

ಕೋಲ್ಕತ್ತಾ: ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ನಾಯಕರು ಜನವರಿ 22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಗಮಿಸುತ್ತಿಲ್ಲ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯಿಸಿದ್ದು, ಬಿಜೆಪಿಗೆ ಟಕ್ಕರ್ ಕೊಟ್ಟಿದ್ದಾರೆ.
"ನಾವು ಹಲವಾರು ದೇವಾಸ್ಥಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಅದರ ಉನ್ನತಿಗಾಗಿ ಹಲವಾರು ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದೇವೆ. ದಕ್ಷಿಣೇಶ್ವರ ದೇಗುಲದಲ್ಲಿ ಸ್ಕೈವಾಕ್ ನಿರ್ಮಿಸಿದ್ದೇವೆ ಮತ್ತು ಕಾಳಿಘಾಟ್ ದೇವಸ್ಥಾನದಲ್ಲಿ ಮತ್ತೊಂದು ಮಾಡುತ್ತಿದ್ದೇವೆ. ಪುರಿ ರೀತಿಯೇ ದಿಘಾದಲ್ಲಿ ಭಗವಾನ್ ಜಗನ್ನಾಥ ದೇವಾಲಯವನ್ನು ಸಹ ನಿರ್ಮಿಸುತ್ತಿದ್ದೇವೆ. ನೀವು ದಿಘಾಗೆ ಆಗಮಿಸಿದಾಗ ಜಗನ್ನಾಥನ ದೇಗುಲಕ್ಕೆ ಭೇಟಿ ನೀಡಬಹುದು. ಶೀಘ್ರದಲ್ಲೇ ಅದರ ಉದ್ಘಾಟನೆಯಾಗಲಿದೆ" ಎಂದು ಮಮತಾ ಹೇಳಿದರು.
ಗಂಗಾಸಾಗರ ಮೇಳಕ್ಕೆ ಯಾತ್ರಾರ್ಥಿಗಳನ್ನು ಸ್ವಾಗತಿಸಲು ರಾಜ್ಯ ಸಜ್ಜಾಗಿದೆ ಎಂದ ಸಿಎಂ, "ಚುನಾವಣೆ ಮುಂದಿಟ್ಟುಕೊಂಡು ಧರ್ಮ ರಾಜಕಾರಣ ಮಾಡುವವರು ಕೆಲವರಿದ್ದಾರೆ. ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಏಕೈಕ ಪಕ್ಷ ಟಿಎಂಸಿ. ಐಎನ್‌ಡಿಐಎ ಮೈತ್ರಿಕೂಟ ದೇಶಕ್ಕೆ ದಾರಿ ತೋರಿಸಲಿದೆ. 34 ವರ್ಷಗಳ ಎಡರಂಗದ ಆಡಳಿತದಲ್ಲಿ ಬಂಗಾಳದಲ್ಲಿ ಏನನ್ನೂ ಮಾಡಲಿಲ್ಲ. ಟಿಎಂಸಿ ಜನರ ಹಿತಕ್ಕಾಗಿ ಕೆಲಸ ಮಾಡಿದೆ" ಎಂದು ಮಮತಾ ಒತ್ತಿ ಹೇಳಿದರು.
ಇದನ್ನೂ ಓದಿ: ವಿಶ್ವಪ್ರಜ್ಞೆಯ ದರ್ಶನ ಮಾಡಿಸಿದ ದ್ರಷ್ಟಾರ
ಇನ್ನು ಸಿಎಎ ಬಗ್ಗೆ ಮಾತನಾಡಿದ ಪ. ಬಂಗಾಳ ಸಿಎಂ, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ನಾಗರಿಕರೇ ಎಂಬುದನ್ನು ಮತ್ತೊಮ್ಮೆ ಹೇಳಿದ್ದಾರೆ. “ನೀವು ನಾಗರಿಕರಲ್ಲದಿದ್ದರೆ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಹೇಗೆ ಪಡೆಯುವುದು, ಉಚಿತ ಪಡಿತರವನ್ನು ಹೇಗೆ ಪಡೆಯುತ್ತೀರಿ? ಈ ಹಿಂದೆ ಜಿಲ್ಲಾಧಿಕಾರಿಗಳು ಪೌರತ್ವ ಕಾರ್ಡ್ ನೀಡುತ್ತಿದ್ದರು. ಆದ್ರೆ, ಈಗ ರಾಜಕೀಯದಿಂದಾಗಿ ಆ ಹಕ್ಕನ್ನು ಕಸಿದುಕೊಳ್ಳಲಾಗಿದೆ" ಎಂದರು,(ಏಜೆನ್ಸೀಸ್).