ಮನುಷ್ಯನು ಮನುಷ್ಯನನ್ನು ಪ್ರೀತಿಸಬೇಕು, ದ್ವೇಷಿಸುವುದು ದುರ್ಗುಣ: ಸಿಎಂ ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ಬಸವೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಭಾವಚಿತ್ರವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರವಿರಬೇಕೆಂದು ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಮನುಷ್ಯನು ಮನುಷ್ಯನನ್ನು ಪ್ರೀತಿಸಬೇಕು. ದ್ವೇಷಿಸುವುದು ದುರ್ಗುಣ. ಬಸವಣ್ಣ ಸಾಂಸ್ಕೃತಿಕ ನಾಯಕ ಎನ್ನುವುದು ಅತ್ಯಂತ ಯೋಗ್ಯವಾಗಿದೆ. ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರ ಇರಬೇಕು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಾದಿ ಶರಣರ ವಚನಗಳು ಹಿಂದೆ, ಇಂದು ಹಾಗೂ ಮುಂದೆಯೂ ಪ್ರಸ್ತುತವಾಗಿರಲಿವೆ. ಬಸವಣ್ಣನವರ ಕಾರ್ಯಕ್ರಮಕ್ಕೆ ಯಾವ ಕಾರಣಕ್ಕೂ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ ಎಂದು ಹೇಳಿದ್ದಾರೆ.

ನುಡಿದಂತೆ ನಡೆದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವರ್ಗರಹಿತ, ಜಾತಿರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ಅವರು ವಚನಗಳನ್ನು ರಚಿಸಿದರು. ಕಾಯಕ, ದಾಸೋಹವನ್ನು ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕು. ಬಡವರು ಬಡವರಾಗಿಯೇ ಉಳಿಯುವ ಹಾಗೂ ಶ್ರೀಮಂತರು ಕುಳಿತು ತಿನ್ನುವ ವ್ಯವಸ್ಥೆ ಹೋಗಬೇಕು ಎಂದಿದ್ದಾರೆ.

ಅದರಂತೆ ಫೆ. 17ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು ಮಟ್ಟದಲ್ಲಿ ಶಾಸಕರು ಹಾಗೂ ಎಲ್ಲಾ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಆಯಾ ಅಧ್ಯಕ್ಷರಿಂದ ನೆರವೇರಿಸಲು ಸೂಚಿಸಲಾಗಿದೆ. ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರವಿರಬೇಕು ಎಂದು ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net