ಒಳೇಟುಗಳಿಗೆ ತವರಲ್ಲಿ ತತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

State 9
ಅತ್ತ ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕಾವು ಕ್ಷಣಕ್ಕೊಮ್ಮೆ ಏರಿಳಿತ ಕಾಣುತ್ತಿದ್ದ ಹೊತ್ತಿನಲ್ಲೇ ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕೆಆರ್​ಎಸ್ ಜಲಾಶಯಕ್ಕೆ ಭೇಟಿ ನೀಡಿ, ಬಾಗಿನ ಅರ್ಪಿಸಿದರು. ಸಚಿವರಾದ ಗೋವಿಂದ ಕಾರಜೋಳ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಇತರರು ಸಾಥ್ ನೀಡಿದರು.
Published on

| ಶಿವಾನಂದ ತಗಡೂರು ಬೆಂಗಳೂರು

ಪ್ರತಿಷ್ಠೆ ಕಣವಾಗಿದ್ದ ಹಾನಗಲ್​ನಲ್ಲಿ ಬಿಜೆಪಿ ಸೋಲು ಅನಾಥವಾಗಿದ್ದರೆ, ಸಿಂದಗಿ ಗೆಲುವಿನ ಕ್ರೆಡಿಟ್ ಪಡೆಯಲು ಹತ್ತಾರು ನಾಯಕರು ಮುಂಚೂಣಿಯಲ್ಲಿದ್ದಾರೆ. ತವರು ಜಿಲ್ಲೆ ಹಾನಗಲ್ ಸೋಲಿನ ಕರಿ ನೆರಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಬಿದ್ದಿದೆ. ಶಿಗ್ಗಾವಿ ಕ್ಷೇತ್ರದ ಪಕ್ಕದಲ್ಲಿಯೇ ಇರುವ ಹಾನಗಲ್​ಗೂ ಬೊಮ್ಮಾಯಿಗೂ ಅವಿನಾಭವ ಸಂಬಂಧವಿದೆ. ಸಿಎಂ ಅಜ್ಜಿ ಮತ್ತು ಪತ್ನಿ ಅಕ್ಕಿ ಆಲೂರಿನವರು. ಆ ಕಾರಣಕ್ಕೆ ಭಾವನಾತ್ಮಕ ಸೆಳೆತದಿಂದ ಕ್ಷೇತ್ರ ಉಳಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರವನ್ನು ಅಲ್ಲಿನ ಮತದಾರರು ತಲೆಕೆಳಗು ಮಾಡಿರುವುದು ಸರ್ಕಾರಕ್ಕಷ್ಟೇ ಅಲ್ಲ, ಪಕ್ಷದೊಳಗೂ ಅರಗಿಸಿಕೊಳ್ಳಲಾರದ ಸಂಗತಿಯಾಗಿದೆ.

ಬಿಜೆಪಿಯೊಳಗಿನ ಒಳೇಟುಗಳೇ ಮುಖ್ಯಮಂತ್ರಿಗೆ ಮುಳುವಾಗಿವೆ. ರಾಜಕೀಯ ಆಕಸ್ಮಿಕ ಘಟನೆಯಲ್ಲಿ ಪರಿಸ್ಥಿತಿಯ ಲಾಭ ಬಸವರಾಜ ಬೊಮ್ಮಾಯಿ ಪರ ಬಂದ ಕಾರಣ ಅವರು ಸಿಎಂ ಆಗಲು ಕಾರಣ ಎನ್ನುವುದು ಸತ್ಯದ ಸಂಗತಿ. ಅವರ ನೇತೃತ್ವದಲ್ಲಿ ಈ ಎರಡೂ ಚುನಾವಣೆಗಳನ್ನು ಗೆದ್ದರೆ, ನಾಯಕತ್ವ ಮತ್ತಷ್ಟು ಗಟ್ಟಿಗೊಂಡರೆ ಮುಂದೆ ತಮ್ಮ ಭವಿಷ್ಯಕ್ಕೆ ಮುಳುವಾಗಲಿದೆ ಎನ್ನುವ ಹಲವು ರಾಜಕೀಯ ಲೆಕ್ಕಾಚಾರಗಳೂ ಸೋಲಿಗೆ ಕಾರಣವಾಗಿರಲಿಕ್ಕುಂಟು.

ಸೋಲಿನ ಹೊಣೆ ಯಾರದ್ದು?: ಬಿಜೆಪಿ ಸೋಲಿನ ಹೊಣೆಯನ್ನು ಯಾರ ತಲೆಗೆ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷದೊಳಗೆ ಪೈಪೋಟಿ ಚರ್ಚೆಗಳು ನಡೆಯುತ್ತಿವೆ. ತವರು ಜಿಲ್ಲೆಯಾದ ಕಾರಣ ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅವರೇ ಹೊರಬೇಕು ಎನ್ನುವ ತರ್ಕಗಳು ವ್ಯಕ್ತವಾಗಿವೆ. ಒಂದು ಹಂತದಲ್ಲಿ ಫಲಿತಾಂಶವನ್ನು ಬಿಎಸ್​ವೈ ತಲೆಗೆ ಕಟ್ಟಲು ಪ್ರಯತ್ನ ನಡೆದಿತ್ತು. ಅದನ್ನು ಒಪ್ಪುವ ಸ್ಥಿತಿಯಲ್ಲಿ ಯಾರೂ ಇಲ್ಲ ಎನ್ನುವ ಹಿನ್ನೆಲೆಯಲ್ಲಿ ಸೋಲು ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಸುತ್ತಲೇ ಸುತ್ತುತ್ತಿದೆ.

ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದರೂ ಹಾನಗಲ್​ನಲ್ಲಿ ನಮಗೆ ನಿರೀಕ್ಷಿಸಿದಷ್ಟು ಮತಗಳು ಸಿಕ್ಕಿಲ್ಲ. ಹಾನಗಲ್​ನಲ್ಲಿ ಉದಾಸಿ ಅವರಿಗೆ ಸಲ್ಲಬೇಕಿದ್ದ ಮತಗಳನ್ನು ಪಡೆದುಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ 2-3 ವರ್ಷದಲ್ಲಿ ಮಾಡಿರುವ ಕೆಲಸಗಳಿಗೆ ಅಲ್ಲಿನ ಜನರು ಕೈ ಹಿಡಿದಿದ್ದಾರೆ. ಹೀಗಾಗಿ ಬಿಜೆಪಿಗೆ ಹಿನ್ನಡೆಯಾಗಿದೆ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net