BBKS10: ಮನೆಯೊಳಗೆ ಹಾರಿಬಂತು ಡ್ರೋನ್​! ಮೂರು ವರ್ಷಗಳ ಬಳಿಕ ಪೋಷಕರ ಮಡಿಲು ಸೇರಿದ ಪ್ರತಾಪ್

ವಿಜಯವಾಣಿ - 2023-12-29T080738.060
Published on

ಬೆಂಗಳೂರು: ಬಿಗ್ ಬಾಸ್​ ಮನೆಯಲ್ಲಿ ಇಷ್ಟು ದಿನಗಳವರೆಗೂ ಟಾಸ್ಕ್​ ಹಾಗೂ ಇತರೆ ವಿಚಾರಗಳಿಗೆ ಪರಸ್ಪರ ಏರುಧ್ವನಿಯಲ್ಲಿ ಕಿತ್ತಾಡಿಕೊಂಡು, ಕಣ್ಣೀರಿಡುತ್ತಿದ್ದ ಮನೆಮಂದಿ ಇದೀಗ ಈ ವಾರ ತಮ್ಮ ಕುಟುಂಬದವರ ಆಗಮನ ತಿಳಿದು ಮೌನಕ್ಕೆ ಶರಣಾಗಿದ್ದಾರೆ. ಹೆಚ್ಚು ಮಾತನಾಡದೆ ಪಾಜ್​ ಆಗಿ, ತಮ್ಮವರನ್ನು ಕಂಡ ಕೂಡಲೇ ಪ್ರೀತಿಯಿಂದ ಕಂಬನಿ ಮಿಡಿಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದಲೂ ಸದಸ್ಯರ ಕುಟುಂಬದವರು ಒಬ್ಬೊಬ್ಬರೆ ಮನೆಯೊಳಗೆ ಪ್ರವೇಶಿಸುತ್ತಿದ್ದು, ಈ ಪೈಕಿ ಕಡೆಯದಾಗಿ ಆಗಮಿಸಿದ್ದು, ಪ್ರತಾಪ್​ ಅವರ ತಂದೆ-ತಾಯಿ.

ಮನೆಯ ಸದಸ್ಯರೆಲ್ಲರೂ ಪ್ರತಾಪ್ ಅವರ ಪೋಷಕರ ಆಗಮನಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದದ್ದು, ವೀಕ್ಷಕರನ್ನು ಒಂದು ಕ್ಷಣ ಭಾವುಕರನ್ನಾಗಿ ಮಾಡಿತು. ಇತರೆ ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದು, ತಮ್ಮ ಭಾವನೆ ವ್ಯಕ್ತಪಡಿಸಿ ಹೋಗುವಾಗ ತನ್ನ ಮನೆಯವರು ಯಾವಾಗ ಬರುತ್ತಾರೆ ಎಂದು ತಳಮಳದಿಂದ ಮುಖ್ಯದ್ವಾರದತ್ತ ನೋಡುತ್ತಿದ್ದ ಪ್ರತಾಪ್​ಗೆ ಕಡೆಯದಾಗಿ ಪೋಷಕರ ಧ್ವನಿ ಕೇಳಿಸಿತು.

ಬೆಳಗ್ಗಿನಿಂದಲೂ ತಿಂಡಿ, ಊಟ ಮಾಡದೆ ಪೋಷಕರ ಆಗಮನಕ್ಕಾಗಿ ಕಾದು ಕುಳಿತ್ತಿದ್ದ ಪ್ರತಾಪ್​, ಟಿವಿ ಪರದೆಯ ಮೇಲೆ ತಮ್ಮ ತಂದೆ-ತಾಯಿ ಮುಖ ನೋಡಿ ಅವ್ವ-ಅಪ್ಪ ಎಲ್ಲಿದ್ದೀರಿ, ಬನ್ನಿ ಎಂದು ಹಂಬಲಿಸಿದರು. ಕೆಲವು ಸಮಯ ಮನೆಯ ಮುಂಭಾಗದ ಗಾಜಿನ ಡೋರ್​ ಬಳಿ ಕಣ್ಣೀರಿಟ್ಟ ಪ್ರತಾಪ್, ಮನೆಯ ಮುಖ್ಯದ್ವಾರದಿಂದ ಬಂದ ಪೋಷಕರನ್ನು ನೋಡಿ ಕಣ್ಣೀರಿಡುತ್ತ ನಿಂತರು.

ಮೂರು ವರ್ಷಗಳ ಬಳಿಕ ತಂದೆ-ತಾಯಿಯನ್ನು ನೋಡಿದ ಪ್ರತಾಪ್, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ಕೆಲ ಸಮಯ ಅವರೊಂದಿಗೆ ಮಾತನಾಡುವ ಮೂಲಕ ಸಮಯ ಕಳೆದರು. ಪೋಷಕರೊಡನೆ ಪ್ರತಾಪ್​ ಸಮಾಗಮ ಕಂಡು ಸಂತಸಪಟ್ಟ ಮನೆಮಂದಿ, ಪ್ರತಾಪ್​ಗೆ ಧೈರ್ಯ ತುಂಬಿ, ಪ್ರೋತ್ಸಾಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net