More

    ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಗರಿಗೆದರಿದ ವ್ಯವಹಾರ; ಜ.1ರಿಂದಲೇ ಪ್ರಚಾರಾಂದೋಲನ

    ನವದೆಹಲಿ: ಅಯೋಧ್ಯೆಯಲ್ಲಿ ನಿರ್ವಣಗೊಳ್ಳುತ್ತಿರುವ ಭವ್ಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವ್ಯವಹಾರ ಗರಿಗೆದರಿದ್ದು, ಬರೋಬ್ಬರಿ 50 ಸಾವಿರ ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ.

    ಜ. 22ರ ಸಮಾರಂಭದ ಹಿನ್ನೆಲೆಯಲ್ಲಿ ದೇಶದಲ್ಲಿ 50 ಸಾವಿರ ಕೋಟಿ ರೂ. ಹೆಚ್ಚುವರಿ ವ್ಯವಹಾರ ನಿರೀಕ್ಷಿಸಲಾಗಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ತಿಳಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಕರೆ ಮೇರೆಗೆ ಶ್ರೀರಾಮಮಂದಿರ ಉದ್ಘಾಟನೆ ಕುರಿತು ಜ. 1ರಿಂದ ದೇಶಾದ್ಯಂತ ಪ್ರಚಾರಾಂದೋಲನ ನಡೆಯಲಿದ್ದು, ಜನರಲ್ಲಿನ ಉತ್ಸಾಹ ನೋಡಿದರೆ ಎಲ್ಲ ರಾಜ್ಯಗಳಲ್ಲೂ ದೊಡ್ಡ ಉದ್ಯಮಾವಕಾಶಗಳು ಗೋಚರಿಸುತ್ತಿದೆ. ಪರಿಣಾಮವಾಗಿ, ಜನವರಿ ತಿಂಗಳೊಂದರಲ್ಲೇ ದೇಶದಲ್ಲಿ 50 ಸಾವಿರ ಕೋಟಿ ರೂ. ಹೆಚ್ಚುವರಿ ವ್ಯವಹಾರ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

    ಮದ್ಯ ನಿಷೇಧಿತ ಪ್ರದೇಶ: ನೂತನ ರಾಮ ಮಂದಿರದ ಸುತ್ತಲಿನ 84 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡದಂತೆ ಉತ್ತರಪ್ರದೇಶ ಸರ್ಕಾರ ನಿಷೇಧ ಹೇರಿದೆ, ಈ ಪ್ರದೇಶ ಇನ್ಮುಂದೆ ಮದ್ಯನಿಷೇಧಿತ ಆಗಿರಲಿದೆ. ಈ ನಿಷೇಧ ಹೇರುವಂತೆ ಸಿಎಂ ಯೋಗಿ ಆದಿತ್ಯನಾಥ ನಿರ್ದೇಶನ ನೀಡಿದ್ದರು ಎಂಬುದಾಗಿ ಯುಪಿ ಅಬಕಾರಿ ಸಚಿವ ನಿತಿನ್ ಅಗರ್​ವಾಲ್ ತಿಳಿಸಿದ್ದಾರೆ. ಅಲ್ಲದೆ 84 ಕೋಸಿ ಪರಿಕ್ರಮ ಮಾರ್ಗದಲ್ಲೂ ಈ ನಿಷೇಧ ಇರಲಿದ್ದು, ಅಲ್ಲಿರುವ ಮದ್ಯ ಮಾರಾಟ ಕೇಂದ್ರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ ಎಂದೂ ನಿತಿನ್ ತಿಳಿಸಿದ್ದಾರೆ.

    ರಸ್ತೆ-ಚರಂಡಿ ಸ್ವಚ್ಛಗೊಳಿಸಿದ ಡಿಸಿಎಂ: ಶ್ರೀರಾಮ ಮಂದಿರದಲ್ಲಿನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಆರಂಭಿಸಿರುವ ಸ್ವಚ್ಛತಾ ಅಭಿಯಾನದಲ್ಲಿ ಗುರುವಾರ ಭಾಗಿಯಾದ ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಸ್ವತಃ ರಸ್ತೆ-ಚರಂಡಿ ಸ್ವಚ್ಛಗೊಳಿಸಿದ್ದಾರೆ. ಕೈಗವಸು, ಮಾಸ್ಕ್ ಧರಿಸಿ ರಸ್ತೆಗಿಳಿದ ಅವರು ಚರಂಡಿ ಮತ್ತು ರಸ್ತೆಯಲ್ಲಿ ಕಸ ತೆಗೆದು ಶುಚಿಗೊಳಿಸಿದರು. ಜತೆಗೆ ಇನ್ನು ನಾಲ್ಕು ದಿನ ಅಲ್ಲೇ ತಂಗಲಿರುವ ಅವರು ಸಮಾರಂಭದ ಸಿದ್ಧತೆ ಕುರಿತು ಪರಿಶೀಲನೆ ನಡೆಸಲಿದ್ದಾರೆ.

    ಆರತಿ ಪಾಸ್​ಗೆ ಬುಕಿಂಗ್ ಆರಂಭ: ಮಂದಿರದಲ್ಲಿ ಆರತಿ ಕೈಗೊಳ್ಳಲು ಆಸಕ್ತ ಭಕ್ತರಿಗಾಗಿ ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಆರತಿ ಪಾಸ್ ಬುಕಿಂಗ್ ಗುರುವಾರ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿನಕ್ಕೆ ಮೂರು ಸಲ ಆರತಿ ನಡೆಯಲಿದ್ದು, ಒಮ್ಮೆಗೆ 30 ಜನರಿಗೆ ಆರತಿ ಕೈಗೊಳ್ಳಲು ವ್ಯವಸ್ಥೆ ಇರಲಿದೆ. ಭಕ್ತರ ಸಂಖ್ಯೆ ಪರಿಗಣಿಸಿ ಇದನ್ನು ಹೆಚ್ಚಿಸಲು ಅವಕಾಶ ಇರಿಸಿಕೊಳ್ಳಲಾಗಿದೆ. ಸಾರ್ವಜನಿಕರು ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ ನೀಡಿ ಆರತಿ ಪಾಸ್ ಪಡೆಯಬಹುದು. ಪಾಸ್ ಪಡೆಯುವ ವೇಳೆ ನೀಡಿದ್ದ ಗುರುತಿನ ಚೀಟಿಯ ಮೂಲಪ್ರತಿ ಆರತಿ ಸಂದರ್ಭದಲ್ಲಿ ತೋರಿಸುವುದು ಕಡ್ಡಾಯ. ಹತ್ತಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಆರತಿ ಪಾಸ್ ಬೇಕಾಗಿಲ್ಲ. ಬುಕಿಂಗ್ ಮಾಡಿಕೊಂಡವರ ಮೊಬೈಲ್​ಫೋನ್​ಗೆ ಆರತಿಗೆ 24 ಗಂಟೆಗಳ ಮುನ್ನ ಎಸ್​ಎಂಎಸ್/ಇ-ಮೇಲ್ ಕೂಡ ಕಳುಹಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಎಂ ಯೋಗಿ ಪರಿಶೀಲನೆ: ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣ ನವೀಕರಿಸಲಾಗಿದ್ದು, ನೂತನ ವಿಮಾನನಿಲ್ದಾಣ ಕೂಡ ನಿರ್ವಿುಸಲಾಗಿದೆ. ಅಯೋಧ್ಯೆ ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ್ ಎಂಬ ಹೆಸರಿಡಲಾಗಿದೆ. ಇವೆರಡನ್ನೂ ಪ್ರಧಾನಿ ಮೋದಿ ಡಿ. 30ರಂದು ಉದ್ಘಾಟಿಸಲಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ ಗುರುವಾರ ಅಯೋಧ್ಯೆಗೆ ಭೇಟಿ ನೀಡಿದ್ದು, ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

    ಜ. 22 ರಾಮರಾಜ್ಯ ದಿನ?: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನ(ಜ. 22)ವನ್ನು ರಾಮರಾಜ್ಯ ದಿನ ಎಂದು ಘೋಷಣೆ ಮಾಡಬೇಕೆಂದು ಪ್ರಧಾನಿ ಮೋದಿಯವರನ್ನು ಪ್ರವೀಣ್ ಖಂಡೇಲ್ವಾಲ್ ಒತ್ತಾಯಿಸಿದ್ದಾರೆ. ರಾಮ ಭಾರತದ ಪ್ರಾಚೀನ ಸಂಸ್ಕೃತಿ, ನಾಗರಿಕತೆ ಮತ್ತು ಘನತೆಯ ಸಂಕೇತ. ಮಾತ್ರವಲ್ಲ, ಸನಾತನ ಆರ್ಥಿಕತೆಯ ಬೇರುಗಳು ಭಾರತದಲ್ಲಿ ಬಹಳ ಆಳವಾಗಿವೆ ಎಂಬುದು ಈ ಸಮಾರಂಭದಿಂದ ತಿಳಿಯುತ್ತಿದೆ ಎಂದು ಕಾರಣವನ್ನೂ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts