ಕಪ್ಪ-ಕಾಣಿಕೆ ಕಾಂಗ್ರೆಸ್ ಸಂಸ್ಕೃತಿ; ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಟಾಂಗ್

Bommai
ಹೂವಿನಹಡಲಿಯಲ್ಲಿ ಗುರುವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷ ನಿಷ್ಠೆಯ ಪ್ರತಿಜ್ಞೆ ಭೋದಿಸಿದರು.
Published on

ಹೊಸಪೇಟೆ/ ಸಿರಗುಪ್ಪ: ಕಪ್ಪ ಕಾಣಿಕೆ ಸಂಸ್ಕೃತಿ ಕಾಂಗ್ರೆಸ್​ನದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ಗೆ ಟಾಂಗ್ ನೀಡಿದರು.

ಹೊಸಪೇಟೆಯ ಹೂವಿನಹಡಗಲಿ ತಾಲೂಕು ಕ್ರೀಡಾಂಗಣ ಹಾಗೂ ಬಳ್ಳಾರಿಯ ಸಿರಗುಪ್ಪದಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿತ್ತು. ದೆಹಲಿ ನಾಯಕರ ಅಪೇಕ್ಷೆಯಂತೆ ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆಗಳು ನಡೆದರೂ, ಇಲ್ಲಿಂದ ಸೂಟ್ ಕೇಸ್​ಗಳನ್ನು ತುಂಬಿ ಕಳುಹಿಸಲಾಗುತ್ತಿತ್ತು. ಇದರ ಪರಿಣಾಮವೇ ಇಂದು ಕೆಪಿಸಿಸಿ ಅಧ್ಯಕ್ಷ ಇಡಿ, ಐಟಿ ವಿಚಾರಣೆ ಎದುರಿಸುವಂತಾಗಿದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್​ಗೆ ಕುಟುಕಿದರು.

ರಾಜಕೀಯ ಕಾರಣಗಳಿಂದ 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರದಲ್ಲಿ ಬಳ್ಳಾರಿ ನನ್ನ ತವರು ಎಂದು ಹೇಳಿಕೊಂಡಿದ್ದರು. ಆದರೆ, ಉಭಯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಸೋನಿಯಾ, ಬಳ್ಳಾರಿಗೆ ಕೈಕೊಟ್ಟರು. ಈಗ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನೆಪದಲ್ಲಿ ಮತ್ತೆ ಬಳ್ಳಾರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ನಾಡಿಗೆ ಅವರ ಕೊಡುಗೆ ಏನು ಎಂದು ಕಾಂಗ್ರೆಸ್ಸಿಗರನ್ನೇ ಪ್ರಶ್ನಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರ 85 ಪರ್ಸೆಂಟ್ ಸರ್ಕಾರ. ಹಾಗಂತ ನಾನು ಹೇಳಿಲ್ಲ. ರಾಹುಲ್ ಗಾಂಧಿ ಅವರ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ‘ನಾನು 100 ರೂ. ಹಳ್ಳಿಗೆ ಕಳಿಸಿದ್ರೆ 15 ರೂ. ಮಾತ್ರ ಹೋಗುತ್ತೆ’ ಎಂದು ಹೇಳಿದ್ದರು. ಅಂದರೆ 85 ರೂ. ಮಧ್ಯದಲ್ಲೇ ಹೊಡೆಯಲಾಗುತ್ತಿತ್ತು. ಈಗ ಹೇಳಿ ಕಾಂಗ್ರೆಸ್ ಎಷ್ಟು ಪರ್ಸೆಂಟ್ ಸರ್ಕಾರ? ಎಂದು ಪ್ರಶ್ನಿಸಿದರು. ಕಾಂಗ್ರೆಸ್​ನವರು ಭೂಕಬಳಿಕೆ ಮೂಲಕ ಭೂಮಿಯಲ್ಲಿ, 2ಜಿ ಹಗರಣದ ಮೂಲಕ ಆಕಾಶದಲ್ಲಿ, ಕಲ್ಲಿದ್ದಲು ಹಗರಣದ ಮೂಲಕ ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಅಂದು ಕೋವಿಡ್ ಇರಲಿಲ್ಲ. ಪ್ರವಾಹವೂ ಬರಲಿಲ್ಲ. ಆದರೂ 1.24 ಲಕ್ಷ ಸಾವಿರ ಕೋಟಿ ರೂ. ಸಾಲ ಮಾಡಿದ್ದರು ಎಂದರು.

ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಿಸಿದವರು ನಾವು. ತಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿದರೆ, ಯಾರೋ ಊರಿಗೆಲ್ಲಾ ಪೇಢಾ ಹಂಚಿದ್ದರಂತೆ. ಹಾಗಾಯ್ತು ಕಾಂಗ್ರೆಸ್ ಕೆಲಸ ಎಂದು ಗೇಲಿ ಮಾಡಿದರು.

ಕಾಂಗ್ರೆಸ್ ತಿರುಕನ ಕನಸು: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ತಿರುಕನ ಕನಸು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು. ಕಾಂಗ್ರೆಸ್ ನಾಯಕರು ತಲೆತಲಾಂತರಕ್ಕೆ ಸಾಕಾಗುವಷ್ಟು ಗಳಿಸಿದ್ದಾರೆ ಎಂದು ಸ್ವತಃ ಕಾಂಗ್ರೆಸ್​ನ ಹಿರಿಯ ನಾಯಕ ರಮೇಶ ಕುಮಾರ್ ಹೇಳಿದ್ದಾರೆ. ಇದು ಕಾಂಗ್ರೆಸ್ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿ. ಈ ಹೇಳಿಕೆಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆದಿಯಾಗಿ ಯಾರೂ ಅಲ್ಲಗೆಳೆದಿಲ್ಲ ಎಂದರು.

ದಲಿತರ ಮನೆಯಲ್ಲಿ ಸಿಎಂ ಉಪಾಹಾರ: ಹೂವಿನಹಡಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ದಲಿತರ ಮನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್ ಗುರುವಾರ ಉಪಾಹಾರ ಸೇವಿಸಿದರು. ನವಲಿ ಹನುಮಂತವ್ವ ಕುಟುಂಬಸ್ಥರು ಸಿದ್ಧಗೊಳಿಸಿದ್ದ ಇಡ್ಲಿ, ಸಾಂಬಾರ್ ಸವಿದರು. ಇದೇ ವೇಳೆ ಹನುಮಂತವ್ವ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಮಿಡಿದ ಸಿಎಂ, 2 ಲಕ್ಷ ರೂ. ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಕಾಂಗ್ರೆಸ್ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡದೇ ಅನ್ಯಾಯ ಮಾಡಿದೆ. ಸಿದ್ದರಾಮಯ್ಯ ಡಾ.ಪರಮೇಶ್ವರ ಅವರನ್ನು ಸೊಲಿಸಿದರು. ಆದರೆ, ಬಿಜೆಪಿ ಸರ್ಕಾರ ದಲಿತ ಸಮುದಾಯದ ದ್ರೌಪದಿ ಮುಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ದೆಹಲಿಯಿಂದ 1 ರೂ. ಕೊಟ್ಟರೆ ನಾಲ್ಕಾಣೆ ಬರ್ತಾ ಇತ್ತು. ಈಗ ನೇರವಾಗಿ ಎಲ್ಲ ಹಣವೂ ಅವರವರ ಖಾತೆಗೆ ಜಮಾ ಆಗ್ತಾ ಇದೆ. ಈ ವ್ಯವಸ್ಥೆ ತಂದ ಪ್ರಧಾನಿ ನರೇಂದ್ರ ಮೋದಿ ಒಬ್ಬ ದೈವಿ ಪುರುಷ.

| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net