ಮಹಾರಾಷ್ಟ್ರ ಸಿಎಂ ಮನೆ ಬಾಗಿಲಿಗೆ ಬಂತು ಕೋವಿಡ್​ 19, ಸಿಬ್ಬಂದಿ ಚಹಾ ಕುಡಿಯುವ ಅಂಗಡಿ ಮಾಲಿಕನಿಗೆ ಕರೊನಾ ಸೋಂಕು

udhav
Published on

ಮುಂಬೈ: ಸಾಕಷ್ಟು ರಾಜಕೀಯ ಜಟಾಪಟಿಯ ಬಳಿಕ ಮಹಾರಾಷ್ಟ್ರದ ಸಿಎಂ ಗಾದಿಯನ್ನು ಒಲಿಸಿಕೊಂಡಿರುವ ಉದ್ಧವ್​ ಠಾಕ್ರೆ ಅವರ ಮನೆ ಬಾಗಿಲಿಗೇ ಕೋವಿಡ್​ 19 ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮಾತೋಶ್ರೀ ಸುತ್ತಮುತ್ತಲಿನ ಪ್ರದೇಶದಲ್ಲಿ ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​ ಮತ್ತು ಮುಂಬೈ ಪೊಲೀಸರು ಜನಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದ್ದಾರೆ.

ಮಾತೋಶ್ರೀ ಎದುರಿಗೆ ಇದ್ದ ಚಹಾ ಅಂಗಡಿಯಲ್ಲಿ ಸಿಎಂ ಮನೆಯ ಸಿಬ್ಬಂದಿ ಅಲ್ಲದೆ ಅವರ ಬೆಂಗಾವಲು ಪಡೆ ಸಿಬ್ಬಂದಿ ಎಲ್ಲರೂ ಚಹಾ ಕುಡಿಯುತ್ತಿದ್ದರು. ಇದೀಗ ಆ ಅಂಗಡಿಯ ಮಾಲೀಕನಿಗೇ ಕರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ಚಹಾ ಅಂಗಡಿಯ ಮಾಲಿಕ ಕಳೆದ ನಾಲ್ಕು ದಿನಗಳಿಂದ ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿದ್ದು, ಕರೊನಾ ಸೋಂಕಿನ ಕುರುಹು ತೋರಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಜೋಗೇಶ್ವರಿಯಲ್ಲಿರುವ ಹೃದಯ ಸಾಮ್ರಾಟ್​ ಬಾಳಾ ಸಾಹೇಬ್​ ಠಾಕ್ರೆ ಟ್ರೌಮಾ ಕೇರ್​ ಮುನ್ಸಿಪಲ್​ ಹಾಸ್ಪಿಟಲ್​ಗೆ ದಾಖಲಿಸಲಾಗಿತ್ತು. ಆತನ ಗಂಟಲ ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆತನಿಗೆ ನೋವೆಲ್​ ಕರೊನಾ ವೈರಸ್​ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ದರಿಂದ ಈ ಪ್ರದೇಶದಲ್ಲಿ ಜನ ಮತ್ತು ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net