ಸಿಎಂ ಆಯ್ಕೆಗೆ ಮತ್ತಷ್ಟು ಟ್ರಬಲ್​, ಹೈಕಮಾಂಡ್ ವಿರುದ್ಧ ಡಿಕೆಶಿ ರೆಬೆಲ್?; ಇಲ್ಲಿದೆ ಲೇಟೆಸ್ಟ್ ಡಿಟೇಲ್ಸ್​..

D. K. Shivakumar
Published on

ಬೆಂಗಳೂರು: ಚುನಾವಣೆ ಫಲಿತಾಂಶದಲ್ಲಿ ಬಹುಮತ ಒಲಿದಿದ್ದರೂ ಸಿಎಂ ಆಯ್ಕೆಯಲ್ಲಿ ಒಮ್ಮತ ದಕ್ಕಿಸಿಕೊಳ್ಳಲು ಆಗದಿರುವ ಕಾಂಗ್ರೆಸ್​ ಹೈಕಮಾಂಡ್​ ವಿರುದ್ಧ ಈಗ ಡಿ.ಕೆ.ಶಿವಕುಮಾರ್ ರೆಬೆಲ್ ಆಗಿದ್ದಾರೆ. ಪರಿಣಾಮವಾಗಿ ಸಿಎಂ ಆಯ್ಕೆಗೆ ಮತ್ತಷ್ಟು ಟ್ರಬಲ್ ಎದುರಾಗಿದೆ.

ಮುಖ್ಯಮಂತ್ರಿ ಆಯ್ಕೆ ಅಂತಿಮಗೊಳಿಸುವ ವಿಚಾರ ಈಗಾಗಲೇ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅದಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿನ ಖಾಸಗಿ ಹೋಟೆಲೊಂದರಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ತಂಗಿರುವ ಸಿದ್ದರಾಮಯ್ಯ, ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ.

ಇತ್ತ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿರುವ ಡಿ.ಕೆ.ಶಿವಕುಮಾರ್​ ಕೂಡ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಪೊಲೀಸರು ಕೂಡ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಕೊನೆಯ ಕ್ಷಣದಲ್ಲಿ ದೆಹಲಿಗೆ ತೆರಳುವುದನ್ನು ಡಿಕೆಶಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.

ತಾವು ಕೊಟ್ಟ ಮಾತಿನಂತೆ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ಅಧಿಕಾರಕ್ಕೆ ತಂದಿದ್ದರೂ ಹೈಕಮಾಂಡ್ ತಮ್ಮ ಬಗ್ಗೆ ಮೀನಾಮೇಷ ಎಣಿಸುತ್ತಿದೆ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಈಗ ಹೈಕಮಾಂಡ್ ವಿರುದ್ಧವೇ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದ್ದರೂ ಡಿಕೆಶಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ನನಗೆ ಹೊಟ್ಟೆನೋವು ಇದೆ, ಗ್ಯಾಸ್ಟ್ರಿಕ್ ಸಮಸ್ಯೆ ಇದೆ, ಹೀಗಾಗಿ ನನಗೆ ವಿಶ್ರಾಂತಿ ಬೇಕಿದೆ ಎಂಬ ನೆಪ ಹೇಳಿ ದೆಹಲಿಗೆ ತೆರಳುವುದರಿಂದ ಡಿ.ಕೆ. ಶಿವಕುಮಾರ್​ ತಪ್ಪಿಸಿಕೊಂಡು ಬೆಂಗಳೂರಿನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗೆ ಇಲ್ಲಿದ್ದುಕೊಂಡೇ ಮುಂದಿನ ತಂತ್ರ ಹೆಣೆಯಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net