ಕೊಡುತ್ತೇವೆ ಎಂದು ಹೇಳಿ ನಂತರ ಆಗುವುದಿಲ್ಲ ಅಂದ್ರೆ ಇವರಿಗೆ ಮಾನ ಮರ್ಯಾದೆ ಇಲ್ಲ: ಸಿಎಂ

siddaramaiah
Published on

ಬೆಂಗಳೂರು: ಅಕ್ಕಿ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ನಾವು ಆರೋಪ ಮಾಡುವುದಿಲ್ಲ. ಮೊದಲು ಕೊಡುತ್ತೇವೆ ಎಂದು ಬಳಿಕ ಆಗುವುದಿಲ್ಲ ಎಂದರೆ ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಹೇಳುವ ಮೂಲಕ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ 7 ಕೆ.ಜಿ ಅಕ್ಕಿಯನ್ನು ಕೊಡುತ್ತಿದ್ದೆ, ಬಳಿಕ ಬಿಜೆಪಿಯವರು 5 ಕೆ.ಜಿಗೆ ಇಳಿಕೆ ಮಾಡಿದರು. ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂಬುದು ನಮ್ಮ ಗುರಿ, ಯಾರು ಹಸಿವಿನಿಂದ ಮಲಗಬಾರದು. ಹಾಗಾಗಿ ಇನ್ನು 5 ಕೆಜಿ ಅಕ್ಕಿ ಹೆಚ್ಚಿಗೆ ಕೊಡುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಹೇಳಿದ್ದೆವು ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಿಂದ 4 ಕೋಟಿ 42 ಲಕ್ಷ ಜನರಿಗೆ ಇದರ ಉಪಯೋಗ ದೊರೆಯಲಿದೆ. ಇದಕ್ಕೆ ಸುಮಾರು 10, 275 ಕೋಟಿ ರೂ. ಅಗತ್ಯವಿದೆ. ನಾವು ಎಫ್​​ಸಿಐ ಬಳಿ 2 ಲಕ್ಷ 28 ಸಾವಿರದ ಮೆಟ್ರಿಕ್ ಟನ್ ಅಕ್ಕಿ ಬೇಕು ಎಂದು ಮನವಿ ಮಾಡಿದ್ದೆವು. ಆರಂಭದಲ್ಲಿ ಒಪ್ಪಿ ಪತ್ರ ಬರೆದಿದ್ದರು, ನಂತರದಲ್ಲಿ ನಾವು ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದೇವೆ ಎಂದು ಪತ್ರ ಬರೆಯುವ ಮೂಲಕ ನಾವು ಪೂರೈಕೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಬಡವರ ವಿರೋಧಿ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸುಖಾಸುಮ್ಮನೆ ನಾವು ಆರೋಪ ಮಾಡುವುದಿಲ್ಲ. ಮೊದಲು ಕೊಡುತ್ತೇವೆ ಎಂದು ಹೇಳಿ ತದನಂತರ ಆಗುವುದಿಲ್ಲ ಎಂದು ಹೇಳುತ್ತಾರೆ. ಇವರಿಗೆ ಮಾನಮರ್ಯಾದೆ ಇಲ್ಲ ಎಂದು ಹೇಳಿದರು.

ಬಡವರಿಗೆ ಊಟ ಕೊಡುವುದಕ್ಕೆ ಅಕ್ಕಿ ಇಟ್ಟುಕೊಂಡು ಇಲ್ಲ ಎಂದು ಹೇಳಿದರು. ಅದಕ್ಕಾಗಿ ಅಕ್ಕಿ ಲಭ್ಯವಾಗುವವರೆಗೂ ಈ ತಿಂಗಳ 10ನೇ ತಾರೀಖಿನಿಂದ 5 ಕೆಜಿಗೆ 170 ರೂ. ಹಣ ಹಣ ಕೊಡಲು ನಿರ್ಧರಿಸಿದ್ದೇವೆ. ಓಪನ್ ಮಾರುಕಟ್ಟೆಯಿಂದ ಅಕ್ಕಿ ಪಡೆಯಲು ಟೆಂಡರ್ ಕರೆದಿದ್ದೇವೆ. ಅಕ್ಕಿ ದೊರೆತ ಕೂಡಲೇ ಹಣ ಬದಲಿಗೆ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net