ಇದೆಲ್ಲದರ ನಡುವೆಯೂ ರಾಜ್ಯದ ಆರ್ಥಿಕತೆ ಸಧೃಡ: ಸಿಎಂ ಸ್ಪಷ್ಟನೆ

ವಿಜಯವಾಣಿ - 2025-02-21T213928.469
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗುಡುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

"ನಮ್ಮ 2 ವರ್ಷಗಳ ಬಜೆಟ್ ಗಾತ್ರದ ಸರಾಸರಿ ಬೆಳವಣಿಗೆ ಶೇ.18.3 ರಷ್ಟಿದೆ. ಬಿಜೆಪಿಯ 4 ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ ಶೇ.5 ರಷ್ಟಿತ್ತು. ರಾಜ್ಯದ ಸ್ವಂತ ತೆರಿಗೆಯ ಬೆಳವಣಿಗೆ ಶೇ.15 ರಷ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 11ರಷ್ಟು ಮಾತ್ರ ಇತ್ತು. ನಾವು ಗ್ಯಾರಂಟಿ ಯೋಜನೆಗಳು ಸೇರಿದಂತೆ ವರ್ಷಕ್ಕೆ 90 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಜನರಿಗೆ ನೇರವಾಗಿ ಡಿಬಿಟಿ ಮೂಲಕ ಹಾಗೂ ಸಬ್ಸಿಡಿ ಪ್ರೋತ್ಸಾಹಧನದ ಮೂಲಕ ನೀಡುತ್ತಿದ್ದೇವೆ. ನಮ್ಮ ಸರ್ಕಾರ ವೃದ್ಧರಿಗೆ, ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ವರ್ಷಕ್ಕೆ 10,400 ಕೋಟಿ ರೂ.ಗೂ ಅಧಿಕ ಹಣವನ್ನು ಕೊಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ 450 ಕೋಟಿ ರೂ.ಗಳನ್ನು ಮಾತ್ರ ನೀಡುತ್ತಿದೆ. ಮನಮೋಹನ್ ಸಿಂಗ್ ರವರ ಕಾಲದಲ್ಲಿ ಈ ವೇತನಗಳೆಷ್ಟಿದ್ದವೊ ಈಗಲೂ ಅಷ್ಟೇ ಇವೆ" ಎಂದರು.

"ಬಸವರಾಜ ಬೊಮ್ಮಾಯಿ ಅವರು ಕೇಂದ್ರದಲ್ಲಿದ್ದಾರೆ. ರಾಜ್ಯಕ್ಕೆ ಇವರೆಲ್ಲರಿಂದ ಯಾವ ಅನುಕೂಲವಾಗಿದೆ? ಎಂದು ಸ್ಪಷ್ಟಪಡಿಸಲಿ. ರಾಜ್ಯದ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ. ವಿತ್ತೀಯ ಕೊರತೆ ಶೇ.3ರ ಒಳಗಿದೆ ಮತ್ತು ನಮ್ಮ ಒಟ್ಟು ಹೊಣೆಗಾರಿಕೆ ಜಿಎಸ್‌ಡಿಪಿಯ ಶೇ.25ರ ಒಳಗೆ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವುಗಳೂ ತಾರಾಮಾರಾ ಆಗಿದ್ದವು. ನಮ್ಮ ಬಂಡವಾಳ ವೆಚ್ಚವೂ ಸಹ ನಮ್ಮ ಅಕ್ಕಪಕ್ಕದಲ್ಲಿರುವ ಪ್ರಗತಿಪರವೆನ್ನಿಸಿಕೊಂಡ ರಾಜ್ಯಗಳಿಗಿಂತ ಉತ್ತಮವಾಗಿದೆ" ಎಂದರು.

"ಕರ್ನಾಟಕವು ಈ ವರ್ಷದ ಬಜೆಟ್ ಗಾತ್ರಕ್ಕೆ ಎದುರಾಗಿ ಶೇ.15.01 ರಷ್ಟು ಬಂಡವಾಳ ವೆಚ್ಚ ಮಾಡುತ್ತಿದೆ. 2024-25ರ ಮೂಲ ಆಯವ್ಯಯದ ಅಂದಾಜಿನ ಪ್ರಕಾರ ಮಹಾರಾಷ್ಟ್ರ-12.74 , ತಮಿಳುನಾಡು- 10.58, ತೆಲಂಗಾಣ-11.58 ರಷ್ಟು ಬಂಡವಾಳ ವೆಚ್ಚವಿದೆ. ಬಿಜೆಪಿಯವರು ಎಷ್ಟೇ ಪಿತೂರಿ ಮಾಡಿ ಕರ್ನಾಟಕಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಿದ್ದರೂ ಸಹ ಕರ್ನಾಟಕವು ತಲೆ ಎತ್ತಿ ನಿಲ್ಲುತ್ತಿದೆ. ದೆಹಲಿಯಲ್ಲಿರುವ ಕೇಂದ್ರ ಬಿಜೆಪಿ ಸರ್ಕಾರದ ದ್ರೋಹಗಳನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ" ಎಂದು ಕಿಡಿಕಾರಿದರು.

"ನಮ್ಮ ಆರ್ಥಿಕತೆಯನ್ನು ಉಳಿಸಿ ಬೆಳೆಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಆದ್ದರಿಂದಲೆ ನಾವು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ನೀಡುತ್ತಿದ್ದೇವೆ. ಕೊಬ್ಬರಿ, ತೊಗರಿ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದರೆ ಅವರ ನೆರವಿಗೆ ಧಾವಿಸಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಗೆ ಅನುದಾನಗಳನ್ನು ನೀಡುತ್ತಿದ್ದೇವೆ. ಬೊಮ್ಮಾಯಿಯವರು ಜಲ ಸಂಪನ್ಮೂಲ ಸಚಿವರಾಗಿದ್ದರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊಡಬೇಕಾದ ಅನುದಾನಗಳನ್ನು ಕೊಡಲಿಲ್ಲ. ಆದರೆ ನಮ್ಮ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡಿ ಮುಗಿಸಲು ತೀರ್ಮಾನಿಸಿದೆ" ಎಂದು ಹೇಳಿದರು.

"ನಮ್ಮ ಆರ್ಥಿಕತೆ ಚೆನ್ನಾಗಿದೆ. ನಮ್ಮ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬ ಕಾರಣಕ್ಕೆ ಇತ್ತೀಚೆಗೆ ನಡೆದ ಇನ್‌ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ 10.27 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಒಪ್ಪಂದಗಳಾಗಿವೆ. ಇದನ್ನೆಲ್ಲ ಗಮನಿಸಿಯೆ ರಾಜಕೀಯ ಕಾರಣಗಳಿಂದ ಬಿಜೆಪಿಯವರು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಕುರಿತು ಟೀಕೆಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡುವ ಬೊಮ್ಮಾಯಿ ಮತ್ತು ಬಿಜೆಪಿಯವರು ಕೇಂದ್ರದ ಬಜೆಟನ್ನು ಸರಿಯಾಗಿ ಓದಿದ್ದಾರೆಯೆ?" ಎಂದು ಪ್ರಶ್ನಿಸಿದರು.

"2024-25ರ ಮೂಲ ಬಜೆಟ್ಟಿನ ಅಂದಾಜು 48.21 ಲಕ್ಷ ಕೋಟಿಗಳಷ್ಟಿತ್ತು. ಆದರೆ ಅದನ್ನು ಪರಿಷ್ಕರಿಸಿ 47.16 ಲಕ್ಷ ಕೋಟಿ ರೂ.ಗಳಿಗೆ ಇಳಿಸಿದ್ದು ಯಾಕೆ? ಆಯವ್ಯಯದ ಅಂದಾಜಿಗೂ ಪರಿಷ್ಕೃತ ಅಂದಾಜಿಗೂ 1,04,025 ಕೋಟಿಗಳಷ್ಟು ಕಡಿಮೆಯಾಗಲು ಕಾರಣವೇನು? ಬಂಡವಾಳ ವೆಚ್ಚವನ್ನು 92,682 ಕೋಟಿ ಕಡಿಮೆ ಮಾಡಲಾಗಿದೆ. ಅದೂ ಹೋಗಲಿ 2024-25ರ ಮೂಲ ಅಂದಾಜಿಗೆ ಹೋಲಿಸಿದರೆ 2025-26ರ ಬಜೆಟ್ಟಿನ ಗಾತ್ರದಲ್ಲಿ ಶೇ. 5.07 ರಷ್ಟು ಮಾತ್ರ ಹೆಚ್ಚಳವಾಗಿದೆ. ಪರಿಷ್ಕೃತ ಆಯವ್ಯಯಕ್ಕೆ ಹೋಲಿಸಿದರೂ ಶೇ.7.4ರಷ್ಟು ಮಾತ್ರ ಬೆಳವಣಿಗೆ ಇದೆ. ಹಣದುಬ್ಬರವನ್ನು ಕಳೆದು ಲೆಕ್ಕ ಹಾಕಿದರೆ ಈ ವರ್ಷದ ಬಜೆಟ್ ನಕಾರಾತ್ಮಕ ಬೆಳವಣಿಗೆಯನ್ನು ತೋರಿಸುತ್ತಿದೆ ಯಾಕೆ? ದೊಡ್ಡ ಆರ್ಥಿಕ ತಜ್ಞರುಗಳಂತೆ ಮಾತನಾಡುವ ಬಿಜೆಪಿಯವರು ಈ ಸತ್ಯವನ್ನು ಯಾಕೆ ಮುಚ್ಚಿಡುತ್ತಿದ್ದಾರೆ?" ಎಂದರು.

"ಸಾಲದ ಬಗ್ಗೆ ಮಾತನಾಡುವ ಬಿವೈ. ವಿಜಯೇಂದ್ರ ಅವರು ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಸಾಲ ಎಷ್ಟಾಗಿದೆ? ರಾಜ್ಯಗಳ ಸಾಲ ಎಷ್ಟಾಗಿದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು. 2013-14ರಲ್ಲಿ 53.11 ಲಕ್ಷ ಕೋಟಿ ರೂ.ಗಳಷ್ಟಿದ್ದ ಕೇಂದ್ರದ ಸಾಲ ನಿರ್ಮಲಾ ಸೀತಾರಾಮನ್​ ಅವರೇ ಈ ಬಜೆಟ್​ನಲ್ಲಿ ಘೋಷಿಸಿರುವಂತೆ 2026ರ ಮಾರ್ಚ್ ವೇಳೆಗೆ 200.16 ಲಕ್ಷ ಕೋಟಿಗಳಷ್ಟಾಗುತ್ತಿದೆ. ಅದನ್ನೂ ಮೀರಬಹುದು. 11 ವರ್ಷಗಳಲ್ಲಿ 147 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಇಷ್ಟು ಬೃಹತ್ ಮೊತ್ತದ ಸಾಲ ಯಾಕಾಯಿತು?" ಎಂದು ಕೇಳಿದ್ದಾರೆ.

"ನರೇಂದ್ರ ಮೋದಿಯವರ ಆರ್ಥಿಕ ನೀತಿಗಳಿಂದ ರಾಜ್ಯಗಳ ಆರ್ಥಿಕ ಸ್ಥಿತಿಯೂ ಅಯೋಮಯವಾಗಿದೆ. 2014ರ ಮಾರ್ಚ್ ಅಂತ್ಯಕ್ಕೆ ದೇಶದ ಎಲ್ಲ ರಾಜ್ಯಗಳ ಸಾಲ 25 ಲಕ್ಷ ಕೋಟಿ ರೂ. ಇದ್ದದ್ದು, ಈಗ 95 ಲಕ್ಷ ಕೋಟಿ ರೂ.ಗಳಿಗೂ ಮೀರಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯಗಳ ಸಾಲ 70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ರಾಜ್ಯಗಳೂ ತ್ರಾಸ ಪಡುತ್ತಿವೆ. ಕೇಂದ್ರದ ಆರ್ಥಿಕತೆಯೂ ದುರ್ಬಲವಾಗುತ್ತಿದೆ. ಮತ್ತೊಮ್ಮೆ ತಿಳಿಸಬಯಸುವುದೇನೆಂದರೆ ನಮ್ಮ ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿ ನಿಲ್ಲುವಷ್ಟು ಸದೃಢವಾಗಿದೆ" ಎಂದರು.

"ನಾವು ದೆಹಲಿಯ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಮಾಡುತ್ತಿರುವ ದ್ರೋಹದ ವಿರುದ್ಧ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಇಷ್ಟರ ನಡುವೆಯೂ ನಾವು ನುಡಿದಂತೆ ನಡೆಯುತ್ತೇವೆ, ನಮ್ಮ ಜನರ ಜತೆ ನಿಲ್ಲುತ್ತೇವೆ. ರಾಜ್ಯದ ವಿರೋಧ ಪಕ್ಷದವರು ಸುಳ್ಳು ಹೇಳುವುದನ್ನು ನಿಲ್ಲಿಸಿ ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಸರ್ಕಾರವು ನಡೆಸುತ್ತಿರುವ ಹೋರಾಟದಲ್ಲಿ ಜತೆಯಾಗಬೇಕೆಂದು ಮನವಿ ಮಾಡುತ್ತೇನೆ" ಎಂದು ಸರಣಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net