ಯೆಗಳನ್ನು ನೂರಕ್ಕೆ ನೂರು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜತೆ ಸೇರಿ ಕ್ರಮಕ್ಕೆ ಸೂಚನೆ. ಪೊಲೀಸ್ ಇಲಾಖೆಗೆ ಅಗತ್ಯವಾದ ಸವಲತ್ತುಗಳನ್ನು ಒದಗಿಸಲಾಗುವುದು. ಅಲ್ಲದೆ, ಯಾವುದೇ ಪ್ರಕರಣದ ತನಿಖೆಯಲ್ಲಿ ನಾನು ತಲೆ ಹಾಕುವುದಿಲ್ಲ ಎಂದು ಸಿಎಂ ಹೇಳಿದರು.