ಈಗಲಾದರೂ ನಿಮಗೆಲ್ಲಾ ಅರ್ಥವಾಯ್ತಾ? ಮಿ. 360 ಮಾತಿಗೆ ಕ್ರಿಕೆಟ್ ಫ್ಯಾನ್ಸ್ ಗಪ್​ ಚುಪ್​!

ವಿಜಯವಾಣಿ-2024-07-04T161922.367
Published on

ನವದೆಹಲಿ: ಪ್ರಸಕ್ತ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್​ನಲ್ಲಿ ಗೆದ್ದು, ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟ ಟೀಮ್ ಇಂಡಿಯಾಗೆ ಇದೀಗ ದೇಶದ ಜನತೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿವೆ.

ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಆಲ್​ರೌಂಡ್ ಪ್ರದರ್ಶನ ನೀಡಿದ ಉಪನಾಯಕ ಹಾರ್ದಿಕ್ ಪಾಂಡ್ಯಗೆ ಹೆಡ್​ ಕೋಚ್ ರಾಹುಲ್ ದ್ರಾವಿಡ್​ ಸೇರಿದಂತೆ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕವಾಗಿ ಬಾರ್ಬಡೋಸ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದ ಕಡೆಯ ಓವರ್​ನಲ್ಲಿ ಕಮಾಲ್ ಮಾಡಿದ ಹಾರ್ದಿಕ್​, ತಂಡ ಗೆಲ್ಲುತ್ತಿದ್ದಂತೆ ನೆಲದ ಮೇಲೆ ಕುಸಿದು, ಕಣ್ಣೀರಿಟ್ಟರು.

ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಆಲ್​ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯಗೆ ಇಂದು ಚಪ್ಪಾಳೆ, ಅಭಿನಂದನೆಗಳು ಹರಿದುಬರುತ್ತಿವೆ. ಆದರೆ, ಐಪಿಎಲ್​ನ 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡಿದ್ದ ಪಾಂಡ್ಯ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ವ್ಯಾಪಕವಾಗಿ ಟ್ರೋಲ್ ಮಾಡಿ, ಟೀಕಿಸಿದ್ದರು. ರೋಹಿತ್​ರಿಂದ ಕ್ಯಾಪ್ಟನ್ಸಿ ಕಸಿದ ಹಾರ್ದಿಕ್​ಗೆ ಛೀಮಾರಿ ಹಾಕಿದ್ದ ನೆಟ್ಟಿಗರು, ನಿಮ್ಮ ಕಳಪೆ ನಾಯಕತ್ವದಿಂದ ತಂಡ 10ನೇ ಸ್ಥಾನಕ್ಕೆ ಬಂದು ನಿಲ್ಲುವಂತೆ ಆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದರು.

ಈ ವಿಷಯವನ್ನು ಮುನ್ನೆಲೆಗೆ ತಂದ ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ, ಮಿಸ್ಟರ್​ 360 ಎಬಿ ಡಿವಿಲಿಯರ್ಸ್​, ಜಾಗತಿಕ ಮಟ್ಟದ ಟೂರ್ನಮೆಂಟ್‌ನಲ್ಲಿ ತನ್ನನ್ನು ತಾನು ಸಾಬೀತುಪಡಿಸಿದ ಆಲ್‌ರೌಂಡರ್‌ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕಳೆದ ಕೆಲವು ತಿಂಗಳುಗಳಲ್ಲಿ ಪಾಂಡ್ಯ ವಿರುದ್ಧ ಕಿಡಿಕಾರಿದ್ದ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದರು.

"ಕಳೆದ ಐಪಿಎಲ್​ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಆಗಿದ್ದ ಹಾರ್ದಿಕ್​ ಬಹಳ ಕಷ್ಟಕರ ದಿನಗಳನ್ನು ಅನುಭವಿಸಿದ್ದಾರೆ. ಯಾವುದೇ ತಪ್ಪಿಲ್ಲದೇ ಇದ್ದರೂ ತನ್ನನ್ನು ತೀವ್ರವಾಗಿ ಗುರಿಯಾಗಿಸಿಕೊಂಡ ಎಂಐ ಅಭಿಮಾನಿಗಳಿಗೆ ಇಂದು ಹಾರ್ದಿಕ್ ತಕ್ಕ ಉತ್ತರ ನೀಡಿದ್ದಾರೆ. ಒಬ್ಬ ಕ್ರಿಕೆಟರ್​ ಆಗಿ ತನ್ನ ಆಟವನ್ನು ಅವರು ತೋರಿದ್ದಾರೆ. ಅಂದು ಅವರನ್ನು ಹಿಗ್ಗಾಮುಗ್ಗಾ ಟೀಕಿಸಿ, ಟ್ರೋಲ್ ಮಾಡಿದ್ದವರಿಗೆ ಈಗ ಹಾರ್ದಿಕ್​ ಬಗ್ಗೆ ಗೊತ್ತಾಗಿದೆ. ಅವರು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡಿಸಿದ್ದಾರೆ" ಎಂದು ಎಬಿಡಿ ಟೀಮ್ ಇಂಡಿಯಾ ಉಪನಾಯಕನನ್ನು ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net