ನಮ್ಮೂರಲ್ಲಿ ಸರ್ಕಾರಿ ವೈದ್ಯರೇ ಉಳಿಯಲ್ಲ.. ನೋಡಿ ಎಂಥ ಪರಿಸ್ಥಿತಿ!: ಸಿಎಂ ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ವೈದ್ಯರು ಸ್ವಯಂಪ್ರೇರಿತರಾಗಿ ಹಳ್ಳಿಗಳಿಗೆ ಹೋಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ವೈದ್ಯರಿಗೆ ಸಂಬಂಧಿಸಿದಂತೆ ಮಹತ್ವದ ಕೆಲವು ಸಂಗತಿಗಳನ್ನು ಹಂಚಿಕೊಂಡರು.

ವೈದ್ಯರಿಗೆ ಅಂತಃಕರಣ ಇರಬೇಕು, ವೈದ್ಯರಿಗೆ ಇರುವುದಿಲ್ಲ ಎಂದು ಹೇಳುತ್ತಿಲ್ಲ, ಆದರೆ ಪ್ರತಿಯೊಬ್ಬ ವೈದ್ಯರಿಗೂ ಅಂತಃಕರಣ ಇರಬೇಕು. ಬಹಳಷ್ಟು ವೈದ್ಯರು ಹಳ್ಳಿಯ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದಕ್ಕಾಗಿ ಕಾಯ್ದೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಆಗ ವೈದ್ಯರು ಸುಪ್ರೀಂಕೋರ್ಟ್​ಗೆ ಹೋದರು, ಆದರೆ ಅವರ ವಾದಕ್ಕೆ ಮನ್ನಣೆ ಸಿಗಲಿಲ್ಲ ಎಂಬುದನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಸಮಾಜ ಶೋಷಿತ ವರ್ಗದ ಬಗ್ಗೆ ಅಂತಃಕರಣ ಇರಬೇಕು. ಅದಕ್ಕಾಗಿ ವೈದ್ಯರು ಸ್ವಯಂಪ್ರೇರಿತವಾಗಿ ಹಳ್ಳಿಗಳಿಗೆ ಹೋಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡಬೇಕು. ಆದರೆ ಹಲವು ವೈದ್ಯರು ಪಿಎಚ್​ಸಿ ವಸತಿಗೃಹದಲ್ಲಿ ಇರುವುದೇ ಇಲ್ಲ, ಪಕ್ಕದ ನಗರಕ್ಕೆ ಹೋಗಿ ಇರುತ್ತಾರೆ ಎಂದು ತಮ್ಮೂರಿನ ಸಂಗತಿಯನ್ನೂ ಸಿಎಂ ಹೇಳಿದರು.

ನಮ್ಮೂರು ಸಿದ್ದರಾಮನಹುಂಡಿಯಲ್ಲಿ ಒಂದು ಪಿಎಚ್​ಸಿ ಇದೆ. ಆದರೆ ಅಲ್ಲಿ ವೈದ್ಯರು ಉಳಿದುಕೊಳ್ಳುವುದೇ ಇಲ್ಲ. ಸಿದ್ದರಾಮಣ್ಣ ನೀನು ಸಿಎಂ, ಆದರೆ ನಮ್ಮೂರಲ್ಲಿ ಡಾಕ್ಟ್ರೇ ಇರಲ್ಲ ಎಂದು ಎಲ್ಲರೂ ಕೇಳುತ್ತಾರೆ, ನೋಡಿ ಎಂತಹ ಪರಿಸ್ಥಿತಿ ಎಂದು ಸಿದ್ದರಾಮಯ್ಯ ತಮಾಷೆಯಾಗಿಯೇ ವಾಸ್ತವ ಸಂಗತಿಯನ್ನು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net