ತಬ್ಲಿಘಿ ಮರ್ಕಜ್​ಗೆ ಭೇಟಿ ನೀಡಿದವರ ಮಾಹಿತಿ ಹಂಚಲು ಮುಸ್ಲಿಂ ಮುಖಂಡರಿಗೆ ಮನವಿ ಮಾಡಿದ ಸಿಎಂ ಬಿಎಸ್​ವೈ

BSY
Published on

ಬೆಂಗಳೂರು: ಕರೊನಾ ಸೋಂಕು ಹರಡುವುದಕ್ಕೆ ಪ್ರಮುಖ ಕಾರಣವಾಗಿರುವ ನಿಜಾಮುದ್ದೀನ್ ತಬ್ಲಿಘಿ ಮರ್ಕಜ್​ನ ಸಮ್ಮೇಳನಕ್ಕೆ ಭೇಟಿ ನೀಡಿದ ರಾಜ್ಯದ ಮುಸ್ಲಿಮರ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಮುಸ್ಲಿಂ ಮುಖಂಡರು, ನೇತಾರರನ್ನು ಕೋರಿದ್ದಾರೆ.

ಈ ಸಭೆಯ ನಂತರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಇಂದು ಮುಸ್ಲಿಂ ಮುಖಂಡರು ಹಾಗೂ ಶಾಸಕರಾದ ಸಿ.ಎಂ. ಇಬ್ರಾಹಿಂ, ಎನ್.ಎ. ಹ್ಯಾರಿಸ್, ಜಮೀರ್ ಅಹಮದ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್, ಅಖಂಡ ಶ್ರೀನಿವಾಸಮೂರ್ತಿ, ಸಲೀಮ್ ಅಹಮದ್ ಅವರ ಜತೆಗೆ ಸಭೆ ನಡೆಸಿ, ಕರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ ಸಹಕಾರ ಕುರಿತಂತೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನಿಜಾಮುದ್ದೀನ್ ತಬ್ಲಿಘಿ ಮರ್ಕಜ್ ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್‍ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಕರೋನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‍ಡೌನ್ ಅವಧಿ ಮುಗಿಯುವ ವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ಎಲ್ಲ ಜನರಲ್ಲಿ ನನ್ನ ವಿನಂತಿ ಏನೆಂದರೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕರೋನಾ ವಿರುದ್ಧದ ಸಮರ ಜಯಿಸೋಣ ಎಂದು ಮನವಿ ಮಾಡುತ್ತಿರುವುದಾಗಿ ಸಿಎಂ ಬಿಎಸ್​ವೈ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net