

ಉಡುಪಿ: ಅ.13ರ ಬುಧವಾರದಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಹಲವು ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಿ ಸಂಜೆಯೇ ಮಂಗಳೂರಿಗೆ ತೆರಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಕಾಪು ತಾಲೂಕಿನ ಅದಮಾರುಗೆ ಆಗಮಿಸಲಿರುವ ಸಿಎಂ, ಪೂರ್ಣಪ್ರಜ್ಞಾ ಪದವಿ ಕಾಲೇಜಿನ ಕಟ್ಟಡ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 12:30ಕ್ಕೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಲಿದ್ದು, ನಂತರ ಉಡುಪಿ ನಗರದ ಪಿಪಿಸಿ ನ್ಯೂ ಸೈನ್ಸ್ ಬ್ಲಾಕ್ ಕಟ್ಟಡ ಶಂಕುಸ್ಥಾಪನೆ ಮತ್ತು ಕಂಪ್ಯೂಟರ್ ಸೈನ್ಸ್ ಲ್ಯಾಬೊರೇಟರಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕುಂತಳ ನಗರ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಿರುವ ಸಿಎಂ ಬೊಮ್ಮಾಯಿ, 2.45 ಕ್ಕೆ ಗ್ರಾಮೀಣ ಬಂಟರ ಭವನವನ್ನು ಉದ್ಘಾಟಿಸಲಿದ್ದಾರೆ. ತದನಂತರ ಸಂಜೆ 4 ಗಂಟೆಗೆ ರಸ್ತೆ ಮೂಲಕ ಉಡುಪಿಯಿಂದ ಮಂಗಳೂರಿಗೆ ನಿರ್ಗಮಿಸಲಿದ್ದಾರೆ ಎನ್ನಲಾಗಿದೆ.