

ಬೆಂಗಳೂರು: ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ದೆಹಲಿಗೆ ತೆರಳಿದ್ದು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ವದಂತಿಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ. ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ವರಿಷ್ಠರು ಬೊಮ್ಮಾಯಿ ಜತೆ ಚರ್ಚೆ ನಡೆಸಲಿದ್ದಾರೆ.
ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಸಂಪುಟ ಪುನಾರಚನೆ ಕೈಬಿಡಲಾಗಿದೆ. ರಾಜ್ಯಸಭೆ ಚುನಾವಣೆಯ ನಂತರ ಸಂಪುಟ ವಿಸ್ತರಣೆ ಮಾತ್ರ ಮಾಡಲಾಗುತ್ತದೆ. ಸಂಪುಟದಲ್ಲಿ ಐದು ಸ್ಥಾನ ಖಾಲಿ ಇದ್ದು, ಅದರಲ್ಲಿ ಮೂರು ಸ್ಥಾನ ಮಾತ್ರ ಭರ್ತಿ ಮಾಡಲಾಗುತ್ತದೆ. ಒಂದು ಸ್ಥಾನಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಿ.ಪಿ. ಯೋಗೇಶ್ವರ್ ಅವರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಮೂರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ ಎರಡು ಸ್ಥಾನಗಳನ್ನು ಖಾಲಿ ಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಉಳಿದಂತೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಗೊಂದಲದ ಬಗ್ಗೆಯೂ ವರಿಷ್ಠರು ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಅವರ ಆಯ್ಕೆಗೆ ಇರುವ ವಿರೋಧ, ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ನಾಲ್ಕು ಸ್ಥಾನಗಳ ಆಯ್ಕೆಗೆ ರಾಜ್ಯ ಘಟಕ ಶಿಫಾರಸು ಮಾಡಿರುವ 25 ಹೆಸರುಗಳು ಹಾಗೂ ಸಂಘದಿಂದ ಬಂದಿರುವ ಪಟ್ಟಿಯನ್ನು ಇಟ್ಟುಕೊಂಡು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಬೊಮ್ಮಾಯಿ ಚೊಚ್ಚಲ ವಿದೇಶ ಪ್ರವಾಸ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಚೊಚ್ಚಲ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆಯಲಿರುವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವರು. ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ 10.35ಕ್ಕೆ ಪ್ರಯಾಣ ಬೆಳೆಸುವರು. ಮಧ್ಯಾಹ್ನ ದುಬೈಗೆ, ಅಲ್ಲಿಂದ ಜುರಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವರು. ಜುರಿಚ್ನಿಂದ ರಸ್ತೆ ಮಾರ್ಗವಾಗಿ ದಾವೋಸ್ಗೆ ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಮೇ 23 ಮತ್ತು 24ರಂದು ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಕರ್ನಾಟಕದ ಬೆಳವಣಿಗೆ, ಹೂಡಿಕೆಗೆ ಇರುವ ಅವಕಾಶ ಕುರಿತು ವಿಚಾರ ಪ್ರಸ್ತುತ ಪಡಿಸುವರು. ಮೇ 25ರ ಬೆಳಗ್ಗೆ ದಾವೋಸ್ನಿಂದ ಹೊರಟು ಮೇ 26ಕ್ಕೆ ಹಿಂತಿರುಗಲಿದ್ದಾರೆ.
ಜೋಶಿ ನಿವಾಸಕ್ಕೆ ಭೇಟಿ: ಶುಕ್ರವಾರ ಸಂಜೆ ವೇಳೆ ದೆಹಲಿಗೆ ಬಂದಿಳಿದ ಸಿಎಂ, ನೇರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ದೆಹಲಿಗೆ ಬಂದಾಗಲೆಲ್ಲಾ ಜೋಶಿ ನಿವಾಸಕ್ಕೆ ತಪ್ಪದೆ ಭೇಟಿ ಅವರು ನೀಡುತ್ತಿರುತ್ತಾರೆ. ಶುಕ್ರವಾರ ತಡರಾತ್ರಿ ಗೃಹ ಸಚಿವ ಅಮಿತ್ ಷಾ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಹಠಾತ್ತಾಗಿ ಅವರು ದೆಹಲಿಗೆ ಬಂದಿರುವುದು ಏಕೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ಟಿಕೆಟ್ ಅಂತಿಮಗೊಳಿಸಲು ಅಥವಾ ಸಂಪುಟ ಪುನರ್ ರಚನೆಗೆ ಚರ್ಚೆಗೆ ಬಂದಿರಬಹುದು ಎಂಬ ಮಾತುಗಳಿವೆ. ಆದರೆ ದಾವೋಸ್ ಭೇಟಿಗೆ ಒಂದು ದಿನ ಮುನ್ನ ದಿಢೀರನೆ ಬಂದು ಈ ವಿಷಯಗಳ ಬಗ್ಗೆ ರ್ಚಚಿಸುವ ಅಗತ್ಯವಿತ್ತೇ? ಯಾವುದೋ ಮಹತ್ವದ ವಿಚಾರದ ಬಗ್ಗೆ ರ್ಚಚಿಸಲೆಂದೇ ಸಿಎಂರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರ ಸಿಎಂ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಹೇಳಲಾಗಿದೆ.