ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆಯಾ? ಸಿಎಂ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಹೀಗಿದೆ…

Siddaramaiah
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ ಎಂದು ವಿಪಕ್ಷಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ. ದರ ಏರಿಕೆ ನಿರ್ಧಾರ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ನಿರ್ಧಾರವಾಗಿತ್ತು. ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದ್ದರಿಂದ ದರ ಬದಲಾವಣೆ ಜಾರಿಯಾಗಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೃಹ ಲಕ್ಷಿ ಯೋಜನೆ ಫಲಾನುಭವಿಯಾಗಲು ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಕರೆಯಲಾಗುತ್ತದೆ. ಆಗಸ್ಟ್ 15ರ ವರೆಗೂ ಪರಿಶೀಲನೆ ನಡೆಸಿ ಆ.16 ರಂದು ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು.

ಏನಿದು ಗೊಂದಲ?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮೇ 12ರಂದು ಪ್ರತಿ ಯುನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಚುನಾವಣಾ ನೀತಿಸಂಹಿತೆ ಕಾರಣದಿಂದ ಈಗ ಜಾರಿಯಾಗಿದೆ. ದುಪ್ಪಟ್ಟಾದ ಮೊತ್ತ ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಪೂರ್ವಾನ್ವಯ ಆಗಲಿದೆ. ಇದರಿಂದಾಗಿ ಏಪ್ರಿಲ್ ಹಾಗೂ ಮೇ ತಿಂಗಳಿಗೆ ಅನ್ವಯಿಸುವ ದರ ಹೆಚ್ಚಳದ ಬಾಬ್ತನ್ನು ಜೂನ್ ಬಿಲ್‌ನಲ್ಲಿ ನಮೂದಿಸಲಾಗಿದೆ. ಇದು ವಿದ್ಯುತ್ ಬಿಲ್ ಮೊತ್ತ ದುಪ್ಪಟ್ಟು ಆಗಿರುವುದಕ್ಕೆ ಭಾರಿ ಕಾರಣವಾಗಿ ಗ್ರಾಹಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ಯುನಿಟ್‌ಗೆ 7 ರೂ.!

ಕೆಇಆರ್‌ಸಿ ಪ್ರಸಕ್ತ ಸಾಲಿಗೆ ವಿದ್ಯುತ್ ಶುಲ್ಕವನ್ನು ಒಂದೇ ಸ್ಲಾಬ್‌ಗೆ ಸೀಮಿತ ಮಾಡಿದೆ. ಇದರಿಂದ ಎಷ್ಟು ಪ್ರಮಾಣದ ಯುನಿಟ್ ಬಳಕೆ ಮಾಡಿದರೂ ಪ್ರತಿ ಯುನಿಟ್‌ಗೆ 7 ರೂ. ಪಾವತಿಸಬೇಕು. ಈ ಪದ್ಧತಿ ಪ್ರತಿ ಗ್ರಾಹಕನಿಗೂ ಹೊಡೆತ ನೀಡಿದೆ. 100 ಯುನಿಟ್ ಬಳಸುತ್ತಿದ್ದ ಗೃಹ ಬಳಕೆದಾರರು ಹೆಚ್ಚುವರಿಯಾಗಿ 210 ರೂ. ಪಾವತಿಸಬೇಕಿದೆ.

ಹಿಂದೆ 50 ಯುನಿಟ್ ವರೆಗೆ ಮೊದಲ ಸ್ಲಾಬ್, 51-100 ಎರಡನೇ ಸ್ಲಾಬ್ ಹಾಗೂ 101 ಮೇಲ್ಪಟ್ಟ ಯುನಿಟ್‌ಗೆ ಕ್ರಮವಾಗಿ 4.15 ರೂ., 5.60 ರೂ. ಹಾಗೂ 7.15 ರೂ. ನಿಗದಿಯಾಗಿತ್ತು. ಈಗ ಏಕ ಸ್ಲಾಬ್‌ನಿಂದಾಗಿ ಕಡಿಮೆ ವಿದ್ಯುತ್ ಬಳಸುವವರು ಕೂಡ ಯುನಿಟ್ ಒಂದಕ್ಕೆ 7 ರೂ. ಪಾವತಿಸಬೇಕಾಗುತ್ತದೆ. ಇದು ಗ್ರಾಹಕರ ಮೇಲೆ ಕೆಇಆರ್‌ಸಿ ಎಳೆದಿರುವ ಬರೆ ಎಂದು ಹಲವು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಾಕಿ ವಸೂಲಿಗೆ ತಾಕೀತು

200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸುವ 'ಗೃಹಜ್ಯೋತಿ' ಯೋಜನೆ ಆಗಸ್ಟ್ ನಿಂದ ಜಾರಿಗೆ ಬರಲಿದೆ. ಅಂದರೆ ಜುಲೈನಲ್ಲಿ ಬಳಸಿದ ವಿದ್ಯುತ್‌ಗೆ ಗ್ರಾಹಕರು ಆಗಸ್ಟ್‌ನಲ್ಲಿ ಪಾವತಿಸಬೇಕಿದ್ದ ಬಿಲ್‌ ಶೂನ್ಯ ಆಗಿರಲಿದೆ. ಆದರೆ, ಯಾವುದೇ ಬಾಕಿ ಉಳಿಸಿಕೊಂಡಿರುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳಿಂದ ಹಿಂಬಾಕಿ ವಸೂಲಿ ಮಾಡುವಂತೆ ಎಲ್ಲ ಎಸ್ಕಾಂಗಳಿಗೆ ನಿರ್ದೇಶನ ನೀಡಲಾಗಿದೆ. ಹೀಗಾಗಿ ಎಸ್ಕಾಂಗಳು ಹಿಂಬಾಕಿ ಇದೇ ತಿಂಗಳ ಬಿಲ್‌ನಲ್ಲಿ ನಮೂದಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net