ಇದು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿಅಂಶಗಳ ಮೇಲೆ ಮಾಡಿರುವುದಲ್ಲ: ಬಿಜೆಪಿಗೆ ಸಿಎಂ ಟಾಂಗ್

ವಿಜಯವಾಣಿ - 2024-07-04T203521.089
Published on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ತವರೂರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ​ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬೆನ್ನಲ್ಲೇ ಮುಡಾ ನಿವೇಶನ ಹಂಚಿಕೆ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಇದೆಲ್ಲಾ ರಾಜಕೀಯ ಪ್ರೇರಿತ ಆರೋಪಗಳು ಎಂದಿದ್ದಾರೆ.

"ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ. ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ. ನಿವೇಶನ ಹಂಚಿಕೆಯಾಗಿದ್ದು ಬಿಜೆಪಿ ಕಾಲದಲ್ಲಿ, ಈಗ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿರುವವರು ಬಿಜೆಪಿಯವರೇ. ಹಾಗಾದರೆ ಇವರ ಆರೋಪ ಯಾರ ವಿರುದ್ಧ?" ಎಂದು ಪ್ರಶ್ನಿಸಿದ್ದಾರೆ.

"ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಮ್ಮ 3.16 ಎಕರೆ ಜಮೀನನ್ನು ಅಕ್ರಮ ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ? ಜಮೀನಿನ ಬದಲು ನಿವೇಶನ ಕೊಡಲು ಕಷ್ಟವಿದ್ದರೆ ಜಮೀನಿನ ಮೌಲ್ಯ 60 ಕೋಟಿ.ರೂ.ಗಳನ್ನು ಕೊಟ್ಟುಬಿಡಲಿ. ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ, ಮುಡಾದ ಸಭೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿರಲಿಲ್ಲ" ಎಂದು ಹೇಳಿದರು.

"2021ರಲ್ಲಿ ನಿವೇಶನ ನೀಡಿದಾಗ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3ನೇ ಅಥವಾ 4ನೇ ಹಂತದಲ್ಲೇ ನಿವೇಶನ ಕೊಡಿ ಎಂದು ನಾವೇನು ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಅವರೇ ನಿಯಮ ಮಾಡಿದ್ದು, ಅದಕ್ಕೆ ನಾವು ಸರಿ ಅದನ್ನೇ ಕೊಡಿಯಪ್ಪ ಎಂದು ಹೇಳಿದ್ದೇವೆ. ಇದರಲ್ಲಿ ನಮ್ಮ ತಪ್ಪೇನಿದೆ?" ಎಂದರು.

"ನಮಗೆ ಇಂಥಾ ಕಡೆಯೇ ಬದಲಿ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. ಅಕ್ಟೋಬರ್ 2023ರಲ್ಲಿ ಸಚಿವರು 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರೂ.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾಗುತ್ತದೆ. ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನನಗೆ 62 ಕೋಟಿ ರೂ. ಕೊಡಲಿ" ಎಂದು ಸಿಎಂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net