

ಬೆಂಗಳೂರು: ಇಂದು ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ನಾವು ಕನ್ನಡಿಗರಾಗಿ, ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣವನ್ನು ನಿರ್ಮಿಸಬೇಕು ಎಂದು ಹೇಳಿದರು.
"ಕರ್ನಾಟಕ ರಾಜ್ಯ ಏಕೀಕರಣಗೊಂಡು ಇಂದಿಗೆ 68 ವರ್ಷಗಳು ಕಳೆದಿವೆ. 1953ರಲ್ಲಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಾಯಿತು. ಆಯೋಗದ ವರದಿಯನ್ನು ಆಧರಿಸಿ ರಾಜ್ಯಗಳ ಭಾಷಾವಾರು ವಿಂಗಡನೆಯಾಧರಿಸಿ, 1956ರ ನವೆಂಬರ್ 1ರಂದು ರಾಜ್ಯ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ಮಾಜಿ ಮುಖ್ಯಮಂತ್ರಿ, ದಿ. ದೇವರಾಜ ಅರಸು ಅವರ ಅವಧಿಯಲ್ಲಿ 1973ರ ನವೆಂಬರ್ 1ರಂದು ಮೈಸೂರು ರಾಜ್ಯ, ಇಡೀ ರಾಜ್ಯವನ್ನು ಪ್ರತಿನಿಧಿಸುವ ಹೆಸರಾದ ಕರ್ನಾಟಕವೆಂದು ಮರುನಾಮಕರಣಗೊಂಡಿತು. ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ಸಂದಿವೆ" ಎಂದರು.
"ಈ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಸಂಭ್ರಮಿಸಲಿಲ್ಲ. ಆದರೆ 2023ರ ನವೆಂಬರ್ 1ರಂದು 51ನೇ ವರ್ಷ ಎಂದು ಕರ್ನಾಟಕ ನಾಮಕರಣಗೊಂಡ ದಿನವೆಂದು ವರ್ಷಪೂರ್ತಿ ಆಚರಿಸಬೇಕೆಂದು ನಿರ್ಧರಿಸಲಾಯಿತು. ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ‘ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’ ಎಂಬ ಘೋಷವಾಕ್ಯದಡಿ ಇಡೀ ವರ್ಷ ಕನ್ನಡವನ್ನು ಸಂಭ್ರಮಿಸಲಾಯಿತು. ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವ ಜೊತೆಗೆ, ಇತರರೊಂದಿಗೆ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು. ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ, ಯಾವುದೇ ಜಾತಿ, ಧರ್ಮ, ಭಾಷೆಯವರೂ ಕೂಡ ಕನ್ನಡಿಗರೇ ಆಗುತ್ತಾರೆ" ಎಂದು ನುಡಿದರು.
"ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿದ್ದು, ಬಹಳ ಪ್ರಾಚೀನ ಭಾಷೆಯಾಗಿದೆ. ಆದ್ದರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷೆಯ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೇ, ಅಭಿಮಾನಿಗಳಾಗಬೇಕು. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನು ಕಲಿಯಬೇಡಿ ಎಂದು ಹೇಳುವುದಿಲ್ಲ. ಬೇರೆ ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಿ, ಆದರೆ ಕನ್ನಡದಲ್ಲಿ ಮಾತನಾಡುವುದನ್ನು ಮರೆಯಬೇಡಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಉತ್ತಮವಾದುದು ಎಂದು ಮಹಾತ್ಮಾ ಗಾಂಧೀಯವರು ಹೇಳಿದ್ದಾರೆ" ಎಂದರು.
"ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹಿಯ್ಯಾಳಿಸುವ ಪ್ರವೃತ್ತಿಯು ಕಂಡುಬರುತ್ತಿದೆ. ಇದು ನಾಡದ್ರೋಹ ಎಂದು ಪರಿಗಣಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಕರ್ನಾಟಕ ರಾಜ್ಯ, ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯವಾಗಿದೆ. 4 ಲಕ್ಷ ರೂ. ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಕೇವಲ 50-60 ಸಾವಿರ ಕೋಟಿ ಮಾತ್ರ. ಕನ್ನಡ ನಾಡು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ನಮಗೆ ಅನ್ಯಾಯವೆಸಗಬಾರದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂದು ಕೇಂದ್ರಕ್ಕೆ ನಮ್ಮ ಬೇಡಿಕೆಗೆ ರಾಜಕೀಯ ಬಣ್ಣವನ್ನು ಬಳಿಯಲಾಗುತ್ತಿದೆ" ಎಂದು ಕಿಡಿಕಾರಿದರು.
ಇದನ್ನೂ ಓದಿ: ಇಮಾಮಸಾಬ ವಲ್ಲೆಪ್ಪನವರಗೆ ರಾಜ್ಯೋತ್ಸವ ಪ್ರಶಸ್ತಿ
"ನಮ್ಮ ಹಕ್ಕಿಗೆ ಹೋರಾಡಬೇಕಾಗಿದೆ. ರಾಜ್ಯದ ಸಂಸದರು ಕೇಂದ್ರಕ್ಕೆ ಹೋಗಿದ್ದು, ಕೇಂದ್ರದಲ್ಲಿ ಕನ್ನಡಪರ ಧ್ವನಿ ಎತ್ತಬೇಕು. ಈ ಶಕ್ತಿಯನ್ನು ಆಯ್ಕೆಯಾಗಿ ಹೋದವರು ಬೆಳೆಸಿಕೊಂಡರೆ ರಾಜ್ಯಕ್ಕೆ ನ್ಯಾಯ ದೊರೆಯುತ್ತದೆ. ಕೇಂದ್ರದ ಅನ್ಯಾಯದ ನಡುವೆಯೂ, ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಪ್ರತಿ ದಿನ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರೂ ದಿನಗಳು ಮೊಟ್ಟೆ ಹಾಗೂ ಚಿಕ್ಕಿಯನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಹಾಲಿನ ಜತೆ ಸಾಯಿ ಅನ್ನಪೂರ್ಣ ಅವರ ಸಹಯೋಗದೊಂದಿಗೆ ರಾಗಿಮಾಲ್ಟನ್ನೂ ನೀಡಲಾಗುತ್ತಿದೆ. ಬಡವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ. ಇಂದು ಕನ್ನಡ ದೀವಿಗೆ ಪುಸ್ತಕವನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಲಾಗಿದೆ" ಎಂದು ಹೇಳಿದರು.