

ಮೈಸೂರು: ಚುನಾವಣಾ ಬಾಂಡ್ ಮುಖೇನ ವಿತ್ತ ಸಚಿವೆ ಸುಲಿಗೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು 42ನೇ ಎಸಿಎಂಎಂ ನ್ಯಾಯಾಲಯ ತಿಲಕ್ನಗರ ಪೊಲೀಸರಿಗೆ ಆದೇಶ ಹೊರಡಿಸಿದೆ. ಸದ್ಯ ಈ ವಿಚಾರವನ್ನು ಮುಂದಿಟ್ಟು ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ರಾಜೀನಾಮೆ? ಬಿಜೆಪಿ ನಾಯಕರ ಪ್ರತಿಭಟನೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ನಿನ್ನೆ (ಸೆ.27) ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, "ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಅವರ ಮೇಲೆ ಎಫ್ಐಆರ್ ದಾಖಲಿಸುವಂತೆ ಆದೇಶ ಹೊರಬಿದ್ದಿದೆ. ಇವರ ರಾಜೀನಾಮೆಗೆ ಬಿಜೆಪಿ ನಾಯಕರು ಯಾವಾಗ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ? ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದರೆ ಪ್ರಧಾನಿ ಮೋದಿ ಅವರೂ ರಾಜೀನಾಮೆ ನೀಡಬೇಕಾಗುತ್ತದೆ. ಜಾಮೀನಿನ ಮೇಲಿರುವ ಕುಮಾರಸ್ವಾಮಿಯವರು ರಾಜೀನಾಮೆ ನೀಡಲಿ" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನು ನಾಡಹಬ್ಬ ದಸರಾ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸಾಹಿತಿ ಹಂ.ಪ. ನಾಗರಾಜಯ್ಯ ಅವರಿಂದ ಈ ಬಾರಿಯ ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ದಸರಾ ಉತ್ಸವವನ್ನು ಜನರ ಉತ್ಸವದಂತೆ ಆಚರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್, 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅಂದು ದಸರಾ ಉದ್ಘಾಟನೆ, ವಸ್ತುಪ್ರದರ್ಶನ, ದಸರಾ ಕ್ರೀಡಾ ಉತ್ಸವ ಉದ್ಘಾಟನೆ, ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ, ಸಿನಿಮೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ದಸರಾ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ" ಎಂದರು.
"ದಸರಾ ಮಹೋತ್ಸವದಲ್ಲಿ ಉತ್ತಮ ರಸ್ತೆ, ವಿದ್ಯುತ್ ಅಲಂಕಾರ ಸೇರಿದಂತೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಕಟ್ಟೆಚ್ಚರ ವಹಿಸಲು ಸಹ ಸೂಚನೆ ನೀಡಲಾಗಿದೆ. ಇತ್ತೀಚೆಗೆ ನಾಗಮಂಗಲದ ಘಟನೆ, ಪೊಲೀಸರ ಕರ್ತವ್ಯ ಲೋಪದಿಂದ ನಡೆದಿದ್ದು, ಎಚ್ಚರಿಕೆ ವಹಿಸಿದ್ದರೆ ಅನಾಹುತ ನಡೆಯುತ್ತಿರಲಿಲ್ಲ. ಆ ರೀತಿಯ ಲೋಪಗಳು ದಸರಾ ಸಂದರ್ಭದಲ್ಲಿ ನಡೆಯಬಾರದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ" ಎಂದು ಹೇಳಿದರು.