More

    ಬಜೆಟ್​ನಲ್ಲಿ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಿಲ್ಲ: ವಾಣಿಜ್ಯೋದ್ಯಮ ಸಂಸ್ಥೆ ಕಳವಳ

    ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ಜಾಣತನದಿಂದ ಕೂಡಿದ್ದರೂ, ಹುಬ್ಬಳ್ಳಿ -ಧಾರವಾಡ ಭಾಗದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ರಿಯಾಯಿತಿ ದರದಲ್ಲಿ ಉದ್ದಿಮೆದಾರರಿಗೆ ಭೂಮಿಯನ್ನು ನೀಡುವ ಅಂಶ ಕಂಡು ಬಂದಿಲ್ಲ. ಉದ್ದಿಮೆಗಳಿಗೆ ಪ್ರೋತ್ಸಾಹ ಕೊಡುವ ಯೋಜನೆಗಳ ಪ್ರಸ್ತಾವನೆ ಇಲ್ಲದೇ ಇರುವುದು ನಿರಾಶಾದಾಯಕವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ವಿಸ್ತರಣೆಗೆ 30 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು, ಸ್ಟಾರ್ಟ್ ಅಪ್ ಮತ್ತು ಸೆಮಿ ಕಂಡಕ್ಟರ್ ಘಟಕಗಳನ್ನು ಕೇವಲ ಬೆಂಗಳೂರು ವಲಯದಲ್ಲಿ ಮಾತ್ರ ಸ್ಥಾಪಿಸಲು ಉತ್ತೇಜನ ನೀಡಲಾಗಿದೆ. ಭೌಗೋಳಿಕವಾಗಿ ರಾಜ್ಯದ ಇತರ ಭಾಗಗಳ ಅಭಿವೃದ್ಧಿಗೆ ಯಾವುದೇ ಪ್ರಸ್ತಾವನೆಗಳು ಬಜೆಟ್​ನಲ್ಲಿ ಇಲ್ಲದೇ ಇರುವುದು ಮತ್ತು ಕೈಗಾರಿಕಾ ರಂಗಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಲಿಕ್ಕೆ ಒಂದಂಶದ ಪ್ರಸ್ತಾವನೆಯೂ ಇಲ್ಲದೇ ಇರುವುದು ನಿರಾಶಾದಾಯಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕೆಎಸ್​ಎಸ್​ಐಡಿಸಿ ವತಿಯಿಂದ ಹೊಸದಾಗಿ ಹುಬ್ಬಳ್ಳಿ ಸೇರಿ ಏಳು ಕೈಗಾರಿಕೆಗಳ ವಸಾಹತು ಸ್ಥಾಪನೆ ಸ್ವಾಗತಾರ್ಹವಾಗಿದೆ. ಎಂಎಸ್​ಎಂಇಗಳ ಅನುಕೂಲತೆಗಾಗಿ ರಾಜ್ಯದಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಗ್ಯಾರಂಟಿ ಯೋಜನೆಗಳ ಸಮಗ್ರ ಅಂದಾಜು ವೆಚ್ಚ 52 ಸಾವಿರ ಕೋಟಿ ರೂ.ಗಳನ್ನು ಕ್ರೋಡೀಕರಿಸಲು ಯಾವುದೇ ಹೊಸ ಪ್ರಸ್ತಾವನೆಗಳನ್ನು ಬಜೆಟ್​ನಲ್ಲಿ ಅಳವಡಿಸದೇ ಇರುವುದು ಕಂಡು ಬಂದಿದೆ. ಯಾವುದೇ ತೆರಿಗೆ ಭಾರ ಇಲ್ಲದೇ ಇರುವುದರಿಂದ ಜನಸಾಮಾನ್ಯರ ಬದುಕು ಯಥಾ ಸ್ಥಿತಿಯಲ್ಲಿ ಮುಂದುವರಿಯುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ಶಂಕರ ಕೋಳಿವಾಡ, ಮಾಜಿ ಅಧ್ಯಕ್ಷ ವಸಂತ ಲದವಾ, ಲೆಕ್ಕಪರಿಶೋಧಕ ವೈ.ಎಂ. ಖಟಾವಕರ, ಶೇಷಗಿರಿ ಕುಲಕರ್ಣಿ, ಸದಸ್ಯರಾದ ಅಶೋಕ ಲದವಾ, ಸಿ.ಎನ್. ಕರಿಕಟ್ಟಿ, ವಿಶ್ವನಾಥ ಹಿರೇಗೌಡರ, ಮೋಹನ ದೇಸಾಯಿ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts