

ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಇತರೆ ವಿರೋಧ ಪಕ್ಷದ ಮುಖಂಡರುಗಳು ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ, ರಾಜ್ಯ ದಿವಾಳಿಯಾಗುತ್ತಿದೆ, ಹಣಕಾಸಿನ ವ್ಯವಸ್ಥೆ ನೆಲ ಕಚ್ಚಿದೆ ಎಂದೆಲ್ಲ ಆರೋಪಿಸಿ ಮಾತನಾಡಿದ್ದಾರೆ. ಆ ಮೂಲಕ ಜನರನ್ನು ಸಶಕ್ತಗೊಳಿಸುತ್ತಿರುವ ನಮ್ಮ ಗ್ಯಾರಂಟಿ ಹಾಗೂ ಇನ್ನಿತರೆ ಯೋಜನೆಗಳನ್ನು ಟೀಕಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಟೀಕೆಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಿಎಂ, "ವಾಸ್ತವವೇನೆಂದರೆ, ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾಗ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಆದರೆ ವಿರೋಧ ಪಕ್ಷದಲ್ಲಿ ಕೂತು ದೊಡ್ಡ ಅರ್ಥಶಾಸ್ತ್ರಜ್ಞರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆಗಳಿಂದಾಗಿ ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೆ ಅಥವಾ ಅರಿತುಕೊಳ್ಳಲಾರದೆ ಬಿಜೆಪಿಯವರು ಮಾತಾಡುತ್ತಿರುವುದು ದುರಂತ" ಎಂದರು.
"ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದಾಗ ಬಜೆಟ್‌ಗಳಲ್ಲಿ ನಿಗದಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಂಡಿದ್ದರು. 31-3-2023ಕ್ಕೆ ಬಂಡವಾಳ ವೆಚ್ಚ ಮಾಡುವ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಸಿಎಂ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಈ ಆರ್ಥಿಕ ದುರಾಡಳಿತ, ಬೇಜವಾಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿಗಳ ನಿರ್ವಹಣೆಯನ್ನು ಕೇವಲ ಒಂದೆರಡು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
"ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ನಮ್ಮ ರಾಜ್ಯದ ಸಂಪನ್ಮೂಲಗಳನ್ನು ಗುಡಿಸಿ ಗುಂಡಾಂತರ ಮಾಡುತ್ತಿದ್ದರೂ ರಾಜ್ಯ ಬಿಜೆಪಿಯವರು ಕೈ ಕಟ್ಟಿ ಬಾಯಿ ಮುಚ್ಚಿ ಕೂತಿದ್ದರು. ಇದು ಜೀವಂತ ಕುರಿಯ ಚರ್ಮ ಸುಲಿಯುತ್ತಿದ್ದರೂ ಕಣ್ಣ ಮುಂದಿನ ಗರಿಕೆ ಹುಲ್ಲಿಗೆ ಬಾಯಿ ಬಿಡುವಂತೆ ಕಾಣುತ್ತಿತ್ತು. ಬಿಜೆಪಿಯವರ ಕಾಲದಲ್ಲಿ ಸಂಗ್ರಹಿಸಿದ ಜಿಎಸ್‌ಟಿ, ಸೆಸ್‌ನಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿದರು. ಇದರಿಂದ ನಮಗೆ ವರ್ಷಕ್ಕೆ 18-20 ಸಾವಿರ ಕೋಟಿ ರೂ.ಗಳಷ್ಟು ಆದಾಯ ಕಡಿಮೆಯಾಯಿತು. ಕೇಂದ್ರದವರು ಜನರಿಂದ ಸೆಸ್ ಸಂಗ್ರಹಿಸುವುದನ್ನು ನಿಲ್ಲಿಸಲಿಲ್ಲ" ಎಂದರು.
"ಕೇಂದ್ರ ಸರ್ಕಾರ ತೆರಿಗೆ ಪಾಲಿನಲ್ಲೂ ರಾಜ್ಯಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದೆ. 2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ಇತ್ತು. ಆಗ ನಮ್ಮ ರಾಜ್ಯಕ್ಕೆ ತೆರಿಗೆ ಪಾಲು 35,895 ಕೋಟಿ ರೂ. ಸಿಗುತ್ತಿತ್ತು. ಆದ್ರೆ, ಈಗ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸುಮಾರು 51 ಸಾವಿರ ಕೋಟಿ ರೂ. ಮಾತ್ರ ತೆರಿಗೆ ಪಾಲು ಸಿಗಬಹುದು. 2018ಕ್ಕೆ ಹೋಲಿಸಿದರೂ ಸಹ ನಮಗೆ ಕನಿಷ್ಠ ಅಂದರೂ 73 ಸಾವಿರ ಕೋಟಿ ರೂ.ನಷ್ಟು ಪಾಲು ಸಿಗಬೇಕಿತ್ತು. ಇಷ್ಟಾದರೂ ಇದೊಂದು ಬಾಬತ್ತಿನಲ್ಲೆ ನಮಗೆ ವರ್ಷಕ್ಕೆ 22 ಸಾವಿರ ರೂ.ಗಳಷ್ಟು ನಷ್ಟವಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ಕರ್ನಾಟಕದಿಂದ ವರ್ಷಕ್ಕೆ 4.5 ಲಕ್ಷ ಕೋಟಿ ರು.ಗೂ ಹೆಚ್ಚಿನ ತೆರಿಗೆಯನ್ನು ಕೇಂದ್ರವು ಸಂಗ್ರಹಿಸುತ್ತಿದೆ. ಇದರಲ್ಲಿ ಬಿಡಿಗಾಸನ್ನು ಮಾತ್ರ ರಾಜ್ಯಕ್ಕೆ ಕೊಡುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ಎಂದಾದರೂ ಬಾಯಿ ಬಿಟ್ಟಿದ್ದಾರಾ? 2017ರಿಂದ ಈ ವರೆಗೆ ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನದಿಂದ, 15ನೇ ಹಣಕಾಸು ಆಯೋಗದ ವರದಿಯಿಂದ, ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ಪಾಲು ಕೊಡದ ಕಾರಣ, 15ನೇ ಹಣಕಾಸು ಆಯೋಗ ಹೇಳಿದರೂ ಕೇಂದ್ರವು ಕೊಡದೆ ಉಳಿಸಿಕೊಂಡ 11,495 ಕೋಟಿ ರೂ.ಗಳಿಂದ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಿ ಕೊಡದ ಕಾರಣದಿಂದ, ಒಟ್ಟಾರೆ ಕೇಂದ್ರದ ನೀತಿಗಳಿಂದ 2.1 ಲಕ್ಷ ಕೋಟಿ.ರೂಗಳಿಗೂ ಹೆಚ್ಚಿನ ಮೊತ್ತ ರಾಜ್ಯಕ್ಕೆ ನಷ್ಟವಾಗಿದೆ. ಈ ಕುರಿತು ಬಿಜೆಪಿಯವರು ಒಂದು ದಿನವೂ ಮಾತಾಡಲಿಲ್ಲ" ಎಂದು ಟ್ವೀಟ್ನಲ್ಲಿ ಕಿಡಿಕಾರಿದ್ದಾರೆ.