ಮುಖ್ಯಮಂತ್ರಿ ಜತೆ ಇರುವ ಈ ಮಹಿಳೆ ಯಾರು?; ನೆನಪಾಯ್ತಾ?

Sangavva
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಕಾಣಿಸಿಕೊಂಡಿರುವ ಈ ಮಹಿಳೆ ಯಾರು ಎಂಬುದು ಕೆಲವರಿಗೆ ಈಗಾಗಲೇ ಗೊತ್ತಾಗಿರಬಹುದು. ಇನ್ನು ಕೆಲವರಿಗೆ ಯಾರು ಎಂಬುದು ತಕ್ಷಣಕ್ಕೆ ನೆನಪಾಗಿರಲಿಕ್ಕಿಲ್ಲ.

ಆದರೆ ಕಾಂಗ್ರೆಸ್​​ನ ಐದು ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯನ್ನು ಸ್ಮರಿಸಿಕೊಂಡರೆ ಈಕೆ ಯಾರು ಎಂಬುದು ನೆನಪಾಗಿಬಿಡುತ್ತದೆ. ನಿಜ.. ಇದು ಅವರೇ.. ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ. ಶಕ್ತಿ ಯೋಜನೆ ಜಾರಿಗೆ ಬಂದ ದಿನ ಬಸ್​ನ ಫುಟ್​ಬೋರ್ಡ್​ ಭಕ್ತಿಯಿಂದ ನಮಸ್ಕರಿಸಿ ಬಸ್​​ ಏರಿದ್ದ ಈಕೆ ಅಂದು ರಾಜ್ಯದ ಗಮನ ಸೆಳೆದಿದ್ದರು.

ಆ ಸಂಗವ್ವಗೆ ಇಂದು ಮುಖ್ಯಮಂತ್ರಿಯವರೊಂದಿಗೇ ಕೆಲ ಕ್ಷಣಗಳನ್ನು ಕಳೆಯುವ ಅವಕಾಶ ಸಿಕ್ಕಿದೆ. ಇಂದು ಖಾಸಗಿ ವಾಹಿನಿಯೊಂದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಭಾಗಿಯಾಗಿದ್ದು, ಅಲ್ಲೇ ಈಕೆಯನ್ನು ಭೇಟಿ ಮಾಡಿದ ಅವರು ಆ ಕುರಿತು ಅಪಾರ ಸಂತೋಷ ಹಂಚಿಕೊಂಡಿದ್ದಾರೆ.

ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು ಎಂದು ಸಿಎಂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net