ಬಜೆಟ್​ನಲ್ಲಿ ಬದಲಾವಣೆ ಅನಿವಾರ್ಯ:ವಿಜಯವಾಣಿ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ

Yediyurappa 21 Dec 19
Published on
ಕಳೆದ ವರ್ಷ ಅರ್ಧ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ತತ್ತರಿಸಿದ್ದ ರಾಜ್ಯಕ್ಕೆ ಈ ವರ್ಷ ಕರೊನಾ ಬಂದು ವಕ್ಕರಿಸಿದೆ. ನೆರೆ ಪೀಡಿತ ಪ್ರದೇಶಗಳಲ್ಲಿನ ಜನ ಎಲ್ಲವನ್ನೂ ಕಳೆದುಕೊಂಡು ಬರಿಗೈ ಆಗಿದ್ದರಿಂದ ಅಭಿವೃದ್ಧಿ ಯೋಜನೆಗಳ ಅನುದಾನಗಳಿಗೆ ಕತ್ತರಿ ಹಾಕಿ ಅಗತ್ಯ ನೆರವು ನೀಡಲಾಗಿತ್ತು. ಆ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಇದೀಗ ಕರೊನಾ ಮಹಾಮಾರಿ ಜನರನ್ನು ಕಂಗೆಡಿಸಿದ್ದು, ಸರ್ಕಾರಕ್ಕೂ ದಿಕ್ಕು ತೋಚದಂತೆ ಮಾಡಿದೆ. ಒಂದಿಡೀ ತಿಂಗಳಿಂದ ಇಡೀ ರಾಜ್ಯ ಸ್ತಬ್ಧಗೊಂಡಿದ್ದು, ಸರ್ಕಾರಕ್ಕೆ ನಿತ್ಯ ಕೋಟ್ಯಂತರ ರೂ. ನಷ್ಟ ಸಂಭವಿಸುತ್ತಿದೆ. ಸರ್ಕಾರದ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ಇಂಥ ಹೊತ್ತಲ್ಲಿ ರಾಜ್ಯದ ಪರಿಸ್ಥಿತಿ ಹೇಗಿದೆ? ಮುಂದಿನ ಯೋಜನೆಗಳೇನು ಎಂಬ ಕುರಿತಾಗಿ ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ವಿಜಯವಾಣಿ ಜತೆ ಮಾತನಾಡಿದ್ದಾರೆ.

ಲಾಕ್​ಡೌನ್ ಮುಗಿದ ನಂತರವೇ ನಿಮ್ಮ ಮುಂದೆ ನಿಜವಾದ ಸವಾಲು ಆರಂಭವಾಗುತ್ತದೆ, ಅದನ್ನು ಎದುರಿಸಲು ಹೇಗೆ ಸಿದ್ಧರಾಗಿದ್ದೀರಿ?

ಸಂಸದರ ನಿಧಿಯಲ್ಲಿಯೇ ಹಣ ಕಡಿತ ಮಾಡಿರುವುದನ್ನು ನೋಡಿದಾಗ ಕೇಂದ್ರ ಹಾಗೂ ರಾಜ್ಯದ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ಅರ್ಥವಾಗುತ್ತದೆ. ಮುಂದಿನ ಆರು ತಿಂಗಳ ಕಾಲ ಎಲ್ಲ ಅಭಿವೃದ್ಧಿಯನ್ನು ಮರೆಯಬೇಕಾಗುತ್ತದೆ. ಸಂಬಳ, ಪಿಂಚಣಿ, ನಿವೃತ್ತಿ ವೇತನ, ಬಡವರಿಗೆ ಆಹಾರ ಧಾನ್ಯ ವಿತರಣೆಗೆ ನಾವು ಸೀಮಿತವಾಗಬೇಕಾಗುತ್ತದೆ. ಕಟ್ಟಡ ಕಾರ್ವಿುಕರಿಗೆ ಈಗಾಗಲೇ 2 ತಿಂಗಳ ಪ್ರೋತ್ಸಾಹ ಧನ ಬಿಡುಗಡೆಗೆ ಆದೇಶ ನೀಡಲಾಗಿದೆ. ಸಾಮಾಜಿಕ ಪಿಂಚಣಿ ಸಹ ಎರಡು ತಿಂಗಳ ಮೊತ್ತ ನೀಡುತ್ತಿದ್ದೇವೆ. ಕೃಷಿ ಸಮ್ಮಾನ್​ನಲ್ಲಿ ರೈತರಿಗೆ ಏ. 10ರೊಳಗೆ 2 ಸಾವಿರ ರೂ. ಪಾವತಿಸುತ್ತೇವೆ. ಸಂಘ ಸಂಸ್ಥೆಗಳು ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಸರ್ಕಾರಕ್ಕೆ ದೇಣಿಗೆ ನೀಡುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಜನ ಕೈ ಜೋಡಿಸಿದ್ದಾರೆ. ಇಂತಹ ಸಹಕಾರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಿರೀಕ್ಷೆ ಮಾಡುತ್ತಿದ್ದೇವೆ.

ಈಗಾಗಲೇ ಅಂಗೀಕಾರವಾಗಿರುವ ಬಜೆಟ್​ನಲ್ಲಿ ಏನಾದರೂ ಬದಲಾವಣೆ ಮಾಡುವಿರಾ?

ವಿಧಾನಮಂಡಲದಲ್ಲಿ ಒಂದು ವರ್ಷಕ್ಕೆ ಬಜೆಟ್​ಗೆ ಅಂಗೀಕಾರ ಸಿಕ್ಕಿದೆ. ಆದರೆ ಈಗ ಅನಿರೀಕ್ಷಿತ ಪರಿಸ್ಥಿತಿ ಎದುರಾಗಿರುವ ಕಾರಣ, ಬಜೆಟ್​ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾಗಿದೆ. ಯಾವ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೋ ಅವುಗಳನ್ನು ಮಾತ್ರ ಜಾರಿ ಮಾಡುತ್ತೇವೆ. ಆ ಬಗ್ಗೆ ಲಾಕ್​ಡೌನ್ ಮುಗಿದ ನಂತರ ಸ್ಪಷ್ಟ ತೀರ್ಮಾನ ಕೈಗೊಳ್ಳುತ್ತೇವೆ.

15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಕೇಂದ್ರದ ಮೇಲೆ ಒತ್ತಡ ತರುವಿರಾ? ಸರ್ವಪಕ್ಷ ನಿಯೋಗ ಏನಾದರೂ ತೆಗೆದುಕೊಂಡು ಹೋಗುವಿರಾ?

ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದು ವಿವರಿಸಲಾಗಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಏನು ಎಂಬುದರ ಸ್ಪಷ್ಟ ಅರಿವು ಅವರಿಗೆ ಇದೆ. ಪ್ರಧಾನ ಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹಣಕಾಸಿನ ಪರಿಸ್ಥಿತಿ ಅಲ್ಲಿಯೂ ಸುಧಾರಣೆಯಾಗಬೇಕಾಗಿದೆ. ಸರ್ವಪಕ್ಷ ನಿಯೋಗವನ್ನು ತೆಗೆದುಕೊಂಡು ಹೋಗುವ ಅಗತ್ಯವೇನು ಇಲ್ಲ.

ಕೇಂದ್ರದಿಂದ ರಾಜ್ಯಕ್ಕೆ 11 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ಬರುವುದು ಬಾಕಿ ಇದೆ, ಅದಾದರೂ ಬಂದಿದ್ದರೆ, ಇಂತಹ ಸಂಕಷ್ಟದಲ್ಲಿ ನೆರವಾಗುತ್ತಿತ್ತು?

ಕೇಂದ್ರದಿಂದ ಬರುವ ಬಾಕಿಯ ಬಗ್ಗೆ ಈಗಾಗಲೇ ವಿಧಾನಮಂಡಲದಲ್ಲಿ ನಾನು ಹೇಳಿದ್ದೇನೆ. ಮತ್ತೆ ಆ ಬಗ್ಗೆ ಚರ್ಚೆ ಮಾಡಲು ನಾನು ಇಚ್ಛಿಸುವುದಿಲ್ಲ. ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂಬ ವಿಶ್ವಾಸದಲ್ಲಿದ್ದೇನೆ. ನೋಡೋಣ ಏನಾಗುತ್ತದೆಯೋ. ಕೇಂದ್ರ ಸರ್ಕಾರ ತನ್ನ ಇತಿಮಿತಿಯಲ್ಲಿ 1.7 ಲಕ್ಷ ರೂ.ಗಳ ವಿಶೇಷ ಪ್ಯಾಕೇಜ್ ನೀಡಿರುವುದರಿಂದ ಬಡವರಿಗೆ ಅನುಕೂಲವಾಗುತ್ತದೆ.

ಪ್ರತಿಪಕ್ಷಗಳ ಸಹಕಾರ ಹೇಗಿದೆ?

ಎಲ್ಲ ಪ್ರತಿಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಿವೆ. ಮಾಜಿ ಪ್ರಧಾನಿ ದೇವೇಗೌಡರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನುಭವದ ಆಧಾರದಲ್ಲಿ ಸಲಹೆಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ ಎಷ್ಟು ಜಾರಿಗೆ ತರಬಹುದು ಅಷ್ಟನ್ನು ತರಲಾಗುತ್ತಿದೆ. ದೇವೇಗೌಡರ ಪತ್ರಗಳಿಗೆ ಉತ್ತರ ನೀಡುತ್ತಿದ್ದೇನೆ.

ನೇಕರು ಕ್ವಾರಂಟೈನ್​ಗೆ ಒಳಗಾಗುತ್ತಿಲ್ಲ?

ನಮ್ಮ ವಾರ್​ರೂಂ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಸಾವಿರಾರು ಜನರನ್ನು ಕ್ವಾರಂಟೈನ್​ನಲ್ಲಿ ಇಡುವುದಕ್ಕೆ ಸಾಧ್ಯವಾಗಿದೆ. ದೇಶದಲ್ಲಿಯೇ ಮೊಟ್ಟ ಮೊದಲ ವಾರ್ ರೂಂ ನಮ್ಮದು. ಜಿಯೋ ಫೆನ್ಸಿಂಗ್ಸ್ ಎಂಬ ತಂತ್ರಜ್ಞಾನದ ಮೂಲಕ ಕ್ವಾರಂಟೈನ್​ನಲ್ಲಿರುವವರನ್ನು ಗುರುತಿಸುತ್ತಿದ್ದೇವೆ. ಕ್ವಾರಂಟೈನ್​ನಲ್ಲಿರುವವರು ತಪ್ಪಿಸಿಕೊಳ್ಳದಂತೆ ವಾರ್ ರೂಂ.ಗಳು ನಿಯಂತ್ರಣ ಮಾಡುತ್ತಿವೆ.

ಸಚಿವರ ನಡುವೆಯೇ ಸಮನ್ವಯವೇ ಇಲ್ಲವಲ್ಲ?

ಇಲ್ಲ ಈ ರೀತಿಯ ವದಂತಿಗಳು ಸತ್ಯಕ್ಕೆ ದೂರ. ಎಲ್ಲ ಸಚಿವರು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಫ್ರಿಯಾಗಿ ಇರುತ್ತಾರೆ ಎಂಬ ಕಾರಣಕ್ಕೆ ಸುರೇಶ್​ಕುಮಾರ್ ಅವರಿಗೆ ಮಾಧ್ಯಮಗಳಿಗೆ ಬ್ರಿಪ್ ಮಾಡುವ ಜವಾಬ್ದಾರಿ ನೀಡಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ.

ಕೃಷಿ ವಲಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ?

ಮುಂದಿನ ಮುಂಗಾರಿಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲು ಸೂಚಿಸಿದ್ದೇನೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲು ಸೂಚಿಸಿದ್ದೇನೆ. ಕೃಷಿಯಲ್ಲಿ ಯಾವುದೇ ನಷ್ಟವಾಗದಂತೆ ಕ್ರಮ ಕೈಗೊಳ್ಳುತ್ತೇವೆ.

ಅನೇಕ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗೆ ಹೋಗುತ್ತಿಲ್ಲ?

ಎರಡು ದಿನಗಳ ಹಿಂದೆ ಎಲ್ಲ ಉಸ್ತುವಾರಿ ಕಾರ್ಯದರ್ಶಿಗಳಿಗೂ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ. ತಕ್ಷಣ ಜಿಲ್ಲೆಗಳಿಗೆ ಹೋಗಿ ಅಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಹೇಳಿದ್ದೇನೆ. ಯಾವುದೇ ಅಧಿಕಾರಿ ನಿರ್ಲಕ್ಷ್ಯ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಚಿವರು ಸಹ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಹೋಗುವಂತೆ ಹೇಳಿದ್ದೇನೆ.

ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಏನೇನು ಮಾಡುತ್ತೀದ್ದೀರಿ?

ಆ ನಿಟ್ಟಿನಲ್ಲಿ ಇನ್ನೂ ಚರ್ಚೆ ಆರಂಭಿಸಿಲ್ಲ. ಆದರೆ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕಾಗಿದೆ. ಆದ್ದರಿಂದಲೇ ಸಧ್ಯದಲ್ಲಿಯೇ ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುವವನಿದ್ದೇನೆ.

ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಮುಕ್ತ ಅವಕಾಶ

ಕೃಷಿ ಉತ್ಪನ್ನಗಳ ಸಾಗಾಟಕ್ಕೆ ತೊಂದರೆ ಇದೆ ಎಂಬ ದೂರುಗಳಿವೆ?

ಕೃಷಿ ಉತ್ಪನ್ನಗಳು, ಹಣ್ಣು, ತರಕಾರಿಯನ್ನು ಜಿಲ್ಲೆಯಿಂದ ಜಿಲ್ಲೆಗೆ ಸರಬರಾಜು ಮಾಡಲು ಅವಕಾಶ ನೀಡಿದ್ದೇವೆ. ಆದ್ದರಿಂದ ಜನರಿಗೂ ಕಡಿಮೆ ಬೆಲೆಗೆ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ಪಾಸ್​ನ ಅಗತ್ಯವಿಲ್ಲ.

ಕಂತು ಪಾವತಿ ಹಾಗೂ ಬಾಡಿಗೆಗೆ ಒತ್ತಾಯ ನಿಂತಿಲ್ಲ

ಸಾಲದ ಕಂತಿಗೆ ಒತ್ತಾಯ ಮಾಡದಂತೆ ಖಾಸಗಿ ಫೈನಾನ್ಸ್ ಕಂಪೆನಿಗಳಿಗೂ ಸೂಚಿಸಲಾಗಿದೆ. ಅದೇ ರೀತಿ ಮನೆ ಮಾಲೀಕರಿಗೆ ಬಾಡಿಗೆಗೆ ಒತ್ತಾಯಿಸದಂತೆ ಹೇಳಿದ್ದೇನೆ. ಸರ್ಕಾರದ ಆದೇಶ ಮೀರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net