ಕೇಂದ್ರ ಸಾರಿಗೆ ಸಚಿವರನ್ನು ಭೇಟಿಯಾಗಿ ಬೆಂ-ಮೈ ಹೆದ್ದಾರಿ ಸಮಸ್ಯೆ ಸೇರಿ ಹಲವು ಬೇಡಿಕೆ ಮುಂದಿಟ್ಟ ಸಿಎಂ ಸಿದ್ದು

Siddaramaih Nitin Gadkari
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು (ಆ. 03) ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಸೇತು ಬಂಧನ ಅಡಿಯಲ್ಲಿ ರಾಜ್ಯ ರಸ್ತೆಗಳಲ್ಲಿ ಅಸ್ತಿತ್ವದಲ್ಲಿರುವ ಲೆವೆಲ್ ಕ್ರಾಸಿಂಗ್‌ಗಳಿಗೆ ಬದಲಾಗಿ 784.50 ಕೋಟಿ ರೂ. ವೆಚ್ಚದಲ್ಲಿ ಮೆಲ್ಸೇತುವೆ ಮತ್ತು ಸುರಂಗ ಮಾರ್ಗಕ್ಕೆ ಅನುಮೋದನೆ ನೀಡಿರುವುದಕ್ಕೆ ಮತ್ತು ಗ್ರೀನ್​ ಫೀಲ್ಡ್​ ಕಾರಿಡಾರ್​ಗಳು, ಸ್ಯಾಟಲೈಟ್​ ಟೌನ್​ ರಿಂಗ್​ ರೋಡ್ಸ್​ ಸೇರಿದಂತೆ ಅನೇಕ ಹೆದ್ದಾರಿ ಯೋಜನೆಗಳನ್ನು ನೀಡಿರುವುದಕ್ಕೆ ನಿತಿನ್​ ಗಡ್ಕರಿ ಅವರಿಗೆ ರಾಜ್ಯದ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯ ಅವರು ಕೃತಜ್ಞತೆಯನ್ನು ಸಲ್ಲಿಸಿದರು.

CM Siddaramaiah, Nitin Gadkari

ಭೇಟಿಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಕೆಳಕಂಡ ಹಲವು ಬೇಡಿಕೆಗಳನ್ನು ನಿತಿನ್​ ಗಡ್ಕರಿ ಮುಂದಿಟ್ಟಿದ್ದು, ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.

1. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸುವ ಕ್ರಮವಾಗಿ ಬೈಪಾಸ್​ಗಳಿಗೆ ಎಂಟ್ರಿ ಮತ್ತು ಎಕ್ಸಿಟ್​ ನೀಡುವುದು ಮತ್ತು ಹೆದ್ದಾರಿ ಬದಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದು.

2. ರಾಷ್ಟ್ರೀಯ ಹೆದ್ದಾರಿ 75 (ಹಳೆಯ ಹೆದ್ದಾರಿ 48) ರಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ವಿಭಾಗದವರೆಗೂ ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ ನಿರ್ಮಾಣ.

3. ರಾಷ್ಟ್ರೀಯ ಹೆದ್ದಾರಿಗಳ ಮೂಲ ಕಾಮಗಾರಿಗಳ ಮಂಜೂರಾತಿಯನ್ನು 2023-24ರ ವಾರ್ಷಿಕ ಯೋಜನೆ ಅಡಿಯಲ್ಲಿ 10,000 ಕೋಟಿ ರೂಪಾಯಿಗೆ ಏರಿಸುವುದು.

4. ಪ್ರವಾಹದಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿಗಾಗಿ 250 ಕೋಟಿ ರೂಪಾಯಿ ಬಿಡಗಡೆ ಮಾಡುವುದು.

5. ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ಇರುವ ಅನುದಾನವನ್ನು 50 ಕೋಟಿ ರೂಪಾಯಿಗೆ ಏರಿಸುವುದು.

6. ತಾತ್ವಿಕವಾಗಿ ಘೋಷಿಸಲಾದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಮುಖ ಆದ್ಯತೆ ನೀಡುವುದು.

7. ರಾಜ್ಯದ ರಸ್ತೆಗಳು ಮತ್ತು ಪ್ರಮುಖ ಜಿಲ್ಲಾ ರಸ್ತೆ (MDR)ಗಳ ಸುಧಾರಣೆಗಾಗಿ ಪ್ರಸಕ್ತ ವರ್ಷ (2023-24) ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಗಳ (CRIF) ಅಡಿಯಲ್ಲಿ 1000 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದು.

8. ಕೊಳ್ಳೇಗಾಲ ಮಾರ್ಗವಾಗಿ ಗುಂಡ್ಲಪೇಟೆ, ನಂಜನಗೂಡು, ಮೈಸೂರಿನ ಮೂಲಕ ಕೇರಳ ಸಂಪರ್ಕ ಕಲ್ಪಿಸುವ 150 ಕಿ.ಮೀ ಉದ್ದದ ರಸ್ತೆಯನ್ನು ಚತುಷ್ಪಥ ಅಥವಾ ಷಟ್ಪಥಗೆ ವಿಸ್ತರಿಸಲು ಮತ್ತು ಮಳವಳ್ಳಿ ಮತ್ತು ಕೊಳ್ಳೇಗಾಲ ಮಾರ್ಗವಾಗಿ ಕನಕಪುರದಿಂದ ಕರ್ನಾಟಕ-ತಮಿಳುನಾಡು ಸಂಪರ್ಕ ಕಲ್ಪಿಸುವ 164.36 ಕಿ.ಮೀ ಉದ್ದದ ರಸ್ತೆಯನ್ನು ಚುತುಷ್ಪಥಕ್ಕೆ ವಿಸ್ತರಿಸಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ನೀಡುವುದು.

9. ವಾರ್ಷಿಕ ಯೋಜನೆ 2023-24 ರ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಸ್ತಿತ್ವದಲ್ಲಿರುವ ಲೆವೆಲ್ ಕ್ರಾಸಿಂಗ್‌ಗಳಿಗೆ ಬದಲಾಗಿ 5 ಮೇಲ್ಸೇತುವೆ ಮತ್ತು ಸುರಂಗ ಮಾರ್ಗಗಳಿಗೆ ಮಂಜೂರಾತಿ ನೀಡುವುದು.

ಮೇಲಿನ ಹೆದ್ದಾರಿ ಯೋಜನೆಗಳು ಕರ್ನಾಟಕದ ಆರ್ಥಿಕ ಬೆಳವಣಿಗೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಈ ಪ್ರಸ್ತಾವನೆಯನ್ನು ನೀವು ಪರಿಗಣಿಸಿ ಅನುಮೋದನೆ ನೀಡುತ್ತೀರಿ ಎಂದು ನಾನು ಭಾವಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ನಿತಿನ್​ ಗಡ್ಕರಿ ಅವರಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net