

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಬೊಮ್ಮಘಟ್ಟದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಈ.ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಅವಧಿಯಿಂದಲೂ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದೆ. ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲೂ ಜನರ ಪರವಾಗಿ ಇರಲಿಲ್ಲ, ಈಗಲೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 'ನಾ ಖಾವೋಂಗಾ-ನಾ ಖಾನೆ ದೂಂಗಾ' ಎಂದು ಭಾಷಣ ಮಾಡುತ್ತಾರೆ. ಆದರೆ ಜನಾರ್ಧನ ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಜನಾರ್ಧನ ರೆಡ್ಡಿಯನ್ನು ನ್ಯಾಯಾಲಯವೇ ಅಪರಾಧಿ ಎಂದು ಘೋಷಿಸಿ ಜೈಲಿಗೆ ಹಾಕಿತ್ತು. ಬಿಜೆಪಿಗಾಗಲಿ, ಮೋದಿಗಾಗಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ ಇದೆಯಾ? ಎಂದು ಕಿಡಿಕಾರಿದರು.
ಬಿಜೆಪಿ ಅಧಿಕಾರದಲ್ಲಿದ್ದಷ್ಟೂ ದಿನ ಸಂಡೂರಿಗೆ ಒಂದೇ ಒಂದು ಮನೆ ಕೊಡುವ ಯೋಗ್ಯತೆ ಇರಲಿಲ್ಲ. ಆಪರೇಷನ್ ಕಮಲದ ಮೂಲಕ ಜನ ಗೆಲ್ಲಿಸಿದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಲೂಟಿ ಮಾಡಿಕೊಂಡು ಹೋದರು. ಅದಕ್ಕೇ ಆಪರೇಷನ್ ಕಮಲದ ಸರ್ಕಾರವನ್ನು ಜನ ಸೋಲಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದರು.
ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಕೊಡ್ತಾ ಇದ್ದೇವೆ. 1 ಕೋಟಿ 61 ಲಕ್ಷ ಕುಟುಂಬಗಳಿಗೆ ಉಚಿತ ಕರೆಂಟ್ ಕೊಡ್ತಿರೋದು ನಾವು. ಐದು ಕೆಜಿ ಅಕ್ಕಿ ಜತೆಗೆ ಐದು ಕೆಜಿ ಅಕ್ಕಿಯ ಹಣವನ್ನೂ ಕೊಡುತ್ತಾ ಇರೋದು ನಾವು. ಹೀಗೆ ಐದಕ್ಕೆ ಐದೂ ಗ್ಯಾರಂಟಿಗಳ ಮೂಲಕ ಸಂಡೂರಿನ ಜನರಿಗೆ, ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ಕೊಡ್ತಾ ಇರೋದು ನಾವು. ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಇವುಗಳನ್ನು ಏಕೆ ಜಾರಿ ಮಾಡಿಲ್ಲ? ಎಂದು ಪ್ರಶ್ನಿಸಿದರು.
ಸಂಡೂರಿನ ಅಭಿವೃದ್ಧಿಗೆ ಈ.ತುಕಾರಾಮ್ ಮತ್ತು ಅವರ ಧರ್ಮಪತ್ನಿ ಅನ್ನಪೂರ್ಣಮ್ಮ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅನ್ನಪೂರ್ಣಮ್ಮ ಗೆದ್ದರೆ ಸಂಡೂರಿನ ಅಭಿವೃದ್ಧಿ ಕೆಲಸಗಳು ಸರಾಗವಾಗಿ, ವೇಗವಾಗಿ ಮುಂದುವರೆಯುತ್ತವೆ. ಅನ್ನಪೂರ್ಣಮ್ಮ ನನ್ನ ಆತ್ಮೀಯ ಸ್ನೇಹಿತನ ಮಗಳು. ಇವರನ್ನು ಗೆಲ್ಲಿಸಿ ಕಳುಹಿಸಿ, ನನಗೆ ನಮ್ಮ ಸರ್ಕಾರಕ್ಕೂ ಬಲ ಬರುತ್ತದೆ. ಸಂಡೂರಿನ ಜನರಿಗೆ ತುಂಬಾ ಅನುಕೂಲಗಳಾಗುತ್ತವೆ ಎಂದು ಹೇಳಿದರು.