

ಬೆಂಗಳೂರು: ಪರಿಶಿಷ್ಟ ಜಾತಿ ಹಣವನ್ನು ಲೂಟಿ ಹೊಡೆದಿರುವ ಕರ್ನಾಟಕ ಸರ್ಕಾರವನ್ನು ನೀವು ಪ್ರಶ್ನಿಸಬೇಕು ಎಂದು ವಿತ್ತ ಸಚಿವೆ ನೀಡಿದ್ದ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಸಿಎಂ ಸಿದ್ದರಾಮಯ್ಯ, ಎಸ್ಸಿ.ಎಸ್ಪಿ / ಟಿಎಸ್ಪಿ ಯೋಜನೆ ಜಾರಿಗೆ ಕೊಟ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಅಭಿವೃದ್ಧಿ ಅನುದಾನದಲ್ಲಿ ಮೀಸಲಿಟ್ಟಿದ್ದು ನಾವು. ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಸಮಿತಿ ಶಿಫಾರಸಿನ ಅನ್ವಯ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಮತ್ತು ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿದ್ದೇವೆ ಎಂದು ಹೇಳುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
"ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಶೇ. 24.1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಗುತ್ತಿಗೆ ಆಧಾರದ ನೇಮಕಾತಿಗೂ ಮೀಸಲಾತಿ ಅನ್ವಯಿಸಲು ನಿರ್ಧರಿಸಲಾಗಿದೆ. ಎಸ್ಸಿ/ಎಸ್ಟಿ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿದ ಜಮೀನುಗಳ ಅನಧಿಕೃತ ಪರಭಾರೆಯನ್ನು ತಡೆಯಲು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ" ಎಂದರು.
"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಹಂಚಿಕೆಯಾಗುವ ಕೈಗಾರಿಕಾ ನಿವೇಶನಕ್ಕೆ ಶೇಕಡಾ 75ರಷ್ಟು ಸಹಾಯಧನ ನೀಡಲಾಗುತ್ತಿದೆ. ಇವೆಲ್ಲವೂ ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ. ಕಳೆದ ಹತ್ತು ವರ್ಷದಿಂದ ಕೇಂದ್ರದಲ್ಲಿ ಎಸ್ಸಿ.ಎಸ್ಪಿ / ಟಿ.ಎಸ್.ಪಿ ಕಾಯ್ದೆ ಜಾರಿ ಮಾಡುವಂತೆ ಒತ್ತಾಯ ಮಾಡುತ್ತಲೇ ಇದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಇದನ್ನು ತಿರಸ್ಕರಿಸುತ್ತಲೇ ಇದ್ದಾರೆ" ಎಂದು ಹೇಳಿದರು.
"ದಲಿತ ಸಮುದಾಯದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿ ನಾಯಕರ ದಲಿತ ಕಾಳಜಿ ಇದು. ಹೀಗಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮ್ಮ ಸರ್ಕಾರವನ್ನು ಪ್ರಶ್ನಿಸುವುದು ನಾಚಿಕೆಗೇಡು" ಎಂದು ವಾಗ್ದಾಳಿ ನಡೆಸಿದರು.