

ಬಳ್ಳಾರಿ: ಇಂದು ಸಂಡೂರು ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿರಲು ಸಾಧ್ಯ ಇಲ್ಲ. ನಮ್ಮ ತೆರಿಗೆ – ನಮ್ಮ ಹಕ್ಕು ಎನ್ನುವ ನಮ್ಮ ಹೋರಾಟಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಲು ಮುಂದೆ ಬರಬೇಕಾಗಿದೆ ಎಂದು ಹೇಳಿದರು (CM Against BJP).
"ಕರ್ನಾಟಕ ರಾಜ್ಯದಿಂದ ಪ್ರತಿವರ್ಷ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಸಂದಾಯವಾಗುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನ ಬೆವರಿನ ಗಳಿಕೆ. ಆದರೆ ಕೇಂದ್ರ ಸರ್ಕಾರ ನಮಗೆ ನೀಡುತ್ತಿರುವ ತೆರಿಗೆ ಪಾಲು ಅಂದಾಜು 60,000 ಕೋಟಿ ರೂಪಾಯಿ ಮಾತ್ರ. ನಾವು ಕೊಡುವ ಒಂದು ರೂಪಾಯಿ ತೆರಿಗೆಗೆ ವಾಪಸು ನಮಗೆ ಸಿಗುತ್ತಿರುವುದು ಕೇವಲ 15 ಪೈಸೆ. ಈ ಅನ್ಯಾಯದ ವಿರುದ್ಧ ಕನ್ನಡಿಗರೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ" ಎಂದರು.
"ಕೇಂದ್ರದ ಎನ್‌ಡಿಎ ಸರ್ಕಾರ ಇತ್ತೀಚೆಗೆ ದೇಶದ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂ. ಬಿಡುಗಡೆಗೊಳಿಸಿದೆ. ಇದರಲ್ಲಿ ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂ. ಇದರಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ 31,962 ಕೋಟಿ, ಬಿಹಾರಕ್ಕೆ 17,921 ಕೋಟಿ, ಮಧ್ಯಪ್ರದೇಶಕ್ಕೆ 13,987 ಕೋಟಿ ಮತ್ತು ರಾಜಸ್ತಾನಕ್ಕೆ 10,737 ಕೋಟಿ ರೂ.ನಷ್ಟು ತೆರಿಗೆ ಪಾಲನ್ನು ನೀಡಲಾಗಿದೆ. ಇದು ನ್ಯಾಯವೇ?" ಎಂದು ಪ್ರಶ್ನಿಸಿದರು.
"ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ. 17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ. 3.64 ಮಾತ್ರ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಕಳೆದ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿದ್ದ 25 ಸದಸ್ಯರಿದ್ದರು. ಇವರಲ್ಲಿ ಯಾರೋಬ್ಬರಾದರೂ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ದನಿ ಎತ್ತಿದ್ದಾರೆಯೇ? ಈ ಬಾರಿ ಕಮಲ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿರುವ 19 ಸಂಸದರಿದ್ದಾರೆ. ಇವರು ಒಂದು ದಿನವಾದರೂ ಲೋಕಸಭೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪಿಸಿದ್ದಾರೆಯೇ?" ಎಂದು ಹೇಳಿದರು.
"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಹಣ ಮೀಸಲಿಡುವ ಐತಿಹಾಸಿಕ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತಂದಿರುವುದು ನಮ್ಮ ಸರ್ಕಾರ. ಪ್ರಸಕ್ತ ಸಾಲಿನ ನಮ್ಮ ಸರ್ಕಾರದ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ, ಅದರಲ್ಲಿ 39,121 ಕೋಟಿ ರೂ. ಅನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ನಾವು ದಲಿತರ ಪರ ಎಂದು ಭಾಷಣ ಮಾಡುತ್ತಾರೆ. ಹಾಗಿದ್ದರೆ ಇಡೀ ರಾಷ್ಟ್ರಮಟ್ಟದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಯಾಕೆ ಜಾರಿಗೆ ತರುತ್ತಿಲ್ಲ? ಇದಕ್ಕೆ ನರೇಂದ್ರ ಮೋದಿ, ಅಮಿತ್ ಶಾ, ಆರ್. ಅಶೋಕ, ವಿಜಯೇಂದ್ರ ಮೊದಲಾದ ನಾಯಕರು ಏನು ಹೇಳುತ್ತಾರೆ?" ಎಂದರು.
"ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ನಮ್ಮ ಪಾಲು ವಾಪಾಸ್ ಪಡೆಯುವುದರಲ್ಲಿ ಕೊನೆ ಸ್ಥಾನದಲ್ಲಿದೆ. ಈ. ತುಕಾರಾಮ್ ಅವರು ಈ ಬಾರಿ ಶಾಸಕರಾದ ಬಳಿಕ 1,200 ಕೋಟಿ ರೂ. ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್. ತುಕಾರಾಮ್ ಎಂದರೆ ಅಭಿವೃದ್ಧಿ. ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್ - ಈ.ತುಕಾರಾಮ್ ಜೋಡಿಗೆ ಸಲ್ಲಬೇಕು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಈ.ತುಕಾರಾಮ್ ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ತುಕಾರಾಮ್ ಅವರಂತಹ ಕಾಯಕಜೀವಿ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದವನ್ನು ಮುಂದುವರೆಸಬೇಕು ಎಂದು ಮನವಿ ಮಾಡುತ್ತೇನೆ" ಎಂದು ಜನರಲ್ಲಿ ಕೇಳಿಕೊಂಡರು.
ಇದನ್ನೂ ಓದಿ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
"ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿ ಪಕ್ಷದ ಪೆದ್ದ ಶಿಖಾಮಣಿಗಳು ಸುಳ್ಳುಗಳನ್ನು ಹಂಚುತ್ತಾ ಕುಳಿತಿದ್ದಾರೆ. ಹಾಗಿದ್ರೆ ಬರೀ ಸಂಡೂರಿನ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ ಈ.ತುಕಾರಾಮ್ 1,200 ಕೋಟಿ ರೂಪಾಯಿ ಅನುದಾನ ತರಲು ಸಾಧ್ಯವಾಗುತ್ತಿತ್ತೇ? ಸಂಡೂರಿನ ಜನರ ತೆರಿಗೆ ಹಣಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ವಂಚಿಸುತ್ತಿದೆ. ನಿಮಗೆ, ನಮಗೆ ಕೇಂದ್ರದಿಂದ ಬರಬೇಕಾದ ಹಣವನ್ನು ಕೊಡಿ ಎಂದು ನರೇಂದ್ರ ಮೋದಿ ಅವರ ಬಳಿ ಕೇಳುವ ಧೈರ್ಯ ಬಿಜೆಪಿಗೂ ಇಲ್ಲ. ವಿಜಯೇಂದ್ರಗೂ ಇಲ್ಲ. ಇದು ಸಂಡೂರಿನ ಜನತೆಗೆ, ರಾಜ್ಯದ ಜನತೆಗೆ ಬಗೆದ ದ್ರೋಹ ಅಲ್ಲವೇ?" ಎಂದು ಕೇಳಿದರು.